ನಿಮ್ಮ ಜಿಲ್ಲೆ

ಮಾವೋವಾದಿಗಳ 5 ಕೋಟಿ ರೂ. ಅಮಾನ್ಯಗೊಂಡ ನೋಟುಗಳನ್ನು ಬದಲಾಯಿಸುತ್ತೇನೆ ಎಂದಿದ್ದ ಬಿಜೆಪಿ ನಾಯಕ?

Published

on

ಪಾಟ್ನಾ, ಡಿ.31: ಎರಡು ವರ್ಷಗಳ ಹಿಂದೆ ನೋಟು ರದ್ದತಿ ಜಾರಿಯಾದಾಗ ಮಾವೋವಾದಿಗಳಿಗೆ ಸೇರಿದ 5 ಕೋಟಿಗೂ ಅಧಿಕ ಮೌಲ್ಯದ ಅಮಾನ್ಯೀಕರಣಗೊಂಡ ಕರೆನ್ಸಿ ನೋಟುಗಳ ವಿನಿಮಯ ಕುರಿತಾಗಿ ಬಿಜೆಪಿ ನಾಯಕನೊಂದಿಗೆ ನಡೆಸಲಾದ ಒಪ್ಪಂದವನ್ನು ಪಾಲಿಸದೇ ಇದ್ದದ್ದೇ ಬಿಹಾರದ ಔರಂಗಾಬಾದ್ ನಲ್ಲಿ ಮಾವೋವಾದಿಗಳ ದಾಳಿಗೆ ಕಾರಣವೆಂದು ಹೇಳಲಾಗಿದೆ.

ಶನಿವಾರ ಸುಮಾರು 200ರಷ್ಟಿದ್ದ ಮಾವೋವಾದಿಗಳು ಬಿಜೆಪಿ ಶಾಸಕ ರಾಜನ್ ಕುಮಾರ್ ಸಿಂಗ್ ನಿವಾಸಕ್ಕೆ ದಾಳಿಗೈದು ಅವರ ಚಿಕ್ಕಪ್ಪನನ್ನು ಗುಂಡಿಕ್ಕಿ ಸಾಯಿಸಿದ್ದೇ ಅಲ್ಲದೆ ಹತ್ತು ವಾಹನಗಳಿಗೂ ಬೆಂಕಿ ಹಚ್ಚಿದ್ದರು.

ಅವರು ಅಲ್ಲಿ ಬಿಟ್ಟು ಹೋದ ಪೋಸ್ಟರುಗಳಲ್ಲಿ, ‘ಶಾಸಕ ಮತ್ತವರ ಸೋದರ ಸಂಬಂಧಿ ತಮಗೆ ಅಮಾನ್ಯಗೊಂಡ ನೋಟುಗಳ ವಿನಿಮಯಕ್ಕೆ ಸಹಕರಿಸುವುದಾಗಿ ಹೇಳಿದ್ದರೆಂದು, ರಾಜನ್ ಸಿಂಗ್ ಅವರಿಗೆ 4 ಕೋಟಿ ರೂ. ಮೌಲ್ಯದ ಅಮಾನ್ಯಗೊಂಡ ನೋಟುಗಳು ಹಾಗೂ ಅವರ ಸೋದರ ಸಂಬಂಧಿಗೆ 3 ಕೋಟಿ ರೂ. ಮೌಲ್ಯದ ನೋಟುಗಳನ್ನು ನೀಡಲಾಗಿತ್ತು. ಆದರೆ ಒಪ್ಪಂದದಂತೆ ನೋಟುಗಳನ್ನು ಬದಲಾಯಿಸಿ ಕೊಟ್ಟಿರಲಿಲ್ಲ ಯಾ ಅಮಾನ್ಯಗೊಂಡ ನೋಟುಗಳನ್ನು ವಾಪಸ್ ನೀಡಿರಲಿಲ್ಲ’ ಎಂದು ಬರೆಯಲಾಗಿದೆ.

ಆದರೆ ಶಾಸಕ ಮಾವೋವಾದಿಗಳ ಆರೋಪ ನಿರಾಕರಿಸಿದ್ದು ರಾಜ್ಯ ಸರಕಾರ ಮತ್ತು ಆಡಳಿತದ ತಪ್ಪುಗಳಿಂದಾಗಿ ದಾಳಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಗ್ರಾಮದಲ್ಲಿ ಪೊಲೀಸ್ ಔಟ್ ಪೋಸ್ಟ್ ನಿರ್ಮಿಸುವಂತೆ ಕೋರಿದ್ದರೂ ಪ್ರಯೋಜನವಾಗಿರಲಿಲ್ಲ ಎಂದು ಅವರು ದೂರಿದ್ದಾರೆ.

ಶಾಸಕ ಹಾಗೂ ಮಾವೋವಾದಿಗಳ ನಡುವಿನ ನಂಟನ್ನು ಪೊಲೀಸರು ಅಲ್ಲಗಳೆದಿಲ್ಲ.

Click to comment

Trending

Exit mobile version