Uncategorized

ಗೋಕಟ್ಟೆ ಉಳಿವಿಗಾಗಿ ಗ್ರಾಮಸ್ಥರ ಪ್ರತಿಭಟನೆ…!

Published

on

ನಾಗಮಂಗಲ: ಗೋಕಟ್ಟೆ ಉಳಿಸಿ-ಜಾನುವಾರುಗಳನ್ನು ರಕ್ಷಿಸಿ ಎಂಬ ಘೋಷವಾಕ್ಯದಡಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲ್ಲೂಕಿನ ಉಪ್ಪಾರಹಳ್ಳಿ ಮತ್ತು ಬಸವೇಶ್ವರನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕುವ ಮೂಲಕ ಪ್ರತಿಭಟಿಸಿದರು. ಪಟ್ಟಣದ ವ್ಯಾಪ್ತಿಯ ಮೈಲಾರಪಟ್ಟಣ ಮುಖ್ಯ ರಸ್ತೆಗೆ ಹೊಂದಿಕೊಂಡಂತಿರುವ ಉಪ್ಪಾರಹಳ್ಳಿ ಸರ್ವೆ ನಂಬರ್.85 ರ ಸರ್ಕಾರಿ ಖರಾಬು ಜಮೀನಿನಲ್ಲಿರುವ ಗೋಕಟ್ಟೆಯನ್ನು ಪ.ಜಾತಿಗೆ ಸೀಮಿತವಾದ ಸ್ಮಶಾನಕ್ಕೆಂದು ಅವೈಜ್ಞಾನಿಕ ಆದೇಶ ಹೊರಡಿಸಿರುವ ಅಧಿಕಾರಿಗಳ ವಿರುದ್ದ ನೂರಾರು ಸಂಖ್ಯೆಯ ಗ್ರಾಮಸ್ಥರು ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. 1095-96 ರಲ್ಲಿ ನಿಯಮಬಾಹಿರವಾಗಿ ಮಂಜೂರು ಮಾಡುವ ಮೂಲಕ ಸ್ಮಶಾನಕ್ಕೆಂದು ಕಾಯ್ದಿರಿಸಲಾಗಿದ್ದ ಜನೀನಿನ ವಿಷಯವಾಗಿ ಈ ಹಿಂದೆ 2016 ರಲ್ಲಿ ಗ್ರಾಮಸ್ಥರ ಪ್ರತಿಭಟನೆ ಮತ್ತು ಮನವಿಯ ಮೆರೆಗೆ, ಮಂಜೂರಾತಿಯನ್ನು ರದ್ದುಪಡಿಸಲು ಶಿಪಾರಸ್ಸು ಮತ್ತು ಪರ್ಯಾಯ ಜಾಗವನ್ನು ಗುರುತಿಸಿ ಪ್ರಸ್ತಾವನೆ ಸಲ್ಲಿಸುವಂತೆ ತಹಸೀಲ್ದಾರ್ ಗೆ ಅಂದಿನ ಪಾಂಡವಪುರ ಉಪವಿಭಾಗಾಧಿಕಾರಿಗಳು ಸೂಚಿಸಿದ್ದರು. ಆದಾಗ್ಯೂ ಈ ಹಿಂದಿನ ವಿಷಯಗಳನ್ನು ಹಾಗೂ ದಾಖಲಾತಿಗಳನ್ನು ಪರಿಶೀಲಿಸದೆ ಮತ್ತು ಗ್ರಾಮಸ್ಥರ ಗಮನಕ್ಕೆ ತಾರದೆ ಗೋಕಟ್ಟೆಯನ್ನು ಅಳತೆ ಮಾಡಿಸುವ ಮೂಲಕ ಗ್ರಾಮದಲ್ಲಿ ಜಾತಿಗಳ ನಡುವೆ ಕೋಮುಗಲಭೆಯನ್ನು ಸೃಷ್ಟಿಸಿದ ತಹಸೀಲ್ದಾರ್ ನಡೆಯನ್ನು ಖಂಡಿಸಿದರು. ಗ್ರಾಮದಲ್ಲಿ 1500-2000 ವರೆಗೂ ಜಾನುವಾರುಗಳಿದ್ದು ಗ್ರಾಮಕ್ಕಿರುವ ಏಕೈಕ ಗೋಕಟ್ಟೆ ಇದಾಗಿದ್ದು ಅದನ್ನು ಮುಚ್ಚಿಸಿ, ಸ್ಮಶಾನ ಮಾಡಲು ಮುಂದಾಗಿರುವ ತಹಸೀಲ್ದಾರ್ ನಡೆ ಹಾಗೂ ಇಷ್ಟೆಲ್ಲಾ ಘಟನೆಗಳು ನಡೆದರೂ ಸ್ಥಳ ಪರಿಶೀಲನೆ ನಡೆಸದೆ ಜಾಣಕುರುಡುತನ ತೋರುವ ಮೂಲಕ ತಮ್ಮ ಕೆಳಹಂತದ ಸಿಬ್ಬಂದಿಗಳನ್ನು ಕಳುಹಿಸಿ ಕಟ್ಟೆ ಮುಚ್ಚಿಸಲು ಯತ್ನಿಸಿರುವ ಅಧಿಕಾರಿಯ ವಿರುದ್ದ ಕೂಡಲೆ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳನ್ನು ಘೋಷಣೆ ಮೂಲಕ ಒತ್ತಾಯಿಸಿದರು.ತಾಲ್ಲೂಕು ಕಚೇರಿ ಮುತ್ತಿಗೆಗೂ ಮೊದಲು ಟಿಬಿ ಬಡಾವಣೆಯ ಬಿಜಿಎಸ್ ವೃತ್ತದಿಂದ ಮುಖ್ಯರಸ್ತೆಯಲ್ಲಿ ಪ್ರತಿಭಟನೆ ಮೆರವಣಿಗೆ ಸಾಗಿ, ಪಟ್ಟಣದ ಟಿ.ಮರಿಯಪ್ಪ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸುಮಾರು ಅರ್ಧ ಗಂಟೆಗಳ ಕಾಲ ರಸ್ತೆತಡೆ ನಡೆಸಿ ಅಧಿಕಾರಿಗಳ ವಿರುದ್ದ ದಿಕ್ಕಾರ ಕೂಗಿದರು. ತದನಂತರ ಮಿನಿ ವಿಧಾನಸೌಧದ ಆವರಣಕ್ಕೆ ತೆರಳಿ ತಹಸೀಲ್ದಾರ್ ಕುಂಞ ಅಹಮ್ಮದ್ರಅವರಿಗೆ ಮನವಿ ಸಲ್ಲಿಸಿದರು.ಈ ಸಂದರ್ಭ ಪುರಸಭಾ ಸದಸ್ಯೆ ವಸಂತ ಆಶೋಕ್, ಮಾಜಿ ಗ್ರಾ.ಪಂ.ಸದಸ್ಯರಾದ ಕಾಂತರಾಜು, ಅಶೋಕ್ ಮತ್ತು ಸರಸ್ವತಿ ರಾಜಮುಡಿ, ಮುಖಂಡರಾದ ನರಸಿಂಹಮೂರ್ತಿ, ರಾಜಮುಡಿ, ಜಯರಾಜ್, ರಾಘವೇಂದ್ರ, ಸತೀಶ್, ಸ್ವಾಮಿ ಹಾಗೂ ತಿರುಮಲಯ್ಯ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಪಾಲ್ಗೊಂಡಿದ್ದರು

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version