ಬಿಜೆಪಿ ಪಕ್ಷದ ಬಗ್ಗೆ ಅಸಮಧಾನ ಹೊರಹಾಕಿದ ಬಿಎಸ್ ಪಿ ಪಕ್ಷದ ರಾಜ್ಯಾಧ್ಯಕ್ಷ ಎಂ ಕೃಷ್ಣಮೂರ್ತಿ..!

ಮಳವಳ್ಳಿ: ರಾಜ್ಯದ ಸಂಕಷ್ಟದ ಪರಿಸ್ಥಿತಿಯನ್ನು ಸಾಲ ತಂದಾದರೂ ನಿಭಾಯಿಸುತ್ತೇವೆ ಎಂಬ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಹೇಳಿಕೆಯನ್ನು ಬಿಎಸ್ ಪಿ ಖಂಡಿಸುತ್ತದೆ ಎಂದು ಬಿಎಸ್ ಪಿ ಪಕ್ಷದ ರಾಜ್ಯಾದ್ಯಕ್ಷರಾದ ಎಂ. ಕೃಷ್ಣಮೂರ್ತಿ ತಿಳಿಸಿದರು. ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಬಹುಜನ ಸಮಾಜ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ರೀತಿ ಹೇಳಿಕೆ ನೀಡುವ ಬದಲಾಗಿ ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ರಾಜ್ಯದ ಪಾಲಿನ ಜಿ.ಎಸ್.ಟಿ ಹಣ ವಸೂಲಿ ಮಾಡಿ ನಂತರ ಸಾಲದ ಬಗ್ಗೆ ಮಾತನಾಡಬೇಕೆಂದು ಆಗ್ರಹಿಸಿದರು. ಕೊರೊನಾ ಸಂಕಷ್ಟದಲ್ಲೂ ಕರ್ನಾಟಕದಿಂದ ಶೇ.72% ಜಿ.ಎಸ್.ಟಿ ಸಂಗ್ರಹವಾಗಿದೆ. ಕಷ್ಟ ಕಾಲದಲ್ಲೂ ಕೇಂದ್ರ ಸರ್ಕಾರ ರಾಜ್ಯಕ್ಕೆ ತಮ್ಮ ಪಾಲಿನ ಹಣ ನೀಡದೇ ಮೀನಾ ಮೇಷ ಎಣಿಸುತ್ತಿರುವುದು ಖಂಡನೀಯ. ಕಳೆದ ವರ್ಷ ಪ್ರವಾಹದಿಂದಾಗಿ ರಾಜ್ಯದಲ್ಲಿ ₹38 ಸಾವಿರ ಕೋಟಿ ನಷ್ಟವಾಗಿದೆ. ಆದರೆ ಕೇಂದ್ರ ನೀಡಿದ್ದು ಕೇವಲ ₹1850 ಕೋಟಿ ಮಾತ್ರ. ಈ ವರ್ಷ ₹3 ರಿಂದ 4 ಸಾವಿರ ಕೋಟಿ ಪ್ರವಾಹದಿಂದ ನಷ್ಟವಾಗಿದ್ದು, ಕೇಂದ್ರ ಒಂದು ಪೈಸೆಯ ನೆರವನ್ನು ಸಹ ರಾಜ್ಯಕ್ಕೆ ನೀಡದೇ ವಂಚಿಸುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಆಡಳಿತದಲ್ಲಿ ಇದ್ದರೆ ಅಭಿವೃದ್ಧಿ ಸಾಧಿಸಬಹುದು ಎಂಬ ಹಸಿ ಸುಳ್ಳು ಹೇಳಿ ಕಳೆದ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಯಲ್ಲಿ ಮತ ಪಡೆದ ಬಿಜೆಪಿ ರಾಜ್ಯದ ಜನತೆಗೆ ದ್ರೋಹ ಬಗೆದಿದೆ. ಈ ಬಗ್ಗೆ ಧ್ವನಿ ಎತ್ತಬೇಕಾಗಿದ್ದ25 ಸಂಸದರು ರಾಜ್ಯದ ಪಾಲಿನ ಹಣ ತರುವುದರಲ್ಲಿ ತಮ್ಮ ಅಸಮರ್ಥತೆ ತೋರಿಸಿದ್ದು, ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಎಚ್.ಎನ್.ವೀರಭದ್ರಯ್ಯ, ಮುಖಂಡರಾದ ಮುನಿರಾಜು, ಬಿ.ಡಿ.ರಾಜೇಂದ್ರ, ಪ್ರಕಾಶ್, ತಮ್ಮಯ್ಯ ಸೇರಿದಂತೆ ಹಲವರು ಇದ್ದರು.

ವರದಿ : ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment