ಮಂಡ್ಯ

ನಾಗಮಂಗಲದಲ್ಲಿ 500 ರ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ

Published

on

ನಾಗಮಂಗಲ: ಸಮುದಾಯದ ಹಂತದಲ್ಲಿ ದಿನದಿಂದ ದಿನಕ್ಕೆ ತನ್ನ ಕಬಂದ ಬಾಹುಗಳ ವಿಸ್ತಾರವನ್ನು ಹೆಚ್ಚಿಸುತ್ತಿರುವ ಕೋವಿಡ್‍ಗೆ ತಾಲೂಕಿನಲ್ಲಿ ಆಗಸ್ಟ್ ಅಂತ್ಯದ ವೇಳೆಗೆ 500 ರ ಗಡಿದಾಟಿದೆ. 12 ಸಾವಿರಕ್ಕೂ ಹೆಚ್ಚು ಕೋವಿಡ್ ಪರೀಕ್ಷೆಯಲ್ಲಿ ಆ.30 ಕ್ಕೆ 508 ಕರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿರುವ ಪೈಕಿ 315 ಮಂದಿಗಳು ಗುಣಮುಖರಾಗಿ 185 ಸಕ್ರಿಯ ಪ್ರಕರಣಗಳಾಗಿ ಚಿಕಿತ್ಸೆಗೆಒಳಗಾಗಿದ್ದಾರೆ. ಕರೊನಾ ಮಾಹಮಾರಿ ಪತ್ತೆಯಾದ ಪ್ರಾರಂಭದ ಎಪ್ರಿಲ್ ತಿಂಗಳಲ್ಲಿ ಕೇವಲ ಒಬ್ಬರಲ್ಲಿ ಕಂಡುಬಂದಿದ್ದ ಸೋಂಕು, ಮೇ ನಲ್ಲಿ 26, ಜೂನ್ 16, ಜುಲೈ 124 ಹಾಗೂ ಆಗಸ್ಟ್‍ನಲ್ಲಿ 341 ಪ್ರಕರಣಗಳು ತಾಲೂಕಿನಲ್ಲಿ ಪತ್ತೆಯಾಗಿವೆ. ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ರೋಟರಿ ಸಂಸ್ಥೆಯವತಿಯಿಂದ ಆಯೋಜಿಸಲಾಗಿದ್ದ ಕರೊನಾ ಸೇನಾನಿಗಳಿಗೆ ಸನ್ಮಾನದ ಗೌರವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ತಹಸೀಲ್ದಾರ್ ಕುಂಞ ಅಹಮ್ಮದ್, ಜ್ವರ, ಕೆಮ್ಮು ಹಾಗೂ ನೆಗಡಿ ಸೇರಿದಂತೆ ಯಾವುದೇ ರೀತಿಯ ಅನಾರೋಗ್ಯ ಗುಣಲಕ್ಷಣಗಳು ಕಂಡು ಬಂದಲ್ಲಿ ವೈದ್ಯರಲ್ಲಿ ತಪಾಸಣೆಗೆ ಒಳಗಾಗುವ ಬಗ್ಗೆ ತತ್ಸಾರ ಬೇಡ ಎಂದು ಮನವಿ ಮಾಡಿದರು.
ವಿಶ್ವಮಟ್ಟದಲ್ಲಿ ಸಾಮಾಜಿಕ ಸೇವಾ ಕ್ಷೇತ್ರದಲ್ಲಿ ಮುಖ್ಯವಾಹಿನಿಯಲ್ಲಿರುವ ರೋಟರಿ ಸಂಸ್ಥೆ ಕರೊನಾ ನಿಯಂತ್ರಣ ವಿಷಯದಲ್ಲಿ ಸರ್ಕಾರದೊಂದಿಗೆ ಕೈಜೋಡಿಸಿದೆ. ತುರ್ತುವಾಹನಗಳ ಚಾಲಕರು ಹಾಗೂ ಪ್ರಯೋಗಾಲಯದ ತಂತ್ರಜ್ಞರಂತಹ ತಳಮಟ್ಟದ ಕರೊನಾ ಸೇನಾನಿಗಳನ್ನು ಗುರುತಿಸಿ ಗೌರವಿಸುವ ಸತ್ಕಾರ್ಯ ನಿಜಕ್ಕೂ ಪ್ರಶಂಸನೀಯ. ದಿನದಿಂದ ದಿನಕ್ಕೆ ಸಡಿಲಗೊಳ್ಳುತ್ತಿರುವ ಆನ್‍ಲಾಕ್ ನಿಯಮದಿಂದ ಸಾರ್ವಜನಿಕ ವಲಯಯದ ಆರ್ಥಿಕ ಸ್ಥಿತಿ ಸುಧಾರಿಸಬಹುದಾದರೂ ಸ್ವಯಂ ಜಾಗೃತಿ ಅತ್ಯವಶ್ಯಕ ಎಂದರು.ಈ ಸಂದರ್ಭ ಪ್ರಭಾರ ಟಿಹೆಚ್‍ಒ ಡಾ.ಶರತ್, ಪಟ್ಟಣದ ರೋಟರಿ ಸಂಸ್ಥೆಯ ಅಧ್ಯಕ್ಷ ಮೋಹನ್, ಹಿರಿಯ ಸದಸ್ಯರುಗಳಾದ ಸಿ.ಕುಮಾರ್, ಧರ್ಮೇಂದ್ರ, ಯುವ ಮುಖಂಡರಾದ ಶರತ್‍ರಾಮಣ್ಣ ಹಾಗೂ ಗಿರೀಶ್ ಸೇರಿದಂತೆ ಮತ್ತಿತರರು ಇದ್ದರು.

ವರದಿ-ಎಸ್.ವೆಂಕಟೇಶ್.
ಎಕ್ಸ್‌ಪ್ರೆಸ್‌ ಟಿವಿ ನಾಗಮಂಗಲ.

Click to comment

Trending

Exit mobile version