Uncategorized

ನಾಗಮಂಗಲ ಸಿಟಿ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಬಿ.ಸಿ.ವಸಂತ ಶ್ರೀಕಂಠಯ್ಯ ಪದಗ್ರಹಣ..!

Published

on

ನಾಗಮಂಗಲ: ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ದೇವಲಾಪು ಹೋಬಳಿ, ಶಿಲ್ಪಾಪುರ ಗ್ರಾಮದ ಹೊರವಲಯದ ಫಾರ್ಮ್ ಹೌಸ್ನಗಲ್ಲಿ ಆಯೋಜಿಸಲಾಗಿದ್ದ ಸೇವಾ ಸಂಕಲ್ಪ ಸರಳ ಸಮಾರಂಭದಲ್ಲಿ ಅಧ್ಯಕ್ಷಗಾದಿಯ ಸೇವಾ ಸಂಕಲ್ಪ ಪ್ರತಿಜ್ಞಾವಿಧಿ ಪಠಿಸುವ ಮೂಲಕ 2020-21 ಸಾಲಿನ ನಾಗಮಂಗಲ ಸಿಟಿ ಲಯನ್ಸ್ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಶ್ರೀಮತಿ ಬಿ.ಸಿ.ವಸಂತ ಶ್ರೀಕಂಠಯ್ಯ ಅಧಿಕಾರ ಸ್ವೀಕರಿಸಿದರು. ನಂತರ ಮಾತನಾಡಿದ ಅವರು, ಯಾವುದೇ ಸಂಘ ಅಥವಾ ಸಂಸ್ಥೆಯ ಯಶಸ್ವಿಗೆ ಸದಸ್ಯರ ನಿಷ್ಕಲ್ಮಶ ಮತ್ತು ಪಾರದರ್ಶಕತೆಯ ಸಹಕಾರ ಅತ್ಯಗತ್ಯ. 1917ರಲ್ಲಿ ಪ್ರಾರಂಭವಾಗಿ 103 ಸಂವತ್ಸರಗಳನ್ನು ಪೂರೈಸುವ ಮೂಲಕ ವಿಶ್ವದ 216 ದೇಶಗಳಲ್ಲಿ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿರುವ ಲಯನ್ಸ್ ಸಂಸ್ಥೆಯಲ್ಲಿ ಸಾರ್ವಜನಿಕ ಸೇವೆಗೆ ಅವಕಾಶ ಸಿಗುವುದೇ ಒಂದು ಪುಣ್ಯ.ಇಂತಹ ಸಂಸ್ಥೆಗೆ ಸದಸ್ಯರಾಗುವುದರ ಜೊತೆಗೆ ಸಭೆಗಳಿಗೆ ತಪ್ಪದೇ ಹಾಜರಾಗುವುದು ಅತೀ ಮುಖ್ಯ.ನೆಪಮಾತ್ರದ ಸದಸ್ಯತ್ವದಿಂದ ಯಾವುದೇ ಪ್ರಯೋಜನವಿಲ್ಲ. ಸಂಸ್ಥೆಯ ನಡಾವಳಿಯ ಅರಿವಿನ ಹೊರತು ಸಂಸ್ಥೆಯಲ್ಲಿನ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಕಷ್ಟ.ಅಂತೆಯೇ ನೂತನವಾಗಿ ಅಸ್ಥಿತ್ವಕ್ಕೆ ಬರುವ ಸಂಸ್ಥೆಗಳಿಗೆ ಹಿರಿಯರ ಮಾರ್ಗದರ್ಶನ ಸಂಜೀವಿನಿ ಇದ್ದಂತೆ. ಈ ನಿಟ್ಟಿನಲ್ಲಿ ಸರ್ವ ಸದಸ್ಯರ ಸಹಕಾರದೊಂದಿಗೆ ಸಂಸ್ಥೆಯ ಶಿಷ್ಠಾಚಾರ ಪಾಲಿಸುವ ಮೂಲಕ ಸಾರ್ವಜನಿಕ ಸೇವೆಯಲ್ಲಿ ಸಾಧನೆಯ ಗುರಿ ತಲುಪೋಣ ಎಂದು ಆಶಯ ವ್ಯಕ್ತಪಡಿಸಿದರು. ಸಂಸ್ಥೆಗೆ ನೂತನವಾಗಿ ಸದಸ್ಯತ್ವ ಪಡೆದ ವಿಧಾನ ಪರಿಷತ್ ಸದಸ್ಯ ಎನ್.ಅಪ್ಪಾಜಿಗೌಡ ಮಾತನಾಡಿ, ಸಂಸ್ಥೆಯ ಸದಸ್ಯರಲ್ಲಿ ಕೀಳರಮೆ ಮತ್ತು ಸ್ವಪ್ರತಿಷ್ಟೆಯ ಜತೆಗೆ ಒಣಜಂಭ ಬೇಡ. ಸಮಾಜದ ಕಟ್ಟ ಕಡೆಯ ವ್ಯಕ್ತಿಗಳನ್ನು ಗುರುತಿಸುವ ಮೂಲಕ ಸಹಕಾರದ ಹಸ್ತ ನೀಡೋಣ. ಸಾಮಾನ್ಯ ಆರೋಗ್ಯ ತಪಾಸಣೆ ಶಿಬಿರಗಳಿಗಿಂತ ತನ್ನ ಗಂಡ ಸೇರಿದಂತೆ ಕುಟುಂಬದ ಯಾರೋಬ್ಬರಲ್ಲಿಯೂ ಹೇಳಿಕೊಳ್ಳಲು ಇಷ್ಟಪಡದೆ ವೈದ್ಯರಲ್ಲಿ ಮಾತ್ರ ತಮ್ಮ ಆರೋಗ್ಯ ಸಮಸ್ಯೆಗಳನ್ನು ಹಂಚಿಕೊಳ್ಳುವ ಮಹಿಳೆಯರಿಗಾಗಿ, ಮಹಿಳಾ ಆರೋಗ್ಯ ತಪಾಸಣೆ ಶಿಬಿರಗಳನ್ನು ಆಯೋಜಿಸುವ ಮೂಲಕ ವಿಶೇಷ ಗಮನ ಹರಿಸೋಣ. ಈ ಪ್ರಯತ್ನಕ್ಕೆ ನನ್ನ ವೈಯಕ್ತಿಕ ಸಹಕಾರವೂ ಇರುತ್ತದೆ. ಸಂಸ್ಥೆಯ ಶಿಷ್ಟಾಚಾರಕ್ಕೆ ತಲೆಬಾಗುವ ಮೂಲಕ ಸಾರ್ವಜನಿಕ ಸೇವಾ ಕೈಂಕರ್ಯದಲ್ಲಿ ನಾಗಮಂಗಲ ಸಿಟಿ ಲಯನ್ಸ್ ಘಟಕ ಮಾದರಿಯಾಗಲಿ ಎಂದು ಆಶೀಸಿದರು. ಶ್ರೀ ಆದಿಚುಂಚನಗಿರಿ ಮಠದ ಆಡಳಿತಾಧಿಕಾರಿ ಹಾಗೂ ಸಂಸ್ಥೆಯ ನಿರ್ದೇಶಕರಾದ ಡಾ.ಜೆ.ಎನ್.ರಾಮಕೃಷ್ಣೇಗೌಡ ಆಶಯ ನುಡಿಗಳಾಡಿದರು. ಇದೇ ವೇದಿಕೆಯಲ್ಲಿ ಆರೋಗ್ಯ ಇಲಾಖೆಯ ಕರೊನಾ ಸೇನಾನಿಗಳನ್ನು ಸನ್ಮಾನಿಸುವ ಮೂಲಕ ಗೌರವಿಸಲಾಯಿತು.ಈ ಸಂದರ್ಭ ನಿಕಟಪೂರ್ವ ಅಧ್ಯಕ್ಷ ವೈ.ಡಿ.ಶಿವಣ್ಣ, ಉಪಾಧ್ಯಕ್ಷ ದಾಸೇಗೌಡ, ಕಾರ್ಯದರ್ಶಿ ಬಿ.ಆರ್.ನಂದ ಕೀಶೋರ್, ಖಜಾಂಚಿ ಗೀತಾ ತಿಮ್ಮೇಗೌಡ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾದ್ಯಕ್ಷ ಸಿ.ಕೆ.ರವಿಕುಮಾರ್ ಚಾಮಲಾಪುರ ಹಾಗೂ ಹಿರಿಯ ಪತ್ರಕರ್ತ ಎಲ್.ಪ್ರಕಾಶ್ ಸೇರಿದಂತೆ ಸಂಸ್ಥೆಯ ಜಿಲ್ಲಾ ಮತ್ತು ರಾಜ್ಯ ಮಟ್ಟದ ಪದಾಧಿಕಾರಿಗಳು ಇದ್ದರು.

ವರದಿ-ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ

Click to comment

Trending

Exit mobile version