ಡೆಡ್ಲಿ ಡಿಸೆಂಬರ್..! ವಿಷಾಹಾರ ಸೇವಿಸಿ ಒಂದೇ ಕುಟುಂಬದ ನಾಲ್ವರ ಸಾವು..!

ಚಿತ್ರದುರ್ಗ, ಡಿ.21-ಡಿಸೆಂಬರ್ ತಿಂಗಳೊಕ್ ಆರಂಭವಾಗಿದ್ದೇ ಆಗಿದ್ದು, ದಿನಕ್ಕೊಂದರಂತೆ ಘೋರ ದುರಂತಗಳು ಸಂಭವಿಸುತ್ತಲೇ ಇವೆ, ಕಿಚ್ಚುಗತ್ತಿ ಮಾರಮ್ಮನ ದೇವಸ್ಥಾನದಲ್ಲಿ ವಿಷ ಪ್ರಸಾದ ಸೇವಿಸಿ 16 ಮಂದಿ ಸಾವನ್ನಪ್ಪಿದ ಬೆನ್ನಲ್ಲೇ ಈಗ ರಾತ್ರಿ ಊಟ ಸೇವಿಸಿ ಮಲಗಿದ್ದ ಒಂದೇ ಕುಟುಂಬದ ಏಳು ಜನರಲ್ಲಿ ನಾಲ್ವರು ಅಸುನೀಗಿ, ಮೂವರು ಅಸ್ವಸ್ಥರಾಗಿರುವ ದುರಂತ ಘಟನೆ ಜಿಲ್ಲೆಯ ಹಿರಿಯೂರು ತಾಲೂಕು ಹುಲಿತೊಟ್ಟಲು ಗ್ರಾಮದಲ್ಲಿ ನಡೆದಿದೆ. ಶಶಿಧರ(40), ಚಿತ್ತಪ್ಪ(80), ಭಾಗ್ಯಮ್ಮ (35), ಹೇಮಲತಾ(37) ಮೃತಪಟ್ಟ ದುರ್ದೈವಿಗಳು. ಸುಮಲತಾ(13), ಮುದ್ದುರಾಜು (14), ಅಜ್ಜಯ್ಯ(14) ತೀವ್ರ ಅಸ್ವಸ್ಥಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ರಾತ್ರಿ ಊಟ ಮಾಡಿ ಮಲಗಿದ್ದ ಕುಟುಂಬದ ಸದಸ್ಯರು ಬೆಳಗಿನ ಜಾವ ತೀವ್ರ ಹೊಟ್ಟೆ ನೋವಿನಿಂದ ನರಳಿದ್ದಾರೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರ ಪೈಕಿ ನಾಲ್ವರು ಮೃತಪಟ್ಟಿದ್ದು, ಮೂವರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಹೆಚ್ಚಿನ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಉಪವಿಭಾಗಾಧಿಕಾರಿ ವಿಜಯ್‍ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ರಾತ್ರಿ ಆಹಾರ ಸೇವನೆ ಬಳಿಕ ಈ ಘಟನೆ ನಡೆದಿದೆ. ಹಿರಿಯ ಮಗ ಸದಾಶಿವ ಹೊರಗೆ ಊಟ ಮಾಡಿದ್ದಾರೆ. ತಾಯಿ ಶಾಂತಮ್ಮ ಆಹಾರ ಸೇವಿಸಿರಲಿಲ್ಲ. ಈ ಇಬ್ಬರನ್ನು ಬಿಟ್ಟು ಏಳು ಜನ ಅಸ್ವಸ್ಥರಾಗಿದ್ದರು. ಮೂವರು ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಹಾರ ಮಾದರಿಯನ್ನು ಎಫ್‍ಎಸ್‍ಎಲ್ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ವರದಿ ಬಂದ ಬಳಿಕ ಘಟನೆಗೆ ನಿಖರ ಕಾರಣ ತಿಳಿಯಲಿದೆ ಎಂದು ಹೇಳಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಹಾಗೂ ಐಮಂಗಲ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಜರುಗಿಸಿದ್ದಾರೆ.

Please follow and like us:

Related posts

Leave a Comment