Uncategorized

ವಿವಾದಿತ ಗೋಕಟ್ಟೆ ಸ್ಥಳಕ್ಕೆ ಉಪವಿಭಾಗಾಧಿಕಾರಿ ಭೇಟಿ..!

Published

on

ನಾಗಮಂಗಲ: ಗೋಕಟ್ಟೆ ಉಳಿಸಿ-ಜಾನುವಾರುಗಳನ್ನು ರಕ್ಷಿಸಿ ಎಂಬ ಘೋಷವಾಕ್ಯದಡಿಯಲ್ಲಿ ತಾಲೂಕಿನ ಉಪ್ಪಾರಹಳ್ಳಿ ಮತ್ತು ಬಸವೇಶ್ವರನಗರ ಗ್ರಾಮಸ್ಥರು ಗುರುವಾರ ನಡೆಸಲಾಗಿದ್ದ ಪ್ರತಿಭಟನೆ ಎಸಿ ಕಚೇರಿಯಲ್ಲಿ ಮನವಿ ಸಲ್ಲಿಸಿದ್ದ ಮೇರೆಗೆ ಪಾಂಡವಪುರ ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ ಗೋಕಟ್ಟೆಯ ಸ್ಥಳ ಪರಿಶೀಲನೆ ನಡೆಸಿದರು. ಸ್ಥಳೀಯ ತಹಸೀಲ್ದಾರ್, ರಾಜಸ್ವನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಪಡೆದ ಎಸಿ, ಜೆಸಿಬಿ ಮೂಲಕ ಗೋಕಟ್ಟೆಯ ಏರಿಯನ್ನು ನಾಶಪಡಿಸಿರುವುದನ್ನು ಪರಿಶೀಲಿಸಿದರು. ಗೋಕಟ್ಟೆಯ ನೈಜತೆ ಮತ್ತು ಕಟ್ಟಿಯ ಸುತ್ತ-ಮುತ್ತಲಿನ ವಾಸದ ಮನೆಗಳನ್ನು ವೀಕ್ಷಿಸಿದರು. ಗೋಕಟ್ಟೆಯಿಂದ ಕೂಗಳತೆಯ ದೂರದಲ್ಲಿರುವ ಬಸವಣ್ಣನ ದೇವಾಲಯವನ್ನು ವೀಕ್ಷಿಸುವ ಮೂಲಕ ಸ್ಥಳೀಯ ವಾಸಿಗಳಿಂದ ಸ್ಥಳದ ವಿಶೇಷತೆಯ ಬಗ್ಗೆ ಮಾಹಿತಿ ಪಡೆದರು.ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಉಪವಿಭಾಗಾಧಿಕಾರಿಗಳು, ಗೋಕಟ್ಟೆಯ ಉಳಿವಿಗಾಗಿ ನಿನ್ನೆಯ ದಿನ ಗ್ರಾಮಸ್ಥರು ನೀಡಲಾಗಿದ್ದ ಮನವಿಯ ಮೇರೆಗೆ ಸ್ಥಳ ಪರಿಶೀಲನೆ ಮಾಡಲಾಗುತ್ತಿದೆ. ಮೇಲ್ನೋಟಕ್ಕೆ ಗೋಕಟ್ಟೆ ಇರುವುದು ಕಂಡುಬಂದಿದೆ. ಸದರಿ ಕಟ್ಟೆಗೆ ಹೇಮಾವತಿ ಕಾಲುವೆಯ ಸಂಪರ್ಕವೂ ಇದೆ. ಕಟ್ಟೆಯಿಂದ ಕೂಗಳತೆಯ ದೂರದಲ್ಲಿರುವ ಪುರಾತನ ಕಾಲದ ಬಸವಣ್ಣ ದೇವಾಲಯ ಶಿಥಿಲಗೊಂಡಿದ್ದರೂ, ಪ್ರತಿವರ್ಷದ ಕಾರ್ತಿಕ ಮಾಸದಲ್ಲಿ ಜರುಗುವ ಬಸವಣ್ಣನ ಜಾತ್ರೆಗೆ ಎದುರಿನ ಕಲ್ಯಾಣಿ ಸೇರಿದಂತೆ ಅರಳಿಕಟ್ಟೆ ಸಾಕ್ಷೀಕರಿಸುತ್ತವೆ. ಆದಾಗ್ಯೂ ಸ್ಮಶಾನಕ್ಕಾಗಿ ಪರ್ಯಾಯವಾಗಿ ಗೊತ್ತುಮಾಡಲಾಗಿರುವ ಸರ್ವೆ ನಂಬರ್ 58 ರ ಜಾಗವನ್ನು ಪರಿಶೀಲಿಸಲಾಗಿದೆ. ದಾಖಲಾತಿಗಳಲ್ಲಿ ನಮೂದಾಗಿರುವ ಮತ್ತು ಪ್ರಸ್ತುತ ಜೀವಂತವಾಗಿರುವ ಗೋಕಟ್ಟೆಯ ಜಾಗವನ್ನು ಸ್ಮಶಾನಕ್ಕಾಗಿ ಮೀಸಲಿಟ್ಟಿರುವ ಪ್ರಕ್ರಿಯೆಯನ್ನು ಕೈಬಿಟ್ಟು, ಬದಲಿ ಜಾಗದ ಮಂಜೂರಾತಿಗಾಗಿ ಪ್ರಸ್ತಾವನೆ ಕಳುಹಿಸುವಂತೆ ತಹಸೀಲ್ದಾರ್ ರವರಿಗೆ ಸೂಚಿಸಲಾಗಿದೆ. ಅಂತೆಯೇ ಸಾರ್ವಜನಿಕರ ಮತ್ತು ಸಮುದಾಯದ ಅನುಕೂಲವನ್ನು ಗಮನಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.ಈ ಸಂದರ್ಭ ತಹಸೀಲ್ದಾರ್ ಕುಂಞ ಅಹಮ್ಮದ್, ರಾಜಸ್ವ ನಿರೀಕ್ಷಕ ಸತ್ಯನಾರಾಯಣ, ಗ್ರಾಮ ಲೆಕ್ಕಾಧಿಕಾರಿಗಳಾದ ಕುಮಾರ್ ಮತ್ತು ಸಂತೋಷ್ ಇದ್ದರು. ಯಾವುದೇ ಅಹಿತಕರ ಘಟನೆಗೆ ಅವಕಾಶವಾಗದಂತೆ ಪಿ ಎಸ್ ಐ ರವಿಕಿರಣ್ ಹಾಜರಿದ್ದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version