ಯಾವತ್ತಿಗೂ ಮತ್ತೊಬ್ಬ ಮನುಷ್ಯರ ಬದುಕೇ ಬಹಳ ಆಸಕ್ತಿಕರ. ಅದೇನೇ ಇಂಟರ್ ನೆಟ್, ಫೇಸ್ ಬುಕ್ ಮತ್ತೊಂದು ಬಂದು ಜಗತ್ತು ಬದಲಾಗಿ ಹೋದರೂ ನನ್ನಂಥ ಹಳ್ಳಿ ಮನುಷ್ಯನಿಗೆ ಮತ್ತೊಬ್ಬ ವ್ಯಕ್ತಿಯ ಬದುಕು, ಜನಪದ, ಸಾಹಿತ್ಯದಷ್ಟು ಆಪ್ಯಾಯಮಾನವಾಗಿ ಇನ್ನೇನೂ ಕಾಣುವುದಿಲ್ಲ.
ಅಲ್ಲಿ ಇಲ್ಲಿ ಎಂದು ಅಲೆದಾಡುವ ಜಾಯಮಾನದವನಾದ ನಾನು ಹೀಗೆ ಸುತ್ತಾಟ ನಡೆಸಿದ್ದೆ. ಯಾವಾಗಲೂ ಹಸು-ಎಮ್ಮೆಗಳನ್ನು ಮೇಯಿಸಿಕೊಂಡು ಹೋಗುವವರನ್ನೇ ನೋಡಿ ರೂಢಿ ಆಗಿಹೋಗಿದೆ. ಅಂಥದ್ದರಲ್ಲಿ ಯಲ್ದೂರಿನ ಹತ್ತಿರ ಒಬ್ಬ ಹೆಂಗಸು ಐದು ಕತ್ತೆಗಳ ಜತೆಗೆ ನಡೆದು ಹೋಗುತ್ತಾ ಇರುವುದು ಕಾಣಿಸಿತು. ಆಕೆಯನ್ನು ನೋಡಿದ ಮೇಲೆ ಅಲ್ಲಿಂದ ಮುಂದೆ ಹೋಗುವುದಕ್ಕೆ ಮನಸ್ಸಾಗದೇ, ಅಲ್ಲೇ ಗಾಡಿ ನಿಲ್ಲಿಸಿ, ಹಾಗೇ ಮಾತಿಗೆ ಎಳೆದೆ.