ಗೊಬ್ಬರಕ್ಕಾಗಿ ಸಾಮಾಜಿಕ ಅಂತರ ಮರೆತು ಅಂಗಡಿ ಮುಂದೆ ಮುಗಿಬಿದ್ದ ರೈತರು..!

ತುಮಕೂರು ಜಿಲ್ಲೆಯ ಚಿಕ್ಕ ನಾಯಕನ ಹಳ್ಳಿ ತಾಲ್ಲೂಕಿನ ಹುಳಿಯಾರು ಪಟ್ಟಣದಲ್ಲಿ ಗುರುವಾರ ಯೂರಿಯಾ ಗೊಬ್ಬರ ಬರಲಿದೆ ಎಂಬ ಸುದ್ದಿ ಕೇಳಿ ನೂರಾರು ರೈತರು ಗೊಬ್ಬರದ ಅಂಗಡಿ ಮುಂದೆ ಜಮಾಯಿಸಿದ್ದು, ಗೊಬ್ಬರದ ಲಾರಿ ಬರುತ್ತಿದ್ದಂತೆಯೇ ಗೊಬ್ಬರ ಸಿಗುತ್ತದೋ ಇಲ್ಲವೋ ಎಂಬ ಆತಂಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ನೂಕು ನುಗ್ಗಲಿನಲ್ಲಿ ಗೊಬ್ಬರ ಪಡೆದರು. ಹುಳಿಯಾರು ಪಟ್ಟಣದ ಕೆಇಬಿ ಮುಂಭಾಗದ ಶ್ರೀ ಗುರು ದಶರಥ ರಾಮೇಶ್ವರ ಸ್ವಾಮಿ ಫರ್ಟಿಲೈಸರ್ಸ್ ಹಾಗೂ ಮುಸ್ತಫಾ ಟ್ರೇಡರ್ಸ್ ನಲ್ಲಿ ಗುರುವಾರ ಮುಂಜಾನೆ ಗೊಬ್ಬರ ಕೊಳ್ಳಲು ಸುಮಾರು 600-700ಕ್ಕೂ ಹೆಚ್ಚು ರೈತರು ಜಮಾಯಿಸಿದ್ದರು.. ಒಂದೆಡೆ ಟೋಕನ್ ಸಿಸ್ಟಮ್ ಜಾರಿಯಾದರೆ, ಮತ್ತೊಂದೆಡೆ ಆಧಾರ್ ಕಾರ್ಡ್ ಪಡೆದು ಗೊಬ್ಬರ ವಿತರಣೆ ಮಾಡಲಾಯಿತು. ಸಬ್ಇನ್ಸ್ಪೆಕ್ಟರ್ ಸಹಿತ ಪೊಲೀಸರು ಸ್ಥಳದಲ್ಲಿದ್ದು ಗೊಬ್ಬರ ಕೊಳ್ಳುವ ರೈತರನ್ನು ನಿಯಂತ್ರಿಸಿದರು. ಹುಳಿಯಾರು ಹೋಬಳಿಯಾದ್ಯಂತ ಕಳೆದ ರಾತ್ರಿ ಉತ್ತಮ ಮಳೆಯಾಗಿದ್ದು ಅದಕ್ಕೂ ಒಂದು ವಾರ ಹಿಂದಿನಿಂದಲೂ ಮಳೆಯಾಗುತ್ತಿದ್ದು ರೈತರು ನಾಟಿ ಮಾಡಿರುವ ಪೈರಿಗೆ ಸಾವೆಗೆ ಮೇಲುಗೊಬ್ಬರವಾಗಿ ಯೂರಿಯಾ ಅವಶ್ಯಕತೆ ಇತ್ತು. ರೈತರ ಬೇಡಿಕೆಗೆ ತಕ್ಕಂತೆ ಕಳೆದೊಂದು ವಾರದಿಂದ ಗೊಬ್ಬರ ಸಿಗದ ಕಾರಣ ಬೇಡಿಕೆ ದುಪ್ಪಟ್ಟಾಗಿತ್ತು. ವಾರದ ಮುಂಚೆಯೇ ಗೊಬ್ಬರದ ಅವಶ್ಯಕತೆ ಇದ್ದು ಹೋಬಳಿಯಾದ್ಯಂತ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಇಂದು ಗೊಬ್ಬರಕ್ಕಾಗಿ ರೈತರು ದ್ವಿಚಕ್ರವಾಹನ, ಆಟೋ, ಟ್ರ್ಯಾಕ್ಟರ್ ಗಳಲ್ಲಿ ಜಮಾಯಿಸಿದ್ದರು. ಗೊಬ್ಬರದ ನೂಕುನುಗ್ಗಲಿನಲ್ಲಿ ಸಾಮಾಜಿಕ ಅಂತರ ಮಾಯವಾಗಿತ್ತಲ್ಲದೇ ಕೊರೋನಾ ಬಗ್ಗೆ ಯಾರಲ್ಲೂ ಆತಂಕದ ಲವಲೇಶವೂ ಕಂಡುಬರಲಿಲ್ಲ. ಪ್ರತಿಯೊಬ್ಬ ರೈತರು ಕನಿಷ್ಠ ಐದು ಚೀಲ ಗೊಬ್ಬರದ ಅವಶ್ಯಕತೆಯಿಂದ ಬಂದಿದ್ದರೂ ಸಹ ತಲೆಗೆ ಎರಡು ಮೂರು ಚೀಲ ಗೊಬ್ಬರ ವಿತರಣೆ ಮಾಡಲಾಯಿತು.. ಒಟ್ಟಾರೆ ಎರಡು ಗೊಬ್ಬರದ ಅಂಗಡಿಗಳಲ್ಲೂ ಗೊಬ್ಬರವನ್ನು ಗೋಡೌನಿಗೆ ದಾಸ್ತಾನು ಮಾಡದೆ ಲಾರಿಯ ಬಳಿಯಲ್ಲಿಯೇ ಪೊಲೀಸರ ಸಮ್ಮುಖದಲ್ಲಿ ಸರತಿ ಸಾಲಿನಲ್ಲಿ ಬಂದ ರೈತರಿಗೆ ಅಲ್ಲೇ ಹಣ ಪಡೆದು ಗೊಬ್ಬರವನ್ನು ವಿತರಣೆ ಮಾಡಲಾಯಿತು.

ವರದಿ- ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment