ಪರಂಪರೆಗೆ ಎಳ್ಳು-ನೀರು ಬಿಟ್ಟ ಬಿಜೆಪಿ ಸರ್ಕಾರ: ಜೆಡಿಎಸ್ ಶಾಸಕ ಸುರೇಶ್ಗೌಡ ಗಂಭೀರ ಆರೋಪ..!

ನಾಗಮಂಗಲ: ನಾಡು-ನುಡಿ ಹಾಗೂ ಈ ದೇಶದ ಆಚಾರ-ವಿಚಾರಗಳ ಸಂಸ್ಕೃತಿ ಮತ್ತು ಸಂಸ್ಕಾರದಂತಹ ವಿಷಯಗಳಲ್ಲಿ ದೇಶಾಭಿಮಾನ ಮತ್ತು ಈ ಮಣ್ಣಿನ ಸಾಂಪ್ರಾದಯಿಕ ಪರಂಪರೆ ಆಚರಣೆಗಳ ಸಿದ್ದಾಂತದಡಿಯಲ್ಲಿ ಸಾಗುತ್ತಿರುವ ಬಿಜೆಪಿ ಸರ್ಕಾರ, ವಿಜಯದಶಮಿಯ ದಸರ ಎಂದೊಡನೆ ನೆನಪಾಗುವುದು ಮೈಸೂರು. ಮೈಸೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಅವಿನಾಬಾವ ಸಂಸ್ಕಾರದ ಸಂಬಂಧವಿದೆ. ಮೈಸೂರಿನಂತಹ ಸಾಂಸ್ಕೃತಿಕ ನಗರದ ಪರಂಪರೆಗೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಸಾಂಗತ್ಯ ಸಾಂಪ್ರದಾಯಿಕ ಆಚರಣೆಗಳ ಸಂಬಂಧಕ್ಕೆ ಹಿಡಿದ ಕೈಗನ್ನಡಿ. ಆದರೆ ಕೊರೊನಾ ನೆಪದಲ್ಲಿ ದಸರ ಆಚರಣೆಯ ಮೂಲ ಮರೆತಿರುವ ಸರ್ಕಾರದ ನಡೆ ಸಾರ್ವಜನಿಕವಾಗಿ ಹತ್ತು ಹಲವು ಅನುಮಾನಗಳಿಗೆ ದಾರಿಯಾಗಿದೆ. ಇದೇ ಜಾಡುಹಿಡಿದ ಶಾಸಕ ಸುರೇಶ್ಗೌಡ ಪರಂಪರೆಯ ಧ್ವನಿಯಾದದ್ದು ಹೀಗೆ. ಜೆಡಿಎಸ್ ಶಾಸಕರಿರುವುದರಿಂದಲೇ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಆಚರಿಸಲಾಗುತ್ತಿದ್ದ ದಸರ ಆಚರಣೆಯನ್ನು ಕೈಬಿಡುವ ಮೂಲಕ ನಮ್ಮ ಸಾಂಪ್ರದಾಯಿಕ ಪರಂಪರೆಗೆ ಬಿಜೆಪಿ ಸರ್ಕಾರ ಎಳ್ಳು-ನೀರು ಬಿಟ್ಟಿದೆ ಎಂದು ಜೆಡಿಎಸ್ ಶಾಸಕ ಸುರೇಶ್ಗೌಡ ರಾಜ್ಯ ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿದ್ದಾರೆ. ಪಟ್ಟಣದ ಮಿನಿ-ವಿಧಾನಸೌಧದಲ್ಲಿರುವ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಡನೆ ಮಾತನಾಡಿದ ಶಾಸಕರು,ವಿಜಯೋತ್ಸವದ ಸಂಕೇತವಾಗಿ ಆಚರಿಸಲಾಗುತ್ತಿರುವ ನಾಡಹಬ್ಬ ವಿಜಯದಶಮಿಯ ದಸರ ಆಚರಣೆ ಪ್ರಾರಂಭವಾದದ್ದು ಶ್ರೀರಂಗಪಟ್ಟಣದಲ್ಲಿ ಮೈಸೂರಿನಲ್ಲಿ ಸರಳವಾಗಿ ಆಚರಿಸುವ ದಸರದಂತೆಯೇ ಶ್ರೀರಂಗಪಟ್ಟಣದಲ್ಲಿಯೂ ಸಾಂಪ್ರದಾಯಿಕ ವಿಧಿವಿಧಾನಗಳ ಸರಳ ದಸರ ಆಚರಣೆ ಮಾಡಬಹುದಿತ್ತು.ಕೊರೊನಾ ಮೈಸೂರಿನಲ್ಲಿರುವಂತೆಯೇ ಶ್ರೀರಂಗಪಟ್ಟಣದಲ್ಲಿದೆ. ಕೋವಿಡ್ ನಿಯಮಾನುಸಾರ ಎಲ್ಲಾ ಕಾರ್ಯಕ್ರಗಳು ನಡೆಯುತ್ತಿಲ್ಲವೇ?. ಬಿಜೆಪಿ ಶಾಸಕರಿರುವ ಮೈಸೂರು ಮತ್ತು ಮಡಿಕೇರಿಗಳಲ್ಲಿ ಮಾತ್ರ ದಸರ ಆಚರಿಸಬಹುದು. ಆದರೆ ಶ್ರೀರಂಗಪಟ್ಟಣದಲ್ಲಿ ಜೆಡಿಎಸ್ ಶಾಸಕರಿರುವ ಕಾರಣದಿಂದ ದಸರ ಆಚರಿಸುವಂತಿಲ್ಲ. ಇದು ಬಿಜೆಪಿ ಸರ್ಕಾರದ ಮಲತಾಯಿ ಧೋರಣೆಗೆ ಹಿಡಿದ ಕೈಗನ್ನಡಿ. ಇದೆಲ್ಲವನ್ನು ಗಮನಿಸುತ್ತಿರುವ ನಾಡದೇವತೆ ಚಾಮುಂಡೇಶ್ವರಿ ಹಾಗೂ ನಾಡಿನ ಜನತೆ ಸೂಕ್ತ ಸಮಯದಲ್ಲಿ ತಕ್ಕ ಪಾಠಕಲಿಸಲಿದ್ದಾರೆ ಎಂದರು. ಜನಪ್ರತಿನಿಧಿಗಳಾದ ನಮ್ಮ ಮಾತಿಗೆ ಮನ್ನಣೆ ನೀಡದ ಜಿಲ್ಲಾಡಳಿತ ನಿಯಮಾಬಾಹಿರ ಚಟುವಟಿಕೆಗಳಿಗೆ ಬೆಂಬಲ ನೀಡುವ ಮೂಲಕ ಅಕ್ರಮಗಳಿಗೆ ಆಸರೆಯಾಗಿದೆ. ತಾಲೂಕಿನ ಜಟಕ ಗ್ರಾಮದ ಗೇಟ್ ಮತ್ತು ಮತ್ತೊಂದು ಕಡೆ ಅಕ್ರಮವಾಗಿ ನಡೆಯುತ್ತಿರುವ ಕ್ರಷರ್ಗಳಿಗೆ ಮಾನ್ಯತೆ ನೀಡುವ ಉದ್ದೇಶದಿಂದ ತಾಲೂಕಿಗೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿಗಳು, ಕೊರೊನಾ ಸೋಂಕಿತರನ್ನು ಆರೋಗ್ಯದ ಬಗ್ಗೆ ವಿಚಾರಿಸಲು ಬಂದಿರುವೆ ಎಂದು ಮಾಧ್ಯಮಗಳ ಮುಂದೆ ಹೇಳಿಕೆ ನೀಡುತ್ತಾರೆ. ಆದರೆ ಕೇವಲ 1 ಸಾವಿರ ಮೆಟ್ರಿಕ್ ಟನ್ ಜಲ್ಲಿಗಾಗಿ ತೆರಿಗೆ ಪಾವತಿಸುವ ಮೂಲಕ 2015 ರಿಂದ ನಿರಂತರವಾಗಿ ನಿಯಮಬಾಹಿರವಾಗಿ ನಡೆಯುತ್ತಿರುವ ನಮ್ಮದೇ ತಾಲೂಕಿನ ಇಜ್ಜಲಘಟ್ಟ ಗ್ರಾಮದ ಹೊರವಲಯದ ಕ್ರಷರ್ ಮೇಲೇಕೆ ನಿಮ್ಮ ಕ್ರಮವಿಲ್ಲ. ಅಕ್ರಮ ಚಟುವಟಿಕೆಗಳ ಪ್ರತಿಯೊಂದು ದಾಖಲೆಗಳು ನಮ್ಮ ಬಳಿ ಇವೆ. ಮುಂದಿನ ಅಧಿವೇಶನದಲ್ಲಿ ಚರ್ಚಿಸಲಾಗುವುದು ಎಂದು ಜಿಲ್ಲಾಡಳಿತದ ವಿರುದ್ದ ಕಿಡಿಕಾರಿದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ

Please follow and like us:

Related posts

Leave a Comment