ಪ್ರಸಾದ ಸೇವಿಸಿ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥ..!

ತಿಪಟೂರು:ತಿಪಟೂರು ತಾಲ್ಲೂಕಿನ ಕಿಬ್ಬನಹಳ್ಳಿ ಹೋಬಳಿಯ ಬಿಳಿಗೆರೆ ಕಾಲೊನಿಯಲ್ಲಿ ಗಣಪತಿ ವಿಸರ್ಜನಾ ಮಹೋತ್ಸವದ ಅಂಗವಾಗಿ ನೀಡಿದ ಪ್ರಸಾದ ತಿಂದ 60ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆ ಗ್ರಾಮದಲ್ಲಿ ಯುವಕರು ಗಣಪತಿ ವಿಸರ್ಜನೆ ಮಾಡುವ ಸಂದರ್ಭದಲ್ಲಿ ಪ್ರಸಾದವನ್ನು ನೀಡಿದ್ದರು. ಅದನ್ನು ತಿಂದು ಒಂದು ದಿನದ ನಂತರ ಹಲವರಿಗೆ ಸುಸ್ತು, ವಾಂತಿ, ಭೇದಿಯಂತಹ ಕೆಲವು ಲಕ್ಷಣಗಳು ಕಾಣಿಸಿಕೊಂಡಿವೆ. ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆದರೂ ಚಿಕಿತ್ಸೆ ಫಲಕಾರಿಯಾಗದೆ ಹಲವರಿಗೆ ಉಲ್ಬಣಗೊಂಡ ಕಾರಣ ತಿಪಟೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಒಟ್ಟಿಗೆ 60 ಮಂದಿಯನ್ನು ಕರೆತಂದಾಗ ಸ್ಥಳವಾಕಾಶ ಸಿಗದೆ ಕೆಲ ಗಂಟೆಗಳ ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆಗ ಶಾಸಕ ಬಿ.ಸಿ.ನಾಗೇಶ್ ಆಸ್ಪತ್ರೆಗೆ ಬಂದು ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ಬೆಡ್ಗಳನ್ನು ಬಳಸಿಕೊಳ್ಳುವಂತೆ ಸೂಚಿಸಿದರು. ಸದ್ಯ ಎಲ್ಲರ ಆರೋಗ್ಯ ಸ್ಥಿತಿಯೂ ಸ್ಥಿರವಾಗಿದ್ದು, ಯಾವುದೇ ಪ್ರಾಣಾಪಾಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಇನ್ನೂ ಕೆಲವರು ಖಾಸಗಿ ಆಸ್ಪತ್ರೆಯಲ್ಲಿಯೂ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ವರದಿ-ಸಿದ್ದೇಶ್ವರ ಸಿಎನ್. ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment