ಬೆಂಗಳೂರು,ಡಿ.22- ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್ ಪಾಳೆಯದಲ್ಲಿ ಅಸಮಾಧಾನ ಭುಗಿಲೆದಿದ್ದೆ. ಸಂಪುಟ ವಿಸ್ತರಣೆಯಲ್ಲಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದ ಶಾಸಕರಾದ ರಾಮಲಿಂಗಾರೆಡ್ಡಿ, ಬಿ.ಸಿ.ಪಾಟೀಲ್,ಬಸವನಗೌಡ ಪಾಟೀಲ್, ಬಿ.ಕೆ.ಸಂಗಮೇಶ್, ಎಚ್.ಕೆ.ಪಾಟೀಲ್, ರೋಷನ್ ಬೇಗ್, ಎಚ್.ಎಂ.ರೇವಣ್ಣ, ತನ್ವೀರ್ ಸೇಠ್, ಎಂ.ಕೃಷ್ಣಪ್ಪ, ಎಸ್.ಆರ್.ಪಾಟೀಲ್, ಸಚಿವ ಸ್ಥಾನದಿಂದ ಕೊಕ್ ಪಡೆದ ಆರ್.ಶಂಕರ್, ರಮೇಶ್ ಜಾರಕಿ ಹೊಳಿ ಸೇರಿದಂತೆ ಅನೇಕರು ಅಸಮಾಧಾನ ಹೊರ ಹಾಕಿದ್ದಾರೆ.
ಸಚಿವ ಸ್ಥಾನ ತಪ್ಪಿದ ರಾಮಲಿಂಗಾರೆಡ್ಡಿ ಹಾಗೂ ಬಿ.ಸಿ.ಪಾಟೀಲ್ ಪರ ಇವರ ಪುತ್ರಿಯರು ಗರಂ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಬಹಿರಂಗವಾಗಿಯೇ ಕೈ ಕಮಾಂಡ್ ನಿರ್ಧಾರವನ್ನು ಟೀಕಿಸಿದ್ದಾರೆ. ರಾಮಲಿಂಗಾರೆಡ್ಡಿ ಬೆಂಬಲಿಗರು ಸಚಿವ ಸ್ಥಾನಕ್ಕೆ ಒತ್ತಾಯಿಸಿ ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಿದ್ದಾರೆ.
ಅದೇ ರೀತಿ ಸಚಿವ ಸ್ಥಾನ ಕೈ ತಪ್ಪಿದ ಅನೇಕ ಶಾಸಕರ ಬೆಂಬಲಿಗರೂ ಪ್ರತಿಭಟನೆಯ ಹಾದಿ ತುಳಿದಿದ್ದಾರೆ. ಇನ್ನು ಸಚಿವ ಸ್ಥಾನದಿಂದ ಕೊಕ್ ಪಡೆದ ಆರ್.ಶಂಕರ್, ರಮೇಶ್ ಜಾರಕಿಹೊಳಿ ಅವರು ಕೂಡಾ ಅಸಮಾಧಾನಗೊಂಡಿದ್ದು ಅವರ ಮುಂದಿನ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ.ತಾವು ಕಾಂಗ್ರೆಸ್ ಪಕ್ಷ ಸೇರಲು ಸಿದ್ಧನಾಗಿದ್ದೆ. ಆದರೆ ಕಾಂಗ್ರೆಸ್ ತಮ್ಮನ್ನು ಸಚಿವ ಸ್ಥಾನದಿಂದ ಕೈ ಬಿಟ್ಟಿರುವುದು ಬೇಸರ ತಂದಿದೆ ಎಂದು ಆರ್. ಶಂಕರ್ ಅಳಲು ತೋಡಿಕೊಂಡಿದ್ದಾರೆ.
ಅರಣ್ಯ ಸಚಿವನಾಗಿ ಸಾಕಷ್ಟು ಉತ್ತಮ ಕೆಲಸ ಮಾಡಿದ್ದೇನೆ. ಸರ್ಕಾರ ರಚನೆ ಸಂದರ್ಭದಲ್ಲಿ ನಾನು ಗಟ್ಟಿಯಾಗಿ ಬೆಂಬಲಿಸಿದ್ದೆ. ಇದೀಗ ನನ್ನನ್ನು ದೂರ ಇಡುತ್ತಿರುವುದು ಸರಿಯೇ ಎಂದು ಪ್ರಶ್ನಿಸಿದ್ದಾರೆ.ಸಚಿವಾಕಾಂಕ್ಷಿಯಾಗಿದ್ದ ರೋಷನ್ ಬೇಗ್ ತಮಗೆ ಸಚಿವ ಸ್ಥಾನ ಕೈತಪ್ಪಿದ್ದರೂ, ಲೋಕಸಭೆಗೆ ತಮಗೇ ಟಿಕೆಟ್ ನೀಡಬೇಕೆಂದು ಹಾಗೂ ತಮ್ಮ ಪುತ್ರನಿಗೆ ವಿಧಾನಸಭೆಯ ಟಿಕೆಟ್ ನೀಡಬೇಕೆಂದು ಒತ್ತಾಯಿಸಿದ್ದಾರೆ.
ಇನ್ನು ತಮ್ಮ ಪುತ್ರಿಗೆ ಸಚಿವ ಸ್ಥಾನ ಕೊಡಿಸಲು ಶತ ಪ್ರಯತ್ನ ಪಟ್ಟ ಕೆ.ಎಚ್.ಮುನಿಯಪ್ಪ ಕಡೆಗೂ ವಿಫಲರಾಗಿದ್ದು ಅವರೂ ಕೂಡಾ ಅಸಮಾಧಾನಗೊಂಡಿದ್ದಾರೆ. ಪ್ರಾದೇಶಿಕವಾರು ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು, ಹಾವೇರಿ ಸೇರಿದಂತೆ ಅನೇಕ ಜಿಲ್ಲೆಗಳಿಗೆ ಪ್ರಾತಿನಿಧ್ಯ ನೀಡದಿರುವುದು ಸ್ಥಳೀಯ ಮುಖಂಡರಲ್ಲಿ ಬೇಸರ ತರಿಸಿದೆ.ಒಟ್ಟಾರೆ ಸಂಪುಟ ವಿಸ್ತರಣೆಯೆಂಬ ಜೇನುಗೂಡಿಗೆ ಕಾಂಗ್ರೆಸ್ ಕೈ ಹಾಕಿದ್ದು, ಮುಂದಿನ ದಿನಗಳಲ್ಲಿ ಇದು ಯಾವ ರೂಪ ಪಡೆಯುವುದೋ ಎಂಬುದನ್ನು ಕಾದು ನೋಡಬೇಕಿದೆ.
# ರಮೇಶ್ ಜಾರಕಿಹೊಳಿ ನಡೆ ನಿಗೂಢ
ಬೆಂಗಳೂರು,ಡಿ.22- ಬೆಳಗಾವಿ ರಾಜಕೀಯದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಹಸ್ತಕ್ಷೇಪ ವಿರೋಧಿಸಿ ಸಚಿವರಾಗಿದ್ದುಕೊಂಡೇ ಕಾಂಗ್ರೆಸ್ ಪಕ್ಷಕ್ಕೆ ಸಡ್ಡು ಹೊಡೆಯುತ್ತಿದ್ದ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದಿಂದ ಕೊಕ್ ನೀಡಲಾಗಿದೆ. ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದು ಕೊಂಡೇ ಬಿಜೆಪಿ ಪಾಳೆಯದಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುತ್ತಿದ್ದ ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿದ್ದರೂ ಈವರೆಗೆ ಅವರು ಯಾವುದೇ ಚಕಾರವೆತ್ತದಿರುವುದು ತೀವ್ರ ಕುತೂಹಲ ಕೆರಳಿಸಿದೆ. ರಮೇಶ್ ಜಾರಕಿಹೊಳಿಯ ಮುಂದಿನ ನಡೆ ಇದೀಗ ನಿಗೂಢವಾಗಿದೆ.