ಬಾಗಲಕೋಟೆ:ಮಹಾಯೋಗಿ ವೇಮನರ 607ನೇ ಜಯಂತಿ

ಗಣಿ ಧಣಿ, ಮಾಜಿ ಸಚಿವ ಜಿ.ಜನಾರ್ಧನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾರೆಡ್ಡಿ ಅವರನ್ನು ಮುಂದಿನ ಲೋಕಸಭೆ ಚುನಾವಣಾ ಅಭ್ಯರ್ಥಿಯನ್ನಾಗಿ ಸ್ಪರ್ಧಿಸಲು ಬಾಗಲಕೋಟೆ ಕ್ಷೇತ್ರದಿಂದ ವೇದಿಕೆ ಸಿದ್ಧಗೊಳ್ಳುತ್ತಿದೆ.
ಈ ವಿಚಾರ ಇದೀಗ ಬಾಗಲಕೋಟೆ ಜಿಲ್ಲೆಯಾದ್ಯಂತ ಚರ್ಚೆಗೆ ಗ್ರಾಸ ಒದಗಿಸಿದೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಎಸ್‍ಟಿ ವರ್ಗಕ್ಕೆ ಮೀಸಲಾಗಿರುವುದರಿಂದ ಬಾಗಲಕೋಟೆ ಸಂಸತ್ ಕ್ಷೇತ್ರದಿಂದಲೇ ಲಕ್ಷ್ಮಿ ಅರುಣಾ ಅವರನ್ನು ಕಣಕ್ಕೆ ನಿಲ್ಲಿಸಲು ಅಲ್ಲಿನ ರಾಜಕೀಯ ಮುತ್ಸದ್ದಿಗಳು ಮತ್ತು ಅಭಿಮಾನಿಗಳು ಸಿದ್ಧತೆ ನಡೆಸಿದ್ದಾರೆ. ಎಂದು ತಿಳಿದು ಬಂದಿದೆ.
ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ರೆಡ್ಡಿ ಸಮುದಾಯದ ವತಿಯಿಂದ ಇಂದು ನಡೆದಿರುವ ರೆಡ್ಡಿ ಸಮಾವೇಶ ಸೇರಿದಂತೆ ಮೂರು ಅಧಿಕೃತ ಕಾರ್ಯಕ್ರಮಗಳಿಗೆ ಜನಾರ್ಧನ ರೆಡ್ಡಿ ಅವರು ಕುಟುಂಬ ಸಮೇತ ಭಾಗವಹಿಸಿದ್ದಾರೆ. ರೆಡ್ಡಿ ಅವರೊಂದಿಗೆ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ವೇದಿಕೆಯನ್ನು ಹಂಚಿಕೊಂಡಿದ್ದಾರೆ. ಈ ಕಾರಣದಿಂದ ಬಾಗಲಕೋಟೆ ಜಿಲ್ಲೆಯಾದ್ಯಂತ ಅರುಣಾ ಲಕ್ಷ್ಮಿ ರೆಡ್ಡಿ ಅವರ ರಾಜಕೀಯ ಎಂಟ್ರಿ ತೀವ್ರ ಚರ್ಚೆಗೆ ಇಂಬು ನೀಡಿದಂತಾಗಿದೆ.
ಇಂದು ಹೇಮ-ವೇಮ ರೆಡ್ಡಿ ಜನಸಂಘದಿಂದ ಬಾಗಲಕೋಟೆ ಜಿಲ್ಲೆಯ ಸಂಗಮ ಕ್ರಾಸ್‍ನಿಂದ ಬೆನಕಟ್ಟಿ ಗ್ರಾಮದವರೆಗೆ ನಡೆದ ಪಾದಯಾತ್ರೆಯಲ್ಲಿ ರೆಡ್ಡಿ ಪಾಲ್ಗೊಂಡಿದ್ದರು.
ಜೊತೆಗೆ ಮಹಾಯೋಗಿ ವೇಮನರ 607ನೇ ಜಯಂತಿಯಲ್ಲಿ ಪತ್ನಿ ಸಮೇತ ಪಾಲ್ಗೊಂಡಿದ್ದರು. ಮುಂಬರುವ ದಿನಗಳಲ್ಲಿ ನಾಡಿನ ಎಲ್ಲೆಡೆ ಶಾಂತಿ ನೆಮ್ಮದಿ, ಸುಖ ಶಾಂತಿ, ಸಮೃದ್ಧಿ ನೆಲೆಸಲಿ, ಎಲ್ಲರ ಬಾಳು ಬಂಗಾರವಾಗಲಿ ಎಂದು ಹಾರೈಸಿರುವ ರೆಡ್ಡಿ ಅವರು ಪರೋಕ್ಷವಾಗಿ ತಮ್ಮ ಪತ್ನಿಯನ್ನು ಮುಂದಿನ ಲೋಕಸಭೆ ಚುನಾವಣೆಗೆ ಅಣಿಗೊಳಿಸಲು ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇಂದು ನಡೆದ ಸಮಾವೇಶ, ಪಾದಯಾತ್ರೆ, ರಥೋತ್ಸವ ಮತ್ತಿತರೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ರೆಡ್ಡಿ ಅವರ ಮುಖದಲ್ಲಿ ಒಂದು ರೀತಿಯ ಗೆಲುವಿನ ಭಾವ ಮೂಡಿತ್ತು ಎಂದು ಅಭಿಮಾನಿಗಳು ಹೇಳಿದ್ದಾರೆ.
ರೆಡ್ಡಿ ಜನಾಂಗದ ಬಂಧುಗಳು ನನ್ನನ್ನು ಜಯಂತಿ ಆಚರಣೆಗೆ ಆಹ್ವಾನಿಸಿದ್ದಾರೆ. ಅವರ ಪ್ರೀತಿಗೆ ಎಂದಿಗೂ ನಾನು ಅಭಾರಿಯಾಗಿದ್ದೇನೆ. ಎಂದಿರುವ ರೆಡ್ಡಿ, ಪತ್ನಿ ಅರುಣಾ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಲಿದ್ದಾರಾ? ಎಂಬ ಪ್ರಶ್ನೆ ಹರಿದಾಡುತ್ತಿದೆ. ಬಿಜೆಪಿಯಿಂದ ಅರುಣಾ ಲಕ್ಷ್ಮಿರೆಡ್ಡಿ ಅವರು ನಿಲ್ಲುವುದಾದರೆ ಬಿಜೆಪಿಯಿಂದ ಖಂಡಿತವಾಗಿಯೂ ಗ್ರೀನ್ ಸಿಗ್ನಲ್ ಸಿಗುವ ಸಾಧ್ಯತೆಯೂ ದಟ್ಟವಾಗಿ ಕೇಳಿ ಬರುತ್ತಿದೆ.
ಈಗ ಹಾಲಿ ಇರುವ ಸಂಸದ ಗದ್ದಿಗೌಡರ್ ಅವರ ಕುರಿತು ಕ್ಷೇತ್ರದ ಜನರಲ್ಲಿ ಅಷ್ಟಾಗಿ ವಿಶ್ವಾಸ ಮೂಡುತ್ತಿಲ್ಲ. ಮತ್ತೆ ಬಿಜೆಪಿಯಿಂದ ಟಿಕೆಟ್ ನೀಡಿದರೆ ಗದ್ದಿಗೌಡರ್ ಸೋಲುವುದು ಖಚಿತ. ಅರುಣಾ ಲಕ್ಷ್ಮಿ ಅವರನ್ನು ಸಂಸದೆಯನ್ನಾಗಿ ಮಾಡಿದರೆ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಗಳನ್ನಾದರೂ ನೋಡಲು ಸಾಧ್ಯವೆಂದು ಜಿಲ್ಲೆಯ ಜನತೆಯ ಇಚ್ಛೆಯಾಗಿದೆ ಎಂದು ಹೇಳಲಾಗುತ್ತಿದೆ.
ಜನಾರ್ಧನ ರೆಡ್ಡಿ ಅವರು ತಾಂತ್ರಿಕ ಕಾರಣಗಳಿಂದ ಬಿಜೆಪಿಯಿಂದ ದೂರ ಉಳಿದಿದ್ದಾರೆ. ಇತ್ತೀಚೆಗಷ್ಟೇ ತಮ್ಮ ಹುಟ್ಟು ಹಬ್ಬದ ಸಂದರ್ಭಧಲ್ಲಿ ಫೇಸ್ ಬುಕ್ ನಲ್ಲಿ ಮುಂದಿನ ತಮ್ಮ ಸಾರ್ವಜನಿಕ ಜೀವನದ ಕುರಿತ ಕನಸುಗಳನ್ನು ಹಂಚಿಕೊಂಡಿದ್ದರು. ಇಂದಿನ ಈ ಕಾರ್ಯಕ್ರಮಗಳನ್ನು ಗಮನಿಸಿದರೆ ಅರುಣಾ ಲಕ್ಷ್ಮಿರೆಡ್ಡಿ ಅವರ ರಾಜಕೀಯ ಎಂಟ್ರಿಗೆ ಇದು ಪೂರಕ ವೇದಿಕೆಯಾಗಿದೆ ಎಂದೇ ಹೇಳಲಾಗುತ್ತಿದೆ. ಜನಾರ್ಧನ ರೆಡ್ಡಿ ತಮ್ಮ ಪತ್ನಿಯನ್ನು ಲೋಕಸಭೆ ಚುನಾವಣೆಗೆ ಇಳಿಸುತ್ತಾರಾ? ಅವರ ಬದುಕಿನ ಪುಟದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯುತ್ತಾರಾ? ಎನ್ನುವುದೇ ಇದೀಗ ಮೂಡಿದ ಪ್ರಶ್ನೆ. ಇದಕ್ಕೆ ಕಾಲವೇ ಉತ್ತರ ನೀಡಬೇಕಷ್ಟೇ.

Please follow and like us:

Related posts

Leave a Comment