ಅನೈತಿಕ ತಾಣವಾದ ಸರ್ಕಾರಿ ಶಾಲಾ ಆವರಣ..!

ತಿಪಟೂರು: ಕೊರೋನಾದಿಂದಾಗಿ ಶಾಲೆಗಳು ಆರಂಭವಾಗಿಲ್ಲ, ಮುಚ್ಚಿರುವ ಶಾಲೆ ಆವರಣಗಳು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿರುವುದು ವಿಷಾದಕರ. ನಗರದ ಗಾಂಧಿನಗರದ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಉರ್ದು ಹಿರಿಯ ಪ್ರಾಥಮಿಕ ಶಾಲೆಗಳ ಆವರಣ ಕುಡುಕರ ಮತ್ತು ಪುಂಡ ಪೋಕರಿಗಳ ಅಡ್ಡೆಯಾಗಿರುವುದು ಶಿಕ್ಷಕರಿಗೆ ದಿನನಿತ್ಯ ನರಕದ ದರ್ಶನವಾಗುತ್ತಿದೆ. ಗಾಂಧಿನಗರದಲ್ಲಿರುವ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 104 ಜನ ವಿದ್ಯಾರ್ಥಿಗಳಿಗೆ ಐದು ಜನ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಕುಡುಕರ ಪುಂಡಪೋಕರಿಗಳ ಹಾವಳಿಯಿಂದಾಗಿ ಶಿಕ್ಷಕರು ದಿನನಿತ್ಯ ಶಾಲಾ ಆವರಣದಲ್ಲಿ ಬಿದ್ದಿರುವ ಖಾಲಿ ಬಾಟಲಿ ಗುಟ್ಕಾ ಪ್ಯಾಕೇಟ್ ಗಳು ಮಲಮೂತ್ರ ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ.ಈ ಶಾಲೆಯ ಕಟ್ಟಡವನ್ನು ಮೈಸೂರು ಸಂಸ್ಥಾನದ ಸಚಿವರಾದ ಬಿಎಂ ಪಾಟೀಲ್ ಉದ್ಘಾಟನೆ ಮಾಡಿದ್ದರು. ಆದರೆ ಈ ಕಟ್ಟಡ ಈಗ ಸಂಪೂರ್ಣವಾಗಿ ಶಿಥಿಲವಾಗಿದ್ದು ಬೀಳುವ ಹಂತವನ್ನು ತಲುಪಿದೆ. 1959 ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಓದಿದ ಕೆಲವರು ಉನ್ನತ ಅಧಿಕಾರಿಗಳು ಉದ್ಯಮಿಗಳು ವ್ಯಾಪಾರಿಗಳಾಗಿ ಉತ್ತಮ ಬದುಕು ಕಂಡುಕೊಂಡಿದ್ದಾರೆ. ಶತಮಾನ ದಾಟಿದ ಉರ್ದು ಶಾಲೆಯ ಸ್ಥಿತಿಯೂ ಕೇಳುವಂತಿಲ್ಲ. 1904 ರಲ್ಲಿ ಆರಂಭವಾದ ಗಾಂಧಿನಗರದ ಸರ್ಕಾರಿ ಉರ್ದು ಶಾಲೆಯ ಮೈದಾನ ನಾಲ್ಕು ಎಕರೆ ಜಮೀನನ್ನು ಹೊಂದಿದೆ, ಆದರೆ ಈ ಶಾಲೆಯ ಆವರಣದಲ್ಲಿ ತ್ಯಾಜ್ಯ ಸುತ್ತಮುತ್ತಲ ಘನತ್ಯಾಜ್ಯದೊಂದಿಗೆ ಸರ್ಕಾರಿ ಕಾಮಗಾರಿಯನ್ನು ಮಾಡುವ ಗುತ್ತಿಗೆದಾರರು ತಮ್ಮ ಡಂಪಿಂಗ್ ಯಾರ್ಡ್ ಆಗಿ ಪರಿವರ್ತಿಸಿಕೊಂಡಿದ್ದಾರೆ.ಯಾವೊಬ್ಬ ಅಧಿಕಾರಿಗಳೂ ಕೂಡ ಶಾಲೆಯ ಉನ್ನತಿಕರಣಕ್ಕೆ ಕೈಜೋಡಿಸುತ್ತಿಲ್ಲ,ಶಾಲೆಯ ಪರಿಸ್ಥೀತಿಯೇ ಹೀಗಿದ್ದರೆ ಯಾವ ಪೋಷಕರು ತಾನೇ ತಮ್ಮ ಮಕ್ಕಳನ್ನು ಕಲಿಯಲು ಶಾಲೆಗೆ ಕಳುಹಿಸುತ್ತಾರೆ,ಈ ಕೂಡಲೇ ಸಂಬಂಧಪಟ್ಟಂತಹ ಅಧಿಕಾರಿಗಳು ಸಮಸ್ಯೆಯನ್ನು ಆಲಿಸಿ ಬಗೆಹರಿಸಬೇಕೆಂದು ಶಿಕ್ಷಕರು ಒತ್ತಾಯಿಸಿದ್ದಾರೆ.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment