ನಿಮ್ಮ ಜಿಲ್ಲೆ

ಲಿಂಗಸೂಗೂರಿನಲ್ಲಿ ನಿತ್ಯ 200 ಉಪಹಾರ ಪ್ಯಾಕೇಟ್‌ಗಳ ಹಂಚಿಕೆ

Published

on

ಲಿಂಗಸುಗೂರು : ಕರೊನಾ ವೈರಸ್ ಎಂಬ ಮಹಾಮಾರಿ ಇಡೀ ದೇಶವನ್ನೇ ತಲ್ಲಣಗೊಳಿಸಿದೆ.
ಸಾರ್ವಜನಿಕರು ಭಯದಲ್ಲೇ ಜೀವನ ಸಾಗಿಸುವ ಅನಿವಾರ್ಯ ಎದುರಾಗಿದೆ.ಆದರೆ ಇಲ್ಲೊಂದು ತಂಡ ಬಡವರಿಗೆ ದಿನ ನಿತ್ಯ ೨೦೦ ಆಹಾರ ಪೊಟ್ಟಣಗಳನ್ನು ವಿತರಿಸುತ್ತಿದ್ದಾರೆ.
ಹೌದು,ರಾಯಚೂರು ಜಿಲ್ಲೆಯ ಲಿಂಗಸೂಗೂರು ಪಟ್ಟಣದ ಸಮಾಜಮುಖಿ, ವಿಚಾರವುಳ್ಳ ಯುವಕ ಖಾಲಿದ್ ಚಾವೂಸ್ ತನ್ನ ಗೆಳೆಯರ ಬಳಗವನ್ನು ಕಟ್ಟಿಕೊಂಡು ಲಾಕ್‌ಡೌನ್ ಆದಾಗಿನಿಂದ ಪ್ರತಿನಿತ್ಯ ಸರಿಸುಮಾರು ೨೦೦ ಜನರಿಗೆ ಉಪಹಾರದ ಪ್ಯಾಕೇಟ್‌ಗಳನ್ನು ತಯಾರಿಸಿಕೊಂಡು ಬೆಳಗ್ಗೆ ಪಟ್ಟಣವೆಲ್ಲಾ ಸುತ್ತಾಡಿ ಹಂಚಿಕೆ ಮಾಡುವ ಕಾರ್ಯ ತೆರೆಮರೆಯಲ್ಲಿ ನಡೆಸಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಂಡು, ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಈ ಯುವಪಡೆಯ ಜನೋಪಕಾರಿ ಕಾರ್ಯಕ್ಕೆ ಪೋಲಿಸರು ಪರವಾನಿಗೆಯನ್ನೂ ನೀಡಿದ್ದಾರೆ.
ಸ್ವತಃ ತಾವೇ ದಿನಸಿ, ತರಕಾರಿಯನ್ನು ತಂದು ಪಲಾವು-ಮಜ್ಜಿಗೆ, ಉಪ್ಪಿಟ್ಟು, ಕಿಚಡಿ-ಚಟ್ನಿ, ಚಿತ್ರಾನ್ನ ಸೇರಿ ಪ್ರತಿನಿತ್ಯ ತರಹೇವಾರಿ ಉಪಹಾರವನ್ನು ತಯಾರಿಸಿಕೊಂಡು ಹಾಟ್ ಪ್ಯಾಕೇಟ್ ಗಳಲ್ಲಿ ತುಂಬಿಕೊAಡು ಕನಿಷ್ಠ ೨೦೦ ಜನರಿಗೆ ತಲುಪಿಸುವ ಕೆಲಸ ಈ ತಂಡ ಮಾಡುತ್ತಿದೆ.
ಮೊದಲಿಗೆ ಸರಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಗೂ ಅಟೆಂಡರ್‌ಗಳಿಗೆ ನೀಡುತ್ತಿದ್ದೆವು, ಖಾಸಗಿ ಆಸ್ಪತ್ರೆಗಳಲ್ಲೂ ಸಮಸ್ಯೆ ಇರುವ ಬಗ್ಗೆ ತಿಳಿದು ರಾಘವೇಂದ್ರ ಮಕ್ಕಳ ಆಸ್ಪತ್ರೆ, ಸಜ್ಜಲಶ್ರೀ ಮಕ್ಕಳ ಆಸ್ಪತ್ರೆ, ಆಸರೆ ಹೆರಿಗೆ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ, ಕರ್ತವ್ಯ ನಿರತ ಹೋಂಗಾರ್ಡ್ಗಳಿಗೆ ಮತ್ತು ಪೋಲಿಸರಿಗೆ, ಗ್ರಾಮೀಣ ಪ್ರದೇಶದಿಂದ ಅಗತ್ಯ ಕಾರ್ಯ ನಿಮಿತ್ಯ ಪಟ್ಟಣಕ್ಕೆ ಬಂದು ಅನ್ನ ಪಾನೀಯವಿಲ್ಲದೇ ಇರುವ ಜನರಿಗೆ, ನಿರ್ಗತಿಕರಿಗೆ ಉಪಹಾರದ ಪೊಟ್ಟಣಗಳನ್ನು ನೀಡುತ್ತಿದ್ದೇವೆ.ಲಾಕ್‌ಡೌನ್ ಅವಧಿ ಏಪ್ರಿಲ್-೧೪ರ ವರೆಗೂ ನಮ್ಮ ಸೇವೆ ನಿರಂತರವಾಗಿ ಸಾಗುತ್ತದೆ. ಒಂದು ವೇಳೆ ಲಾಕ್‌ಡೌನ್ ಅವಧಿ ಮುಂದುವರೆದರೂ ತಂಡದ ಸದಸ್ಯರೊಂದಿಗೆ ಚರ್ಚಿಸಿ ಮುಂದೆಯೂ ವ್ಯವಸ್ಥೆ ಮಾಡುತ್ತೇವೆಂದು ತಂಡದ ಮುಖಂಡ ಖಾಲಿದ್ ಚಾವೂಸ್ ಹೇಳುತ್ತಾರೆ.
ಒಟ್ಟಾರೆ ಯಾವುದೇ ಪ್ರಚಾರ ಬಯಸದೇ ತಮ್ಮಷ್ಟಕ್ಕೆ ತಾವು ತಯಾರಿಸಿದ ಉಪಹಾರ ಪೊಟ್ಟಣ ಹಾಗೂ ನೀರು ತೆಗೆದುಕೊಂಡು ನಿಗದಿತ ಸ್ಥಳಗಳಿಗೆ ದ್ವಿಚಕ್ರ ವಾಹನಗಳಲ್ಲಿ ತೆರಳಿ ಹಸಿದವರಿಗೆ ನೀಡುತ್ತಿರುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು (ರಾಯಚೂರು)

Click to comment

Trending

Exit mobile version