ಅವಳಿ ನಗರದಲ್ಲಿ ಸೋಂಕು ಕಳೆಯುವ ಸುರಂಗ..

ಹುಬ್ಬಳ್ಳಿ:ಕೊರೊನಾ ತಡೆಯಲು ರಾಜ್ಯ ಸರ್ಕಾರ ಹತ್ತು ಹಲವು ಕ್ರಮ ಕೈಗೊಳ್ಳುತ್ತಿದೆ.
ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ)ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ)ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ಕಳೆಯುವ ಸುರಂಗ ನಿರ್ಮಿಸಿದೆ, ರಾಜ್ಯದಲ್ಲಿಯೇ ಇದೊಂದು ಮೊದಲ ವಿನೂತನ ಪ್ರಯತ್ನವಾಗಿದೆ.
ಬೃಹತ್,ಮಧ್ಯಮ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಇಂದು ಬೆಳಿಗ್ಗೆ ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿ,ಸಾವಿರಾರು ಸಂಖ್ಯೆಯಲ್ಲಿ ಆಗಮಿಸುವ ರೈತರು, ವ್ಯಾಪಾರಸ್ಥರ ಆರೋಗ್ಯ ರಕ್ಷಣೆಗೆ ಇದು ಸಹಕಾರಿಯಾಗಲಿದೆ, ಜಿಲ್ಲಾಡಳಿತ,ಮಹಾನಗರಪಾಲಿಕೆ ಹಾಗೂ ಸ್ಥಳೀಯ ಸಂಘಟನೆಗಳ ಸಹಭಾಗಿತ್ವದಲ್ಲಿ ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ತಮಿಳುನಾಡಿನ ತಿರುಪ್ಪೂರನಲ್ಲಿ ಅಲ್ಲಿನ ಯಂಗ್ ಇಂಡಿಯಾ ಸಂಸ್ಥೆ ಇಂತಹ ಪ್ರಯತ್ನ ಮಾಡಿರುವದನ್ನು ಕಂಡು, ಹುಬ್ಬಳ್ಳಿಯಲ್ಲಿಯೂ ಅದನ್ನು ಅನುಷ್ಠಾನಗೊಳಿಸುವ ಆಸಕ್ತಿ ಉಂಟಾಯಿತು.ಹುಬ್ಬಳ್ಳಿ ಧಾರವಾಡ ಮಹಾನಗರಪಾಲಿಕೆ ಅಗತ್ಯ ಸಹಕಾರ ನೀಡಲು ಮುಂದಾದಾಗ ನಮ್ಮ ಉತ್ಸಾಹಕ್ಕೆ ಪ್ರೋತ್ಸಾಹ ದೊರೆಯಿತು.ಪಾರಾದಿ ಅವರಿಂದ ಸ್ಟೀಲ್ ಫ್ರೇಮ್ ಸಿದ್ಧಪಡಿಸಿ, ಹೈ ಪ್ರೆಶರ್ ಉಳ್ಳ ಫಾಗರ್ಸ್, ೧ ಅಶ್ವಶಕ್ತಿಯ ಪಂಪ್ ಅಳವಡಿಸಲಾಗಿದೆ.ಸುರಂಗದ ೪ ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ.
ಮನುಷ್ಯ ತೊಯ್ಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ.ಶೇ.೧ರ ಸೋಡಿಯಂ ಹೈಪೋಕ್ಲೋರೈಟ್ ಮಿಶ್ರಿತ ದ್ರಾವಣವನ್ನು ಮಹಾನಗರಪಾಲಿಕೆ ನಿರಂತರವಾಗಿ ಒದಗಿಸಲಿದೆ. ಯಂಗ್ ಇಂಡಿಯಾ ಮತ್ತು ಸಿಐಐ ಒಂದು ಲಕ್ಷ ರೂ.ವೆಚ್ಚದಲ್ಲಿ ಪ್ರಾಯೋಗಿಕವಾಗಿ
ಈ ಕಾರ್ಯ ಕೈಗೊಂಡಿದೆ ಎಂದು ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ.ಶ್ರೀನಿವಾಸ ಜೋಷಿ ವಿವರಿಸಿದರು.
ಇನ್ನು ಮಹಾನಗರಪಾಲಿಕೆ ಆಯುಕ್ತರು ಮಾತನಾಡಿ,ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು,ವ್ಯಾಪಾರಿಗಳಿಗೆ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ,ಸಾರ್ವಜನಿಕರು ಸ್ವಲ್ಪ ತಾಳ್ಮೆಯಿಂದ ವಾಹನದಿಂದ ಇಳಿದು, ಸುರಂಗದಲ್ಲಿ ಒಮ್ಮೆ ಹಾಯ್ದು ಬರುವ ಅಭ್ಯಾಸ ರೂಢಿಸಿಕೊಂಡರೆ ಒಳ್ಳೆಯದು ಎಂದರು.
ಜಿಲ್ಲಾಧಿಕಾರಿ ದೀಪಾ ಚೋಳನ್, ಮಹಾನಗರ ಪೊಲೀಸ್ ಆಯುಕ್ತ ಆರ್.ದಿಲೀಪ್, ಮಹಾನಗರಪಾಲಿಕೆ ಪರಿಸರ ಇಂಜಿನಿಯರ್ ನಯನ, ಪೊಲೀಸ್ ಇನ್ಸ್ ಪೆಕ್ಟರ್ ಪ್ರಭು ಸೂರಿನ್, ಯಂಗ್ ಇಂಡಿಯಾದ ಸಚಿನ್, ಡಾ.ನಾಗರಾಜನಾಯಕ, ಕಿರಣ ಮಾಳವದೆ, ಸಿಐಐ ಅಧ್ಯಕ್ಷ ವಿ.ಎಸ್.ವಿ.ಪ್ರಸಾದ, ಉಪಾಧ್ಯಕ್ಷ ಅನುಪಮ ಬೇತಾಳ ಮತ್ತಿತರರು ಇದ್ದರು.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment