ಆರೋಗ್ಯ / HEALTH

ಚಿತ್ರದುರ್ಗ ಜಿಲ್ಲೆಯಲ್ಲಿ ಯಾವ್ದೇ ಕೊರೊನಾ ಸೊಂಕಿಲ್ಲ

Published

on

ಚಿತ್ರದುರ್ಗ:ಎಲ್ಲೆಡೆ ತಾಂಡವವಾಡ್ತಿರುವ ಕೊರೋನ ವೈರಸ್ ನಿಂದಾಗಿ ಜನರು ಭಯಭೀತರಾಗಿದ್ದಾರೆ.ಆದರೆ ಚಿತ್ರದುರ್ಗ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿಗೆ(ಕೋವಿಡ್-19)ಸಂಬಂಧಿಸಿದಂತೆ, ಭೀಮಸಮುದ್ರದಲ್ಲಿ ವರದಿಯಾಗಿದ್ದ ಒಂದು ಪ್ರಕರಣ ಹೊರತುಪಡಿಸಿ, ಇದುವರೆಗೂ ಬೇರೆ ಯಾವುದೇ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿಲ್ಲ ಹೀಗಾಗಿ ಕೋಟೆನಾಡಿನ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಫಾಲಾಕ್ಷ ಹೇಳಿದರು.
ಚಿತ್ರದುರ್ಗದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಕೋವಿಡ್-19 ಗೆ ಸಂಬಂಧಿಸಿದಂತೆ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕೊರೊನಾ ವೈರಸ್ ಸೋಂಕಿಗೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಲ್ಲಿಯವರೆಗೂ 259 ವ್ಯಕ್ತಿಗಳನ್ನು ಆರೋಗ್ಯ ಇಲಾಖೆಯಿಂದ ನೊಂದಣಿ ಮಾಡಿಕೊಳ್ಳಲಾಗಿದೆ. ಇದರಲ್ಲಿ ಚಿತ್ರದುರ್ಗ-133, ಹಿರಿಯೂರು-41, ಚಳ್ಳಕೆರೆ-34, ಹೊಸದುರ್ಗ-27, ಮೊಳಕಾಲ್ಮುರು-09 ಹಾಗೂ ಹೊಳಲ್ಕೆರೆ-16 ಮಂದಿ ಸೇರಿದಂತೆ ಒಟ್ಟು 259 ವ್ಯಕ್ತಿಗಳನ್ನು ನೊಂದಣಿ ಮಾಡಿಕೊಂಡು, ಇದರಲ್ಲಿ 213 ವ್ಯಕ್ತಿಗಳು 14 ದಿನಗಳ ಹೋಂ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಿ, ಬಿಡುಗಡೆ ಹೊಂದಿದ್ದಾರೆ.
14 ದಿನಗಳ ಕಾಲ ಮನೆಯಲಿಯೇ ಪ್ರತ್ಯೇಕವಾಗಿದ್ದು, ಯಾವುದೇ ರೋಗ ಲಕ್ಷಣಗಳು ಕಂಡು ಬಂದಿಲ್ಲ. ಪ್ರತಿದಿನವೂ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ಅಂತಹವರ ಮನೆಗೆ ಭೇಟಿ ನೀಡಿ ಆರೋಗ್ಯವನ್ನು ವಿಚಾರಿಸಲಾಗಿದೆ. ಹೋಂ ಕ್ವಾರಂಟೈನ್ ಅವಧಿ ಮುಗಿಸಿದ 213 ವ್ಯಕ್ತಿಗಳಿಗೆ ಯಾವುದೇ ರೋಗ ಲಕ್ಷಣಗಳಿಲ್ಲ ಎಂಬುದಾಗಿ ಪ್ರಮಾಣ ಪತ್ರ ವಿತರಿಸಲಾಗಿದೆ
ಜೊತೆಗೆ ಈ 213 ವ್ಯಕ್ತಿಗಳ ಗಂಟಲು ದ್ರವ ಮತ್ತು ರಕ್ತ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎಲ್ಲರ ವರದಿಯೂ ಕೂಡ ನೆಗಟೀವ್ ಎಂದು ವರದಿಯಾಗಿದ್ದು, ಯಾವುದೇ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. 36 ಮಂದಿ ಸುಮಾರು 28 ದಿನಗಳ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಆರೋಗ್ಯ ಇಲಾಖೆಯಿಂದ ವಿವಿಧ ಹಂತದಲ್ಲಿ ಎಲ್ಲ ರೀತಿಯ ಮಾನಿಟರಿಂಗ್ ಮಾಡಲಾಗಿದೆ. ಜಿಲ್ಲೆಯ ಆರು ತಾಲ್ಲೂಕುಗಳಿಗೆ ರ್ಯಾಪಿಡ್ ರೆಸ್ಪಾನ್ಸ್ ಟೀಂ (ತ್ವರಿತ ಸ್ಪಂದನಾ ತಂಡಗಳ) ಮೂಲಕ ಪ್ರತಿಯೊಂದು ತಂಡದಲ್ಲಿ 7 ರಿಂದ 8 ಸದಸ್ಯರು ಮನೆಗಳಿಗೆ ಭೇಟಿ ನೀಡಿ ಅವರನ್ನು ನಿಗಾವಹಿಸಿ ಪ್ರತಿದಿನದ ಮಾಹಿತಿಯನ್ನು ನೀಡುತ್ತಿದ್ದಾರೆ ಎಂದರು.
ಸದ್ಯ ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‍ನಲ್ಲಿ ಇರುವ ವ್ಯಕ್ತಿಗಳು ಎಲ್ಲರೂ ಆರೋಗ್ಯವಾಗಿದ್ದಾರೆ. ಆರೋಗ್ಯ ಇಲಾಖೆ ವತಿಯಿಂದ ಕೇವಲ 23 ಮಂದಿ ನಿಗಾದಲ್ಲಿದ್ದಾರೆ ಎಂದರು. ಇಲ್ಲಿಯವರೆಗೆ ಗಂಟಲು ಮಾದರಿ ಪರೀಕ್ಷೆ ಮಾಡಿಸಿದ ಸಂದರ್ಭದಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದರು.
ಹೀಗಾಗಿ ಇನ್ನು ಮುಂದೆಯೂ ಮುನ್ನೆಚ್ವರಿಕೆ ವಹಿಸಿ ಮನೆಯಲ್ಲೇ ಇದ್ದರೆ ನಮ್ಮ ಜಿಲ್ಲೆಯನ್ನು ಕೊರೋನ ಮುಕ್ತ ಜಿಲ್ಲೆಯನ್ನಾಗಿಸಬಹುದು ಎಂದು ಹೇಳಿದರು.
ಇನ್ನೂಆರೋಗ್ಯ ಇಲಾಖೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಕಿರಿಯ ಆರೋಗ್ಯ ಮಹಿಳಾ ಸಹಾಯಕಿಯರು ಹಾಗೂ ಜಿಲ್ಲಾಡಳಿತ ಸೇರಿದಂತೆ ಎಲ್ಲ ಇಲಾಖೆಯವರು ಸಹ ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ.ಜಿಲ್ಲೆಯಲ್ಲಿ ಕೊರೊನಾ ತೀವ್ರತೆ ಕಂಡು ಬಂದ ಸಮಯದಲ್ಲಿ ಮುನ್ನಚ್ಚರಿಕೆ ಸಲುವಾಗಿ ಜಿಲ್ಲೆಯಲ್ಲಿ 10 ಆಸ್ಪತ್ರೆಗಳನ್ನು ಗುರುತಿಸಲಾಗಿದ್ದು, 10 ಆಸ್ಪತ್ರೆಗಳಲ್ಲಿ ಐಸೋಲೇಷನ್ ಸೌಲಭ್ಯ ಕಲ್ಪಿಸಿಕೊಡಲು ಖಾಸಗಿ ಆಸ್ಪತ್ರೆಯವರು ಒಪ್ಪಿಗೆ ನೀಡಿದ್ದಾರೆ.ಬಸವೇಶ್ವರ ಆಸ್ಪತ್ರೆ ಮತ್ತು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್-19 ಆಸ್ಪತ್ರೆಯನ್ನಾಗಿ ಗುರುತಿಸಿ, 100 ಹಾಸಿಗೆಯುಳ್ಳ ಕೋವಿಡ್ ಆಸ್ಪತ್ರೆಯನ್ನು ಸಿದ್ಧವಾಗಿರಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ತಾಲ್ಲೂಕಿಗೆ 02 ರಂತೆ ಒಟ್ಟು 12 ಫೀವರ್ ಕ್ಲಿನಿಕ್ ಮಾಡಲಾಗಿದ್ದು, ಈ ಫೀವರ್ ಕ್ಲಿನಿಕ್‍ನಲ್ಲಿ ಜ್ವರ ತಪಾಸಣೆಯನ್ನು ಮಾತ್ರ ಮಾಡಲಾಗುತ್ತಿದೆ. ಖಾಸಗಿ ಆಸ್ಪತ್ರೆಯಲ್ಲಿ ಜ್ವರ ತಪಾಸಣೆ ಮಾಡದಂತೆ ಸೂಚನೆ ನೀಡಿ ಫಲಕ ಹಾಕುವಂತೆ ನಿರ್ದೇಶನ ನೀಡಲಾಗಿದೆ‌ ಎಂದರು.

ಮಹಾಂತೇಶ್ ಎಕ್ಸ್ ಪ್ರೆಸ್ ಟಿವಿ ಮೊಕಾಲ್ಮೂರು (ಚಿತ್ರದುರ್ಗ)

Click to comment

Trending

Exit mobile version