ಮಸ್ಕಿ ತಾಲೂಕಿನಾದ್ಯಂತ ವರುಣನ ಆರ್ಭಟ: ಕಂಗಾಲಾದ ರೈತರು

ಲಿಂಗಸೂಗೂರು: ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಜನರು ಕಂಗಾಲಾಗಿದ್ದಾರೆ.
ಅದರಲ್ಲೂ ರಾಜ್ಯದಲ್ಲಿ ರೈತರು ತಾವು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಆಗದೇ ತಲೆ ಮೇಲೆ ಕೈ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಹೌದು ಕಳೆದೆರಡು ದಿನಗಳಿಂದ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನಾದ್ಯಂತ ವರುಣ ಆರ್ಭಟಿಸುತ್ತಿದ್ದು,ಗುಡುಗು ಸಹಿತ ಭಾರಿ ಮಳೆಯಿಂದಾಗಿ ಭತ್ತ ಸೇರಿದಂತೆ ಇತರೆ ಬೆಳೆಗಳು ನೆಲಕಚ್ಚಿ ಅನ್ನದಾತ ಕಂಗಾಲಾಗಿದ್ದಾನೆ.
ಮಸ್ಕಿ ತಾಲೂಕಿನ ಮುದಬಾಳ, ಕಾಟಗಲ್, ಉಸ್ಕಿಹಾಳ, ಮಾರದಿನ್ನಿ, ಬೆಲ್ಲದ ಮರಡಿ, ಹಾಲಪುರ, ವೆಂಕಟಾಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಭತ್ತದ ಬೆಳೆ ಹಾನಿಯಾಗಿದೆ.ಈಗಾಗಲೇ ನಾಲ್ಕೈದು ದಿನಗಳ ಹಿಂದೆ ಭತ್ತ ಕಟಾವು ಮಾಡಲಾಗಿದ್ದು,ಭತ್ತವನ್ನು ಒಣಗಿಸಲು ಬಿಡಲಾಗಿದೆ.ಇಂತಹ ಸಂದರ್ಭದಲ್ಲಿ ಮಳೆ ಬಂದರೆ ಭತ್ತ ಒಣಗಿಸಲು ಬಹಳ ಕಷ್ವವಾಗುತ್ತದೆ.ಜೊತೆಗೆ ಭತ್ತ ಕಟಾವು ಮಾಡದ ರೈತರ ಸ್ಥಿತಿಯಂತೂ ಇನ್ನು ಚಿಂತಾಜನಕವಾಗಿದೆ.
ಇದಲ್ಲದೆ,ಗಾಳಿಗೆ ಭತ್ತ ನೆಲಕ್ಕೆ ಬಾಗಿದರೆ ಒಂದು ಗಂಟೆಯಲ್ಲಿ ಕಟಾವು ಮಾಡಬೇಕಾದ ಭತ್ತವನ್ನು ಎರಡು ಗಂಟೆಗಳ ಕಾಲ ಕಟಾವು ಮಾಡಬೇಕಾಗುತ್ತೆ.ಒಂದು ವೇಳೆ ಮಳೆ ಬಂದರೆ ಭತ್ತದ ಕಾಳುಗಳು ನೆಲಕ್ಕೆ ಬಿದ್ದು ಇಳುವರಿ ಕಡಿಮೆ ಬರುತ್ತದೆ.ಭತ್ತವು ಕಂದು ಬಂದು ಮಾರುಕಟ್ಟೆಯಲ್ಲಿ ಬೆಲೆ ಕಡಿಮೆಯಾಗುತ್ತದೆ ಎಂದು ಐದು ಎಕರೆ ಭತ್ತ ಕಟಾವು ಮಾಡಿರುವ ರೈತ ಕನಕರಾಯ ನಾಯಕ ಹಾಲಾಪೂರ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇನ್ನೂ ಮಳೆಯಾದ ಭಾಗಗಳಿಗೆ ತಹಶೀಲ್ದಾರ್ ಬಲರಾಮ್ ಕಟ್ಟಿಮನಿ, ಕೃಷಿ ಅಧಿಕಾರಿ ಮಲ್ಲಪ್ಪ, ಹಾನಿಯಾದ ಬೆಳೆ ಪರಿಶೀಲನೆ ನಡೆಸಿದ್ರು. ಮಳೆಯಿಂದ ಬೆಳೆ ಹಾನಿಯಾಗಿದ್ದು ನ್ಯಾಯ ಒದಗಿಸಬೇಕು ಮತ್ತು ಸರಕಾರದಿಂದ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ರೈತರು ಅಧಿಕಾರಿಗಳಿಗೆ ಮನವಿ ಮಾಡಿದರು.
ಒಟ್ಟಾರೆಯಾಗಿ ಮಳೆ ಮತ್ತು ಗಾಳಿ ಯಿಂದ ರೈತನಿಗೆ ಕೈಯಿಗೆ ಬಂದ ತುತ್ತು ಬಾಯಿಗೆ ಬರದಂತಾಗಿ ರೈತರು ಕಂಗಾಲಾಗಿದ್ದಾರೆ.

ವೀರೇಶ್ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು (ರಾಯಚೂರು)

Please follow and like us:

Related posts

Leave a Comment