ವಿವಾದಿತ ಗೋಕಟ್ಟೆ ಸ್ಥಳಕ್ಕೆ ತಹಸೀಲ್ದಾರ್ ಕುಂಞ ಅಹಮ್ಮದ್ ಭೇಟಿ…!

ನಾಗಮಂಗಲ: ಗೋಕಟ್ಟೆ ಉಳಿಸಿ-ಜಾನುವಾರುಗಳನ್ನು ರಕ್ಷಿಸಿ ಎಂಬ ಘೋಷವಾಕ್ಯದಡಿಯಲ್ಲಿ ತಾಲೂಕಿನ ಉಪ್ಪಾರಹಳ್ಳಿ ಮತ್ತು ಬಸವೇಶ್ವರನಗರ ಗ್ರಾಮಸ್ಥರು ಗುರುವಾರ ನಡೆಸಲಾಗಿದ್ದ ಪ್ರತಿಭಟನೆಯ ಮನವಿಯ ಮೇರೆಗೆ ತಹಸೀಲ್ದಾರ್ ಕುಂಞ ಅಹಮ್ಮದ್ ಶುಕ್ರವಾರ ಗೋಕಟ್ಟೆಯ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯ ರಾಜಸ್ವನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದ ತಹಸೀಲ್ದಾರ್, ಜೆಸಿಬಿ ಮೂಲಕ ಗೋಕಟ್ಟೆಯ ಏರಿಯನ್ನು ನಾಶಪಡಿಸಿರುವುದನ್ನು ಪರಿಶೀಲಿಸಿದರು. ಗೋಕಟ್ಟೆಯ ತಳಭಾಗದಲ್ಲಿ ನೀರಿದ್ದರೂ ಗಿಡ-ಗಂಟೆಗಳಿರುವ ಕಾರಣ ಪರಿಸರದ ನೈರ್ಮಲ್ಯ ಹಾಳಾಗುವುದರಿಂದ ಸಂಬಂಧಿಸಿದ ಪುರಸಭಾ ಸಿಬ್ಬಂದಿಗಳಿಂದ ಸ್ವಚ್ಚಗೊಳಿಸುವುದರೊಂದಿಗೆ ಗೋಕಟ್ಟೆಯ ನೈಜತೆಯನ್ನು ತಿಳಿಯಬಹುದಾಗಿ ರಾಜಸ್ವನಿರೀಕ್ಷಕರಿಗೆ ತಿಳಿಸಿದರು. ಗೋಕಟ್ಟೆಯಿಂದ ಕೂಗಳತೆಯ ದೂರದಲ್ಲಿರುವ ಬಸವಣ್ಣನ ದೇವಾಲಯವನ್ನು ವೀಕ್ಷಿಸುವ ಮೂಲಕ ಸ್ಥಳೀಯ ವಾಸಿಗಳಿಂದ ಸ್ಥಳದ ವಿಶೇಷತೆಯ ಬಗ್ಗೆ ಮಾಹಿತಿ ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ತಹಸೀಲ್ದಾರ್ರಳವರು, ಗೋಕಟ್ಟೆಯ ಉಳಿವಿಗಾಗಿ ನಿನ್ನೆಯ ದಿನ ಗ್ರಾಮಸ್ಥರು ಪ್ರತಿಭಟನೆಯ ಮೂಲಕ ನೀಡಲಾಗಿದ್ದ ಮನವಿಯ ಮೇರೆಗೆ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಗೋಕಟ್ಟೆ ಇರುವುದು ಕಂಡುಬಂದಿದೆ. ಸದರಿ ಕಟ್ಟೆಗೆ ಹೇಮಾವತಿ ಕಾಲುವೆಯ ಸಂಪರ್ಕವೂ ಇದೆ.ಕಟ್ಟೆಯಿಂದ ಕೂಗಳತೆಯ ದೂರದಲ್ಲಿರುವ ಪುರಾತನ ಕಾಲದ ಬಸವಣ್ಣ ದೇವಾಲಯ ಶಿಥಿಲಗೊಂಡಿದ್ದರೂ, ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಜರುಗುವ ಬಸವಣ್ಣನ ಜಾತ್ರೆಗೆ ಎದುರಿನ ಕಲ್ಯಾಣಿ ಸೇರಿದಂತೆ ಅರಳಿಕಟ್ಟೆ ಸಾಕ್ಷೀಕರಿಸುತ್ತವೆ. ಆದಾಗ್ಯೂ ಸ್ಮಶಾನಕ್ಕಾಗಿ ಪರ್ಯಾಯವಾಗಿ ಗೊತ್ತುಮಾಡಲಾಗಿರುವ ಸರ್ವೆ ನಂಬರ್ 58 ರ ಜಾಗವನ್ನು ಪರಿಶೀಲಿಸಲಾಗಿದೆ. ಆಸ್ತಿಕರ ಧಾರ್ಮಿಕ ಭಾವನೆಗೆ ಧಕ್ಕೆಯಾಗದಂತೆ ಹಾಗೂ ಅತ್ಯವಶ್ಯವಿರುವ ಸ್ಮಶಾನಕ್ಕೂ ತೊಂದರೆಯಾಗದಂತೆ ಎಚ್ಚರವಹಿಸಿ ಸ್ಥಳದ ವರದಿಯನ್ನು ಮೇಲಾಧಿಕಾರಿಗಳಿಗೆ ತಿಳಿಸಲಾಗುವುದು. ಸ್ಮಶಾನ ಮತ್ತು ಗೋಕಟ್ಟೆಗಳ ವಿಷಯವಾಗಿ ವಿವಾದವಿರುವ ಎರಡು ಸಮುದಾಯದೊಡನೆ ಶಾಂತಿ ಸಭೆ ಕರೆಯುವ ಮೂಲಕ ಗ್ರಾಮದಲ್ಲಿ ಸೌಹಾರ್ಧತೆಯ ವಾತವರಣ ಕಲ್ಪಿಸಲಾಗುವುದು ಎಂದರು.ಈ ಸಂದರ್ಭ ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಗ್ರಾಮ ಲೆಕ್ಕಾಧಿಕಾರಿಗಳಾದ ಕುಮಾರ್ ಮತ್ತು ಸಂತೋಷ್ ಇದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪೊಲೀಸರು ಹಾಜರಿದ್ದರು.

ವರದಿ- ಎಸ್.ವೆಂಕಟೇಶ್. ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment