ಭೂಸ್ವಾಧೀನ ಕೈಬಿಡದಿದ್ದರೆ ಹೋರಾಟ ಅನಿವಾರ್ಯ: ಮಾಜಿ ಸಚಿವ ಚಲುವರಾಯಸ್ವಾಮಿ.

ನಾಗಮಂಗಲ: ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ವ್ಯಾಪ್ತಿಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಸಾಗುವಳಿ ಭೂ ಪ್ರದೇಶವನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಕೈಬಿಡದಿದ್ದರೆ ರೈತರ ಜತೆಗೂಡಿ ಸರ್ಕಾರದ ವಿರುದ್ದ ಹೋರಾಟ ನಡೆಸಲಾಗುವುದೆಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಕೈಗಾರಿಕೆ ಸ್ಥಾಪಿಸಲು ತಾಲೂಕಿನ ವಿವಿಧ ಭಾಗಗಳಲ್ಲಿ ಸಾಗುವಳಿಗೆ ಯೋಗ್ಯವಲ್ಲದ ಭೂ ಪ್ರದೇಶವಿದ್ದು, ಅದನ್ನು ಬಿಟ್ಟು ಸಾಗುವಳಿ ಮಾಡಲಾಗುತ್ತಿರುವ ಜಮೀನನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ರೈತರನ್ನು ಒಕ್ಕಲೆಬ್ಬಿಸಲು ಮುಂದಾಗಿರುವ ಸರ್ಕಾರದ ನಡೆ ರೈತರ ವಿರೋಧಿ ನಡೆಯಾಗಿದೆ. ರೈತರ ಹೆಸರೇಳಿ ಸರ್ಕಾರ ನಡೆಸುತ್ತಿರುವ ಮುಖ್ಯಮಂತ್ರಿಗಳು ಶೀಘ್ರವೇ ರೈತರ ಹಿತಕಾಯುವ ಮೂಲಕ ಸ್ವಾಧೀನಪಡಿಸಿಕೊಳ್ಳಲು ನೀಡಲಾಗಿರುವ ಪ್ರಕಟಣೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿದರು. ಕೋವಿಡ್ ಸಂಕಷ್ಟದಲ್ಲಿ ನಲುಗಿರುವ ರೈತರಿಗೆ ವರದಾನವಾಗಬೇಕಿರುವ ಸರ್ಕಾರ ರೈತರ ಬದುಕಿಗೆ ಬರೆ ಎಳೆಯಲು ಮುಂದಾಗಿರುವುದು ವಿಷಾದನೀಯ. ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ಪ್ರದೇಶದಲ್ಲಿ ಸಣ್ಣ ಮತ್ತು ಅತಿಸಣ್ಣ ರೈತರು ಸೇರಿದಂತೆ ಬಗರ್ ಹುಕ್ಕಂ ಯೋಜನೆಯಡಿ 53 ಅರ್ಜಿ ಸಲ್ಲಿಸುವ ಮೂಲಕ ಸಾಗುವಳಿ ಮಾಡುತ್ತಿರುವವರೇ ಹೆಚ್ಚು. ಇಂತಹ ಕೃಷಿಯಾದಾರಿತ ರೈತರ ಜಮೀನು ಕಸಿದುಕೊಳ್ಳುವ ಮೂಲಕ ಉದ್ಯಮಿಗಳಿಗೆ ವರದಾನವಾಗುತ್ತಿರುವ ಸರ್ಕಾರ ಈ ಕೂಡಲೆ ಪುನರ್ಪರಿಶೀಲನೆ ನಡೆಸಿ ಉದ್ಯಮಗಳನ್ನು ಉಳಿಸುವ ಹಾಗೂ ರೈತರನ್ನು ರಕ್ಷಿಸುವತ್ತ ಚಿಂತಿಸಲಿ ಎಂದರು.ಜಿಲ್ಲೆಯ ಏಳಕ್ಕೆ ಏಳೂ ಸ್ಥಾನಗಳನ್ನು ಜೆಡಿಎಸ್ ಪಕ್ಷಕ್ಕೆ ನೀಡಿದ ರೈತರಿಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಕೊಡುಗೆ ಅಪಾರವಾದದು. ಹೆಚ್ಡಿಕೆ ಮೇಲಿನ ನಂಬಿಕೆಯಿಂದ ಮತ ಚಲಾಯಿಸಿದ ಜಿಲ್ಲೆಯ ಜನತೆಯ ಹಿತ ಕಾಯುವ ಬದಲು, ಅವರ ಅಧಿಕಾರಾವಧಿಯಲ್ಲಿ ರೈತರ ಜಮೀನನ್ನು ಉದ್ಯಮಕ್ಕೆ ಸೀಮಿತಗೊಳಿಸಿ ಭೂಸ್ವಾಧೀನಕ್ಕೆ ಮುನ್ನುಡಿ ಬರೆದಿದ್ದೆ ಸ್ಥಳೀಯ ರೈತರಿಗೆ ನೀಡಿರುವ ಉಡುಗೊರೆ. ಈ ಮೂಲಕ ಅವರಿಗೆ ಜಿಲ್ಲೆಯ ರೈತರ ಮೇಲಿನ ಕೋಪವನ್ನು ತೀರಿಸಿಕೊಂಡಂತೆ ಕಾಣಿಸುತ್ತಿದೆ. ಇದರ ಪ್ರತಿಫಲವನ್ನು ಜನತೆ ತೀರ್ಮಾನಿಸಲಿದ್ದಾರೆ ಎಂದು ಹೆಚ್ಡಿಕೆ ವಿರುದ್ದ ವಾಗ್ದಾಳಿ ನಡೆಸಿದರು.ರೈತರ ಪರವಾಗಿಯೇ ಹೋರಾಟ ನಡೆಸುತ್ತಿರುವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕೆ,ಆರ್.ಪೇಟೆ ತಾಲೂಕಿನ ತಮ್ಮ ಪಕ್ಷದ ಕಾರ್ಯಕರ್ತರೊಬ್ಬರ ಕ್ರಷರ್ಗೆ ಅನ್ಯಾಯವಾಗುತ್ತಿದೆ ಎಂದು ಸ್ಥಳಕ್ಕೆ ದಾವಿಸಿ ಹೋರಾಟ ನಡೆಸಿದ್ದಲ್ಲದೆ, ಸಿಎಂ ಮನೆ ಮುಂದೆ ಧರಣಿ ಕೂರುವುದಾಗಿ ಎಚ್ಚರಿಕೆ ನೀಡುವ ಮೂಲಕ ಯಶಸ್ವಿಯಾದವರು, ಉದ್ಯಮಿಗಳ ಹಿತಕಾಯುವ ಮೂಲಕ ಜಮೀನು ಕಳೆದುಕೊಳ್ಳುತ್ತಿರುವ ರೈತರ ಹಿತ ಕಾಪಾಡಲು ಹೋರಾಟಕ್ಕೆ ಮುಂದಾಗದಿರುವುದೇಕೆ ಎಂದು ಕ್ರಷರ್ಗಾಗಿ ಹೋರಾಟ ನಡೆಸಿದ್ದನ್ನು ಅಣಕಿಸಿದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment