ಮಂಡ್ಯ

ನಾಗಮಂಗಲದ ಎಪಿಎಂಸಿ ಆವರಣದಲ್ಲಿ ಬೆಳೆ ಸಮೀಕ್ಷೆ ಕಾರ್ಯಾಗಾರ!

Published

on

ನಾಗಮಂಗಲ: ಮಂಡ್ಯ ಜಿಲ್ಲೆ, ನಾಗಮಂಗಲ ಪಟ್ಟಣದ ಹೊರವಲಯದಲ್ಲಿರುವ ತಾಲ್ಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆಡಳಿತ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 2020-ಮುಂಗಾರು ಬೆಳೆ ಸಮೀಕ್ಷೆ ಕಾರ್ಯಾಗಾರ ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಬೊಮ್ಮನಹಳ್ಳಿ ರಮೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.ತಮ್ಮ ತಮ್ಮ ಜಮೀನಿನಲ್ಲಿ ಮಾಡಬಹುದಾದ ಸ್ವಯಂ ಬೆಳೆ ಸಮೀಕ್ಷೆಯ ನೆಪದಲ್ಲಿ ರೈತರಿಗೆ ಹೊರೆ ಏರದಿರಿ, ಗ್ರಾಮೀಣ ಭಾಗದ ಬಹುತೇಕ ರೈತರು ಅನಕ್ಷರಸ್ಥರು. ಅವರಿಗೆ ಮೊಬೈಲ್ ಮೂಲಕ ಬೆಳೆ ಸಮೀಕ್ಷೆ ದಾಖಲಿಸುವ ವಿಧಾನ ಕಷ್ಟ ಸಾಧ್ಯ. ತಾಲ್ಲೂಕಿನ ಬಹುತೇಕ ಪಹಣಿಗಳು ಮೃತಪಟ್ಟ ಹಿರಿತಲೆಮಾರಿನ ಹೆಸರಿನಲ್ಲಿರುವುದು ಮತ್ತು ಅಣ್ಣ-ತಮ್ಮಂದಿರ ಹೆಸರಿನಲ್ಲಿ ಜಂಟಿ ಖಾತೆ ಇರುವುದೇ ಹೆಚ್ಚು. ಇಷ್ಟಲ್ಲದೆ ಪ್ರತಿವರ್ಷದಂತೆ ಮಳೆಯ ಪ್ರಮಾಣ ವಾಡಿಕೆಗಿಂತ ಕಡಿಮೆ. ಇಂತಹ ಸನ್ನಿವೇಶದಲ್ಲಿ ತೋಟಗಾರಿಕೆಗೆ ಸಂಬಂಧಿಸಿದ ಜಮೀನಿನಲ್ಲಿ ಮಾತ್ರ ಸಮೀಕ್ಷೆ ಸಾಧ್ಯ. ಉಳಿದಂತೆ ಶೇ.30 ಕ್ಕಿಂತಲೂ ಕಡಿಮೆ ವಿಸ್ತೀರ್ಣದಲ್ಲಿ ಮುಂಗಾರು ರಾಗಿ ಬೆಳೆ ಬಿತ್ತನೆಯಾಗಿದೆ. ಇನ್ನುಳಿದಂತೆ ಬಹುತೇಕ ಬಿತ್ತನೆಯಾಗಿಲ್ಲ. ಈ ಸಂದರ್ಭದಲ್ಲಿ ಬಿತ್ತನೆಯಾಗದ ಜಮೀನಿನಲ್ಲಿ ಸಮೀಕ್ಷೆ ಬೇಡ. ಆದುದರಿಂದ ಬೆಳೆ ಸಮೀಕ್ಷೆಗಾಗಿ ಸರ್ಕಾರ ನೇಮಿಸುವ ವ್ಯಕ್ತಿ ರೈತರ ಸಮ್ಮುಖದಲ್ಲಿ ಸಮೀಕ್ಷೆ ನಡೆಸುವುದು ಕಡ್ಡಾಯವಾಗಬೇಕು ಎಂದರು. ತಾ.ಪಂ.ಅಧ್ಯಕ್ಷ ದಾಸೇಗೌಡ ಮಾತನಾಡಿ, ರಾಷ್ಟ್ರೀಯ ಅಥವಾ ರಾಜ್ಯ ಪ್ರಕೃತಿ ವಿಕೋಪದ ಪರಿಹಾರ ನಿಧಿ, ಬೆಳೆದ ಬೆಳೆಗೆ ಕನಿಷ್ಟ ಬೆಂಬಲ ಬೆಲೆಯ ನಿಗಧಿ, ಬೆಳೆಯ ವಿಮೆ, ಬ್ಯಾಂಕ್ ಮತ್ತು ವ್ಯವಸಾಯ ಸೇವಾ ಸಹಕಾರಿ ಸಂಸ್ಥೆಗಳಲ್ಲಿ ಬೆಳೆ ಸಾಲ ಪಡೆಯಲು ಅಗತ್ಯವಿರುವ ಪಡಣಿಯಲ್ಲಿ ಬೆಳೆ ವಿವರ ದಾಖಲಿಸಲು ಹಾಗೂ ಸರ್ಕಾರಗಳು ರೂಪಿಸಬಹುದಾದ ಯೋಜನೆಗಳ ಪರಿಕಲ್ಪನೆಗೆ ಬೆಳೆ ಸಮೀಕ್ಷೆ ಸಹಕಾರಿ. ಈ ನಿಟ್ಟಿನಲ್ಲಿ ರೈತರಿಗೆ ಅನ್ಯಾಯವಾಗದಂತೆ ಸಮೀಕ್ಷೆ ನಡೆಸಿ ಎಂದು ಅಧಿಕಾರಿಗಳಿಗೆ ಕಿವಿಮಾತು ಹೇಳುವ ಮೂಲಕ ಪ್ರಸ್ತುತ ಮುಂಗಾರು ಬೆಳೆ ಸಮೀಕ್ಷೆ ಅಂಕಿ ಅಂಶದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿರುವ ತಾಲೂಕಿನ ಗೌರವ ಇದೇ ರೀತಿ ಮುಂದುವರೆಯಲಿ ಎಂದು ಆಶೀಸಿದರು.ಈ ಸಂದರ್ಭ ಶಿರೆಸ್ತದಾರ್ ಪ್ರಕಾಶ್, ತಾ.ಪಂ. ಸಹಾಯಕ ನಿರ್ದೇಶಕ ರವೀಂದ್ರ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಎಂ.ಶಾಂತ ಹಾಗೂ ಕೃಷಿ ಅಧಿಕಾರಿ ಯುವರಾಜ್ ಉಪಸ್ಥಿತರಿದ್ದು, ತಾಲೂಕಿನ ಐದು ಹೋಬಳಿಗಳ ರಾಜಸ್ವ ನಿರೀಕ್ಷಕರು ಸೇರಿದಂತೆ ಕಂದಾಯ ಇಲಾಖೆಯ ನೌಕರರು ಹಾಗೂ ಹಲವು ರೈತರು ಹಾಜರಿದ್ದರು.

ವರದಿ- ಎಸ್.ವೆಂಕಟೇಶ್.
ಎಕ್ಸ್ ಪ್ರೆಸ್ ಟಿವಿ
ನಾಗಮಂಗಲ.

Click to comment

Trending

Exit mobile version