ಅನಾರೋಗ್ಯದಿಂದ ಬಳಲುತ್ತಿದ್ದ ಜೆ.ಡಿ.ಎಸ್ ಶಾಸಕ ಸತ್ಯನಾರಾಯಣ ವಿಧಿವಶ..!

ಬೆಂಗಳೂರು:ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿಯಾಗದೆ ಶಿರಾ ಶಾಸಕ ಸತ್ಯನಾರಾಯಣ (69) ಬೆಂಗಳೂರಿನ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ.ಶಾಸಕ ಸತ್ಯನಾರಾಯಣ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರನ್ನು ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 10.45ಕ್ಕೆ ನಿಧನರಾಗಿದ್ದಾರೆ. ಸತ್ಯನಾರಾಯಣ ಅವರು ನಾನ್ ಕೋವಿಡ್ ಆಗಿದ್ದು,ಅನಾರೋಗ್ಯದಿಂದ ನಿಧನರಾಗಿದ್ದಾರೆ ಎಂದು ಆಸ್ಪತ್ರೆ ಮೂಲಗಳಿಂದ ಮಾಹಿತಿ ಬಂದಿದೆ. ಇವರಿಗೆ ಅನೇಕ ವರ್ಷಗಳಿಂದ ಲಿವರ್ ಸಮಸ್ಯೆ ಇತ್ತು ಎಂದು ತಿಳಿದುಬಂದಿದೆ.ಶಾಸಕ ಸತ್ಯನಾರಾಯಣ ಅವರು ನಾಲ್ಕು ಬಾರಿ ಶಿರಾದಲ್ಲಿ ಶಾಸಕರಾಗಿದ್ದು,ಎರಡು ಬಾರಿ ಸಚಿವರಾಗಿದ್ದರು.ಸಣ್ಣ ಕೈಗಾರಿಕಾ,ನೀರಾವರಿ ಮತ್ತು ಲಾಟರಿ ಸಚಿವರಾಗಿದ್ದರು.ಸತ್ಯನಾರಾಯಣ ಅವರು ಮೂಲತಃ ಶಿರಾದ ಭುವನಹಳ್ಳಿ ಗ್ರಾಮದವರಾಗಿದ್ದು,ವೃತ್ತಿಯಲ್ಲಿ ವಕೀಲರಾಗಿದ್ದರು.ಪತ್ನಿ ಅಮ್ಮಾಜಮ್ಮ,ಪುತ್ರ ಎಸ್.ಪ್ರಕಾಶ್ ಹಾಗೂ 4 ಹೆಣ್ಣುಮಕ್ಕಳನ್ನು ಶಾಸಕರು ಅಗಲಿದ್ದು, ಬುಧವಾರ ಶಿರಾ ತಾಲೂಕು ಬೂವನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ.ಬೆಳಗ್ಗೆ ತುಮಕೂರಿನ ಜಿಲ್ಲಾ ಜೆಡಿಎಸ್ ಕಚೇರಿ ಆವರಣದಲ್ಲಿ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೆಗೌಡರು ಸತ್ಯನಾರಾಯಣ ನಿಧನ ಬಗ್ಗೆ ಸಂತಾಪ ಸೂಚಿಸಿದ್ದಾರೆ.“ಮಾಜಿ ಸಚಿವರು ಮತ್ತು ಶಾಸಕರು ಹಾಗೂ ನನ್ನ ಸನ್ಮಿತ್ರರು ಆದ ಶ್ರೀ ಬಿ. ಸತ್ಯನಾರಾಯಣ್ ಅವರ ನಿಧನದ ಸುದ್ದಿ ಕೇಳಿ ತೀವ್ರ ಆಘಾತವಾಗಿದೆ.ಸತ್ಯನಾರಾಯಣ್ ಮತ್ತು ನನ್ನ ಸ್ನೇಹ ಸುಮಾರು 3 ದಶಕಗಳದ್ದು ಅವರಿಲ್ಲದ ದಿನಗಳನ್ನು ನೆನೆಯಲು ನನ್ನಿಂದ ಸಾಧ್ಯವೇ ಇಲ್ಲ” ಎಂದು ನೆನಪಿಸಿಕೊಂಡಿದ್ದಾರೆ. ಸತ್ಯನಾರಾಯಣ್ ಅವರು ತುಂಬಾ ಮೃದು ಸ್ವಭಾವದವರು ಅವರ ಅಗಲಿಕೆಯಿಂದ ನಮ್ಮ ನಾಡಿಗೆ ತುಂಬಲಾಗದ ನಷ್ಟ ಉಂಟಾಗಿದೆ. ಮೃತರ ಆತ್ಮಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ತುಂಬಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ..

ವರದಿ-ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ

Please follow and like us:

Related posts

Leave a Comment