ಮಾಜಿ ಶಾಸಕ ಚಲುವರಾಯಸ್ವಾಮಿಗೆ ಕನಿಷ್ಟ ಸಾಮಾನ್ಯ ಪ್ರಜ್ಞೆ ಇಲ್ಲ: ಶಾಸಕ ಸುರೇಶ್ ಗೌಡ..!

ನಾಗಮಂಗಲ: ಸಕ್ಕರೆ ನಾಡು ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಕಾಳಿಂಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಕೈಗಾರಿಕಾ ನಿರ್ಮಾಣದ ಉದ್ದೇಶದಿಂದ ರಾಜ್ಯ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ 1277 ಎಕರೆ ರೈತರ ಭೂಮಿಗೆ ಸಂಬಂಧಿಸಿದಂತೆ ಹಾಲಿ ಮತ್ತು ಮಾಜಿ ಶಾಸಕರ ಮಾತಿನ ಜಟಾಪಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುವ ಮೂಲಕ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಇದೇ ಸೆ.08 ರಂದು ಮಾಜಿ ಶಾಸಕ ಚೆಲುವರಾಯಸ್ವಾಮಿ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಸುರೇಶ್ ಗೌಡ, ಭೂ ಸ್ವಾಧೀನ ಸಮಿತಿಯಲ್ಲಿ ಯಾವುದೇ ಶಾಸಕ ಇರುವುದಿಲ್ಲ ಎಂಬ ಕನಿಷ್ಟ ಸಾಮಾನ್ಯ ಪ್ರಜ್ಞೆ ಇವರಿಗಿಲ್ಲ ಎಂದು ಸಿಆರ್ ಎಸ್ ವಿರುದ್ದ ಹರಿಹಾಯ್ದರು. ತಾಲ್ಲೂಕಿನ ಹೊಣಕೆರೆ ಹೋಬಳಿಯ ಆಯತ್ತನಹಳ್ಳಿ ಗ್ರಾಮದ ರಮೇಶ್ ಎಂಬ ಕಾಂಗ್ರೆಸ್ ಮುಖಂಡ, ತಮ್ಮ ಅನುಯಾಯಿಗಳೊಂದಿಗೆ ಜೆಡಿಎಸ್ ಸೇರ್ಪಡೆಯಾದ ನಂತರ ಪಟ್ಟಣದ ತಮ್ಮ ಕಚೇರಿಯಲ್ಲಿ ಮಾಧ್ಯಮಗಳೊಂದಿಗೆ ಶಾಸಕ ಸುರೇಶ್ ಗೌಡ ಮಾತನಾಡಿದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿನ ನಮ್ಮ ಪಕ್ಷದ ಪ್ರಣಾಳಿಕೆಯಂತೆ ತಾಲೂಕಿನಲ್ಲಿ ಕೈಗಾರಿಕೆ ನಿರ್ಮಿಸುವುದಾಗಿತ್ತು. ಕೊಟ್ಟ ಮಾತಿನಂತೆ ಮೈತ್ರಿ ಸರ್ಕಾರದ ಸಿಎಂ ಆಗಿದ್ದ ಕುಮಾರಸ್ವಾಮಿ ಸರ್ಕಾರಿ ಖರಾಬು ಹಾಗೂ ಗೋಮಾಳ ಸೇರಿದಂತೆ 446 ಎಕರೆ ಭೂಸ್ವಾಧಿನಕ್ಕೆ ಅಂದಿನ ಸರ್ಕಾರ ಮಂಜೂರಾತಿ ನೀಡಿತ್ತು. ಆದರೆ ಬದಲಾದ ಬಿಜೆಪಿ ಸರ್ಕಾರ 466 ರಿಂದ 1277 ಎಕರೆ ಭೂಸ್ವಾಧೀನಪಡಿಸಿಕೊಂಡಿರುವುದೇ ರೈತರಿಗೆ ಮಾಡಿರುವ ದ್ರೋಹ. ತಾಲ್ಲೂಕಿನ ಅಭಿವೃದ್ದಿ ಬಗ್ಗೆ ನಾನು ಯಾರಿಂದಲೂ ಹೇಳಿಸಿಕೊಳ್ಳುವ ಅಗತ್ಯವಿಲ್ಲ. ನಾನು ಚುಂಚಶ್ರೀಗಳು ಅಥವ ಯಡಿಯೂರಪ್ಪ ಸೇರಿದಂತೆ ಯಾರನ್ನಾದರೂ ಭೇಟಿ ಮಾಡುವ ಮೂಲಕ ಕ್ಷೇತ್ರದ ಅಭಿವೃದ್ದಿ ಪಡಿಸುತ್ತೇನೆ. ನೂರಾರು ಕೋಟಿ ಲಪಟಾಯಿಸಿರುವವರ ಹತ್ತಿರ ಪಾಠ ಕಲಿಯುವ ಅವಶ್ಯ ನನಗಿಲ್ಲ. ಜನ ನನ್ನನ್ನು ನಂಬಿ ಮತ ಹಾಕಿದ್ದಾರೆ. ಜನರ ನಂಬಿಕೆ ಉಳಿಸಿಕೊಳ್ಳೊದು ನನ್ನ ಕರ್ತವ್ಯ ಎಂದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment