ಕೋಲಾರ

ಬ್ರಹ್ಮ ವಿಷ್ಣು ಮಹೇಶ್ವರರಿಂದ ಪ್ರತಿಷ್ಠಾಪನೆಗೊಂಡ ಗಣಪನ ಪವಾಡ..!

Published

on

ಮುಳುಬಾಗಿಲು: ವಿಶ್ವದಲ್ಲೇ ಇರುವ ಏಕೈಕ ಸಾಲಿಗ್ರಾಮ ಶಿಲೆಯ ಗಣಪನ ಎದುರು ಬೇಡಿದರೆ ಎಲ್ಲಾವೂ ಈಡೇರುತ್ತವೆ. ಎಲ್ಲರ ಇಷ್ಟಾರ್ಥಗಳು, ಅದರಲ್ಲೂ ಚುನಾವಣೆಗಳು ಸಮೀಪಿಸಿದ್ರೆ ಸಾಕು ಈತನಿಗೆ ಎಲ್ಲಿಲ್ಲದ ಬೇಡಿಕೆ. ಎಲ್ಲಾ ಪಕ್ಷದವರೂ ಗಣಪನ ಆಶೀರ್ವಾದ ಪಡೆಯಲು ದಿನನಿತ್ಯ‌ ಆಗಮಿಸುತ್ತೀರುತ್ತಾರೆ. ಈ ಗಣಪನನ್ನು ನೋಡಿದ ನೋಟದಲ್ಲೇ ಭಕ್ತಿ ಪರವಶವಾಗುವ ೧೮ಅಡಿಯ ಗಣಪನ‌ ಮೂರ್ತಿ, ಈ ಗಣಪ ಮೂರ್ತಿ ಇರುವುದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದಲ್ಲಿ. ಕೂಟಾದ್ರಿ ಪರ್ವತದ ತಪ್ಪಲಿನಲ್ಲಿರುವ ಪುರಾಣ ಪ್ರಸಿದ್ದವಾದ ಗಣಪತಿಯ ದೇವಾಲಯವಿದು, ಕೋಲಾರದಿಂದ ಸುಮಾರು 45 ಕಿ.ಮೀ ದೂರದಲ್ಲಿರುವ ಕುರುಡುಮಲೆ ಗ್ರಾಮದಲ್ಲಿ ಗಣೇಶನಿಗೆ ಐತಿಹಾಸಿಕ ಹಿನ್ನೆಲೆ ಇದ್ದು, ತ್ರಿಪುರಾಸುರನ ಸಂಹಾರವಾದ ಮೇಲೆ ಬ್ರಹ್ಮ, ವಿಷ್ಣು,ಮಹೇಶ್ವರರಿಂದ ಅಂದರೆ ತ್ರಿಮೂರ್ತಿಗಳಿಂದ ಪ್ರತಿಷ್ಠಾಪಿಸಲಾದ ಗಣಪ ಇದಾಗಿದೆ. ಇನ್ನು ಕೂಟಾದ್ರಿ ಎಂದು ಹೆಸರು ಬರಬೇಕಾದ್ರೆ, ಹಿಂದೆ ದೇವತೆಗಳ ಸಾಕ್ಷಿಯಾಗಿ ತ್ರಿಮೂರ್ತಿಗಳು ತ್ರಿಪುರಾಸುರನನ್ನು ಸಂಹಾರ ಮಾಡಿದಾಗ ಕೋಟ್ಯಾನು ದೇವತೆಗಳು ಸೇರಿದ್ದು ಈ ಕುರುಡುಮಲೆಯಲ್ಲಿ. ಈ ಒಂದು ಕಾರಣಕ್ಕಾಗಿ ಕೂಟಾದ್ರಿ ಎಂದು ಹೆಸರನ್ನು ಪಡೆದುಕೊಂಡಿತು. ಇನ್ನು ಈ ಹಿಂದೆ ಬರಿ ಮಹಾಗಣಪನ ಮೂರ್ತಿ ಮಾತ್ರ ಈ ಸ್ಥಳದಲ್ಲಿತ್ತು. ಗಣಪನ ಮೂರ್ತಿಗೆ ಯಾವುದೇ ದೇವಸ್ಥಾನ ಇರಲಿಲ್ಲ. ಬಯಲಿನಲ್ಲಿ ಬೆಟ್ಟದ ತಪ್ಪನಲ್ಲಿ ಗಣಪತಿ ಮೂರ್ತಿಯನ್ನ ಪ್ರತಿಷ್ಠಾಪನೆ ಮಾಡಲಾಗಿದೆ. ವಿಶೇಷ ಅಂದ್ರೆ ಮಳೆ ಬಂದಾಗ ಮಹಾಗಣಪತಿ ಮೇಲೆ ಒಂದು ಹನಿಯೂ ನೀರು ಬೀಳುತ್ತಿರಲಿಲ್ಲ ಅನ್ನೋ ಪ್ರತೀತಿ ಇದೆ. ಹೀಗೆ ಕೃತ ಯುಗ, ತೇತ್ರಾಯುಗ, ದ್ವಾಪರ, ಯುಗದಲ್ಲಿ ಈ ಸ್ವಾಮಿಗೆ ಯಾವುದೇ ದೇವಸ್ಥಾನ ಇರಲಿಲ್ಲ. ಹೀಗಿರುವಾಗ ಕಲಿಯುಗದ ಕಾಲದಲ್ಲಿ ಶ್ರೀಕೃಷ್ಣದೇವರಾಯರು ಈ ಮಹಾಗಣಪತಿಯ ದರ್ಶನ ಪಡೆಯಲು ಬಂದಾಗ, ಈ ಗಣಪನಿಗೆ ದೇವಸ್ಥಾನ ಕಟ್ಟಿಸಿ ಹೋದರೆಂಬ ಪ್ರತೀತಿ ಕೂಡ ಇಲ್ಲಿದೆ. ಹೀಗಾಗಿ ಈ ದೇವಸ್ಥಾನ ವಿಜಯ ನಗರ ಸಾಮ್ರಾಜ್ಯದ ಕಾಲದಲ್ಲಿ ಸುಂದರ ಶಿಲ್ಪ ಕಲೆಯನ್ನುಳ್ಳ ದೇವಸ್ಥಾನ ನಿರ್ಮಾಣ ಮಾಡಲಾಗಿದೆ. ಜಕ್ಕಣಾಚಾರಿಯಿಂದ ಸುಂದರ ಶಿಲ್ಪಕಲೆಯನ್ನೊಳಗೊಂಡ ದೇವಾಲಯವನ್ನು ಇಲ್ಲಿ ನಿರ್ಮಾಣ ಮಾಡಲಾಗಿದೆ. ದೇವಾನು ದೇವತೆಗಳಲ್ಲಿ ಮಹಾನ್ ದೇವರಾಗಿರೋ ಗಣೇಶನಿಗೆ ತೇತ್ರಾಯುಗದಲ್ಲಿ ಶ್ರೀರಾಮಚಂದ್ರ ರಾವಣನ ಮೇಲೆ ಯುದ್ದಕ್ಕೆ ಹೋಗುವ ಮುನ್ನ, ಇಲ್ಲಿಗೆ ಬಂದು ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದನೆಂಬ ಪ್ರತೀತಿ ಕೂಡ ಇದೆಯಂತೆ.ಈ ಗಣೇಶನಿಗೆ ಪೂಜೆ ಸಲ್ಲಿಸಿದ್ದರಿಂದಲೇ ಶ್ರೀರಾಮಚಂದ್ರನಿಗೆ ಯುದ್ದದಲ್ಲಿ ಯಶಸ್ಸು ಸಿಕ್ಕಿದ್ದು ಎಂದು ಹೇಳಲಾಗುತ್ತದೆ. ದ್ವಾಪರಯುಗದಲ್ಲಿ ಪಾಂಡವರು ಕೌರವರ ಮೇಲೆ ಯುದ್ದಕ್ಕೆ ಹೋಗುವ ಮುನ್ನ ಇಲ್ಲಿನ ಮಹಾಗಣಪತಿಗೆ ಪೂಜೆ ಸಲ್ಲಿಸಿದ್ದರು.ಇದಲ್ಲದೆ ಚೌತಿಯಂದು ಚಂದ್ರನನ್ನು ನೋಡಿದ ಶ್ರೀಕೃಷ್ಣನಿಗೆ ಶಮಂತಕಮಣಿಯ ಕದ್ದನೆಂಬ ಅಪವಾದವನ್ನು ಈ ಗಣೇಶನ ದರ್ಶನದಿಂದಲೇ ಬಗೆಹರಿಸಿಕೊಂಡ ಅನ್ನೋದು ಪುರಾಣಗಳಲ್ಲಿದೆ. ಅದೇ ರೀತಿ ಈಗಲೂ ಚೌತಿಯ ಚಂದ್ರನ ದರ್ಶನ ಮಾಡಿದವರು ಗಣೇಶನ ದರ್ಶನದಿಂದ ಪಾಪ ಪರಿಹಾರವಾಗುತ್ತದೆ ಎನ್ನಲಾಗಿದೆ. ಹೀಗೆ ಈ ಮಹಾಗಣಪನ ಕೃಪೆಗೆ ಮೂರು ಕಾಲದ ದೇವಾನು ದೇವತೆಗಳು ಪಾತ್ರರಾಗಿದ್ದಾರೆ. ಅಲ್ಲದೆ ಈ ಮೂರು ಯುಗಗಳಲ್ಲಿ ಚಿಕ್ಕ ಸಾಲಿಗ್ರಾಮದ ಶಿಲೆಯಾಗಿದ್ದ ಗಣಪ ಸುಮಾರು 18 ಅಡಿಗಳವರೆಗೆ ಬೆಳೆದು ಕಲಿಯುಗದಲ್ಲಿ ಬೆಳವಣಿಗೆಯನ್ನ ನಿಲ್ಲಿಸಲಾಗಿದೆ ಎನ್ನಲಾಗಿದೆ. ರಾಮಾಯಣದಲ್ಲಿ ಆಂಜನೇಯ ಲಂಕೆಯಲ್ಲಿದ್ದ ಸೀತಾ ದೇವಿಗೆ ರಾಮನ ಚಿತ್ರವಿರುವ ಉಂಗುರವನ್ನು ನೀಡಿದ್ದು. ಪಾಂಡವರು ಕೌರವರ ಮೇಲೆ ಯುದ್ದ ಮಾಡಿದ ದೃಶ್ಯಗಳು ಇಲ್ಲಿವೆ. ಇದಲ್ಲದೆ ಶ್ರೀಕೃಷ್ಣ ದೇವರಾಯ ಮನೆ ದೇವತೆಯಾದ ಶ್ರೀ ಚಾಮುಂಡಿದೇವಿಯ ಚಿತ್ರಣವನ್ನು ಕೆತ್ತಲಾಗಿದೆ. ದೇವಸ್ಥಾನಕ್ಕೆ ಹೊಂದಿ ಕೊಂಡಂತೆ ಪಕ್ಕದಲ್ಲಿ ಬೆಟ್ಟವೂ ಕೂಡ ಇದೆ, ಕೌಂಡಿನ್ಯ ಮಹರ್ಷಿಗಳ ತಪಸ್ಸು ಮಾಡಿರುವಂತಹ ಸ್ಥಳ ಇದಾಗಿದ್ದು, ಇಲ್ಲಿ ಕೌಂಡಿನ್ಯ ನದಿಯ ಉಗಮ ಸ್ಥಾನವೂ ಇದಾಗಿದೆ. ಹೀಗಾಗಿ ಪ್ರಪಂಚದಲ್ಲೇ ಏಕೈಕ ಸಾಲಿಗ್ರಾಮ ಶಿಲೆಯ ಮಹಾಗಣಪನಿಗೆ ಮೊದಲ ಪೂಜೆ ಈ ಕೌಂಡಿನ್ಯ ಮಹರ್ಷಿಗಳಿಂದಲೇ ಎನ್ನುವ ಪ್ರತೀತಿ ಕೂಡ ಇದೆ.ಈ ಕುಟಾದ್ರಿ ಕುರುಡು ಮಲೆಯಲ್ಲಿದೆ. 15 ತಲೆಮಾರುಗಳಿಂದ ಇಲ್ಲಿ ಅರ್ಚಕರು ಪೂಜೆ ಸಲ್ಲಿಸುತ್ತಾ ಬಂದಿದ್ದಾರೆ. ರಾಜ್ಯವೇ ಅಲ್ಲದೆ ನೆರೆ ರಾಜ್ಯದ ಸಾವಿರಾರು ರಾಜಕಾರಣಿಗಳು, ವಿವಿಧ ಪಕ್ಷಗಳ ಮುಖಂಡರು ಇಲ್ಲಿಗೆ ಬರುತ್ತಾರೆ, ಇಲ್ಲಿ ಬಂದು ಪೂಜೆ ಸಲ್ಲಿಸಿದ ನಂತರವಷ್ಟೆ ಯಾವುದೇ ಕಾರ್ಯವನ್ನ ಆರಂಭ ಮಾಡುವುದು. ಇನ್ನು ಇಲ್ಲಿನ ಚಕಿತಗಳು ಅಂದ್ರೆ ನಾಗದೋಷಗಳು ಇಷ್ಟಾರ್ಥಗಳು ಇಲ್ಲಿ ಬಗೆಹರಿಯುತ್ತವೆ ಅನ್ನೋದಕ್ಕೆ ಇಂದಿಗೂ ಅದೆಷ್ಟೋ ಜೀವಂತ ನಿದರ್ಶನಗಳಿವೆ.ಇಲ್ಲಿನ ಮಹಾಗಣಪನ ಹೊಟ್ಟೆಯಲಿ ಸರ್ಪ ಇರುವುದರಿಂದ, ಸರ್ಪ ದೋಶವಿರುವವರು ಇಲ್ಲಿಗೆ ಒಮ್ಮೆ ಭೇಟಿ ನೀಡಿ, ಇಲ್ಲಿನ ಏಕೈಕ ಸಾಲಿಗ್ರಾಮ ಶಿಲೆಯ ಗಣಪನಿಗೆ ಪೂಜೆ ಸಲ್ಲಿಸಿದ್ರೆ ಹಲವಾರು ಸರ್ಪ ದೋಷಗಳು ನಿವಾರಣೆಯಾಗುತ್ತವೆ. ಅಲ್ಲದೆ ಸಂತಾನ, ಉದ್ಯೋಗ ಇನ್ನಿತರ ಸಂಕಷ್ಟಗಳ ನಿವಾರಣೆಗಾಗಿ ಪರಿಹಾರಕ್ಕಾಗಿ ಇಲ್ಲಿ ಸುಮಾರು 48 ದಿನಗಳ ಕಾಲ ಮಂಡಲ ಪೂಜೆಯನ್ನ ಮಾಡಲಾಗುತ್ತದೆ. ಅಲ್ಲದೆ ಗಣೇಶ ಚತುರ್ಥಿಯಂದು ಐದು ದಿನಗಳ ಕಾಲ ಬ್ರಹ್ಮ ರಥೋತ್ಸವಗಳು, ಪುಷ್ಪಪಲ್ಲಕ್ಕಿ, ಲಕ್ಷ್ಮೀಗಣಪತಿ ಉತ್ಸವಗಳು ನಡೆಯುತ್ತವೆ. ಗಣೇಶ ಚತುರ್ಥಿಯ ಹಿಂದಿನ ದಿನದಂದು ಗೌರಿ ಹಬ್ಬದ ಸಲುವಾಗಿ ಅಂಕುರಾರ್ಪಣೆ ಪೂಜೆ ನಡೆಯುತ್ತದೆ. ಗಣಪತಿ ದಿನದ ರಾತ್ರಿ ಲಕ್ಷ್ಮೀಗಣಪತಿಯ ಕಲ್ಯಾಣೋತ್ಸವವನ್ನ ವಿಜೃಂಭಣೆಯಿಂದ ಮಾಡಲಾಗುತ್ತದೆ. ಇದಾದ ನಂತರ ಗಣಪತಿ ರಥೋತ್ಸವ ನಡೆಯುತ್ತದೆ. ನಂತರ ದೀಪೋತ್ಸವ, ವಸಂತೋತ್ಸವ, ಪುಷ್ಪಪಲ್ಲಕ್ಕಿ ಶೈನೋತ್ಸವ, ಹೀಗೆ ಹಬ್ಬದ ಹಿಂದಿನ ದಿನದಿಂದ ಸುಮಾರು 5 ದಿನಗಳ ವರೆಗೆ ಇಲ್ಲಿ ವಿಶೇಷ ಪೂಜೆಗಳನ್ನ ಮಹಾಗಣಪನಿಗೆ ಮಾಡಲಾಗುತ್ತದೆ.ನಾಲ್ಕು ಯುಗಗಳಿಂದ ಪೂಜಿಸಲ್ಪಡುತ್ತಿರುವ ಕುರುಡುಮಲೆ ಗಣಪತಿಯು ಕಲಿಯುಗದಲ್ಲೂ ತನ್ನ ಚಮತ್ಕಾರವನ್ನು ತೋರಿಸುತ್ತಿದ್ದಾನೆ. ಹಾಗಾಗಿನೆ ಇಲ್ಲಿಗೆ ಈ ವಿಶೇಷ ದಿನದಲ್ಲಿ ಗಣೇಶನ ದರ್ಶನಕ್ಕೆ ಲಕ್ಷಾಂತರ ಜನ ಭಕ್ತಾದಿಗಳು ಬರ್ತಾರೆ. ಇಲ್ಲಿಯ ಗಣಪನ ವಿಶೇಷವಾದ ಚಮತ್ಕಾರ ಅಂದ್ರೆ ಕೇತುವಿನ ದೋಷ ಪರಿಹಾರವಾಗುತ್ತದೆ. ಇದ್ರಿಂದಾಗಿ ನೆರೆ ರಾಜ್ಯಗಳಿಂದ,ತುಂಬಾ ದೂರದಿಂದ ಇಲ್ಲಿಗೆ ಭಕ್ತಾಧಿಗಳು ಬರುತ್ತಾರೆ, ಅದಕ್ಕಾಗಿ ಇಂದಿಗೂ ರಾಜಕೀಯ ನಾಯಕರ ದಂಡೇ ಈ ಗಣೇಶನಿಗೆ ಪರ್ಮನೆಂಟ್ ಭಕ್ತರು. ಮಾತ್ರವಲ್ಲದೆ ನೆರೆಯ ರಾಜ್ಯಗಳ ಚುನಾವಣೆ ಸಂದರ್ಭದಲ್ಲೂ ಕೂಡ ಈಗಣೇಶನಿಗೆ ಬೇಡಿಕೆ ಹೆಚ್ಚಾಗಿರುತ್ತೆ. ಹಾಗಾಗಿ ಇತರೆ ರಾಜ್ಯದ ಭಕ್ತರಿಗೂ ಈ ವಿನಾಯಕ ಅಚ್ಚುಮೆಚ್ಚು. ಹೆಚ್.ಡಿ.ದೇವೇಗೌಡರು ೧೯೯೮ರಲ್ಲಿ ಇದೇ ಕುರುಡುಮಲೆ ಗಣಪತಿ ದೇವಾಲಯಕ್ಕೆ ಪೂಜೆ ಸಲ್ಲಿಸಿ ಹೋದ ನಂತರ 1994 ರಲ್ಲಿ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಮುಖ್ಯಮಂತ್ರಿಗಳಾಗಿ ಆಯ್ಕೆಯಾದರು. ದೇವೇಗೌಡರು ರಾಜ್ಯದಲ್ಲಿ ಎರಡು ವರ್ಷಗಳ ಕಾಲ ಸಿಎಂ ಆಗಿ ಅಧಿಕಾರ ನಡೆಸಿದ ನಂತರ, ದೇವರ ಕೃಪೆ ಮತ್ತು ಆಚನಕ್ ಆಗಿ 1996 ರಲ್ಲಿ ದೇಶದ ಪ್ರಧಾನ ಮಂತ್ರಿಯಾಗಿ ಸುಮಾರು 11 ತಿಂಗಳ ಕಾಲ ಸೇವೆ ಸಲ್ಲಿಸಿದ್ರು. ಈ ಹಿನ್ನಲೆಯಲ್ಲಿ ಇಂದಿಗೂ ಸಹ ಮಾಜಿ ಪ್ರಧಾನಿ ಮಂತ್ರಿ ದೇವೇಗೌಡರು ಈ ದೇವರಿಗೆ ಪರ್ಮನೆಂಟ್ ಭಕ್ತರು. ಜೊತೆಗೆ ತಮ್ಮ ಪ್ರತಿ ಚುನಾವಣಾ ಕಾರ್ಯವನ್ನು ಮೂಡಣ ಬಾಗಿಲನಿಂದ ಪ್ರಾರಂಭಿಸುವ ದೇವೇಗೌಡರು ಈ ಬಾರಿಯೂ ಸಹ ಎಲ್ಲರಿಗೂ ಮೊದಲೇ ದೇವರಿಗೆ ನಮನ ಸಲ್ಲಿಸಿ, ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ತರುವುದಾಗಿ ಸಹ ಹೇಳಿದ್ದಾರೆ. ಇವರ ಮಗ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಸಹ ತಮ್ಮ ಚುನಾವಣೆ ಕಾಯಕವನ್ನು ಇಲ್ಲಿಂದಲ್ಲೇ ಪ್ರಾರಂಭಿಸಿ ಯಶಸ್ಸು ಸಾಧಿಸಿ 2006-07ರಲ್ಲಿ ಸುಮಾರು 20 ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿದ್ರು. ಇನ್ನು ಎಸ್.ಎಂ.ಕೃಷ್ಣ ಅವರು 1999 ರ ಹಿಂದೆ ರಾಜ್ಯದಲ್ಲಿ ಅಧಿಕಾರವಿಲ್ಲದೆ ಕಂಗಾಲಾಗಿದ್ದ ಕಾಂಗ್ರೆಸ್ ಪಕ್ಷ ಅಂದಿನ ಹೈಕಮಾಂಡ್ ಎಸ್.ಎಂ.ಕೃಷ್ಣ ಅವ್ರಿಗೆ 1999ರಲ್ಲಿ ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ನೀಡಿದ್ರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟ ಎಸ್.ಎಂ.ಕೃಷ್ಣ ಚುನಾವಣಾ ಪ್ರಚಾರವನ್ನು ಕೋಲಾರದ ಕುರುಡುಮಲೆ ಗಣಪತಿ ದೇವಾಲಯದಿಂದ ಪಾಂಚಜನ್ಯ ಯಾತ್ರೆ ಮೂಲಕ ಪ್ರಾರಂಭಿಸಿ ಈಡೀ ರಾಜ್ಯಾದ್ಯಂತ ಪ್ರವಾಸ ಮಾಡಿದ ಪರಿಣಾಮ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾಕ್ಕೆ ಬಂತು. ಎಸ್.ಎಂ.ಕೃಷ್ಣಾ ಸಿಎಂ ಆಗಿ ಆಯ್ಕೆಯಾಗಿ 5 ವರ್ಷಗಳ ಕಾಲ ಅಧಿಕಾರ ನಡೆಸಿದ್ರು. 2012 ರಲ್ಲಿ ಇಂದಿನ ಸಿಎಂ ಸಿದ್ದರಾಮಯ್ಯ ಕೆಪಿಸಿಸಿ ಅಧ್ಯಕ್ಷರಾದ ಪರಮೇಶ್ವರ ಸಹ ಕಾಂಗ್ರೆಸ್ ಚುನಾವಣಾ ಪ್ರಚಾರ ಕಾರ್ಯವನ್ನು ಇಲ್ಲಿಂದಲ್ಲೇ ಪ್ರಾರಂಭಿಸಿ ಈಡೀ ರಾಜ್ಯವನ್ನು ಸುತ್ತಾಡಿದ ಪರಿಣಾಮ 2013 ರಲ್ಲಿ ಕಾಂಗ್ರೆಸ್ ಪಕ್ಷ ಪೂರ್ಣ ಬಹುಮತ ಪಡೆದು ರಾಜ್ಯದಲ್ಲಿ ಅಧಿಕಾರಕ್ಕೆ ಬಂದು ಸಿದ್ದರಾಮಯ್ಯ ಸಿಎಂ ಆಗಿ ಆಯ್ಕೆಯಾದ್ರು. ಇದೇ ಪರಿಪಾಠವನ್ನು ಮುಂದುವರೆಸಿರುವ ಕಾಂಗ್ರೆಸ್ ಪಕ್ಷ ಮುಂದಿನ 2018 ರ ಚುನಾವಣೆ ಪ್ರಚಾರ ಕಾರ್ಯವನ್ನ ಕೂಡ ಇಲ್ಲಿಂದಲೇ ಆರಂಭ ಮಾಡಿದ್ದಾರೆ. ಅದಕ್ಕಾಗಿ ಹೀಗಾಗಲೇ ಅಕ್ಟೋಬರ್-14 ರಂದು ಕುರುಡುಮಲೆ ದೇವಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಹಾಗೂ ಅವರ ಸಚಿವ ಸಂಪುಟದ ಸದಸ್ಯರು ಆಗಮಿಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ರಣಕಹಳೆಯನ್ನು ಊದಿ ಮುಂದಿನ ಚುನಾವಣೆಯಲ್ಲೂ ಕಾಂಗ್ರೆಸ್ ಬಂದೇ ಬರುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇನ್ನು ಸಿಎಂ. ಸಿದ್ದರಾಮಯ್ಯ ಅವ್ರಿಗೆ ದೇವರು ಅಂದ್ರೆ ಅಷ್ಟೊಂದು ನಂಬಿಕೆ ಇಲ್ಲವೆಂದು ಜನ್ರ ಮುಂದೆ ಬಿಂಬಿಸಿದರೂ ಸಹ ಚುನಾವಣೆ ಸಂದರ್ಭದಲ್ಲಿ ಈ ದೇವರಿಗೆ ಶಿರಭಾಗಿ ನಮನ ಸಲ್ಲಿಸಿ ಪೂಜೆ ಸಲ್ಲಿಸುತ್ತಾರೆ. 2013 ರಲ್ಲೂ ಪೂಜೆ ಸಲ್ಲಿಸಿ ಹೋಗಿದ ಸಿದ್ದರಾಮಯ್ಯ ಅವರು ಈ ಬಾರಿಯೂ ಸಹ ಅಂದ್ರೆ ಇದೇ ವರ್ಷ ಆ.14 ರಂದು ಕುರುಡುಮಲೆ ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ಹೋಗಿದ್ದಾರೆ. ಇನ್ನು ಸಿಎಂ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಹ ತಮ್ಮ ರಾಜಕೀಯ ಪ್ರವೇಶಕ್ಕೆ ಇರಾದೆಯನ್ನು ವ್ಯಕ್ತಪಡಿಸಿರುವ ಹಿನ್ನಲೆಯಲ್ಲಿ ಅಕ್ಟೋಬರ್ 22 ರಂದು ಕೋಲಾರದ ಕುರುಡುಮಲೆ ಗಣಪತಿ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸಿ ಹೋಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಸಿಎಂ ಪುತ್ರ ರಾಕೇಶ್ ನಿಧನರಾದ ಮೇಲೆ ಡಾ.ಯತ್ರೀಂದ್ರ ರಾಜಕೀಯ ಪ್ರವೇಶ ಮಾಡುತ್ತಾರೆ ಎಂಬ ಮಾತುಗಳು ಸಾರ್ವಜನಿಕ ಕ್ಷೇತ್ರದಲ್ಲಿ ಕೇಳಿ ಬರುತ್ತಿರುವಾಗಲೇ ಯತೀಂದ್ರ ಕೋಲಾರದ ಕುರುಡುಮಲೆ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿರುವುದು ರಾಜಕೀಯ ಪ್ರವೇಶಕ್ಕೆ ಸಾಕಷ್ಟು ಮತ್ತಷ್ಟು ಪುಷ್ಟೀ ಸಿಕ್ಕಿದೆ.ಇದೇ ರೀತಿ ಇಂದು ರಾಜ್ಯದ ಎಲ್ಲಾ ಪಕ್ಷಗಳ ಮುಖಂಡರೂ ಸಹ ಈ ಪವರ್ ಪುಲ್ ಗಣಪತಿಗೆ ಪೂಜೆ ಸಲ್ಲಿಸಿಯೇ ನಂತರ ತಮ್ಮ ಮುಂದಿನ ಕೆಲಸವನ್ನು ಪ್ರಾರಂಭಿಸುವುದು ವಾಡಿಕೆಯಾಗಿದೆ.ಒಟ್ನಲ್ಲಿ ವಿಶ್ವದಲ್ಲೇ ಏಕೈಕ, ಏಕಶಿಲಾ, ಸಾಲಿಗ್ರಾಮ ಶಿಲೆಯ 18 ಅಡಿ ಎತ್ತರದ ಗಣೇಶ ಮೂರ್ತಿಯ ಶಕ್ತಿಅಪಾರವಾದುದ್ದು.
ವರದಿ- ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Click to comment

Trending

Exit mobile version