Uncategorized

ಕಲ್ಯಾಣ ಕರ್ನಾಟಕ– ಈಡೇರಿದ ಕನಸು; ಸಾಕಾರಗೊಳ್ಳಬೇಕಿರುವ ಆಶಯ : ಮುಕ್ಕಣ್ಣ ಕರಿಗಾರ..!

Published

on

ಕಳೆದ ವರ್ಷ ಕರ್ನಾಟಕ ಸರಕಾರವು ಹೈದರಾಬಾದ್ ಕರ್ನಾಟಕ ಪ್ರದೇಶ’ ಎನ್ನುತ್ತಿದ್ದ ರಾಜ್ಯದ ಬೀದರ್, ಕಲ್ಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಭೂ ಭಾಗಕ್ಕೆ ಕಲ್ಯಾಣ ಕರ್ನಾಟಕ’ಎಂದು ಮರುನಾಮಕರಣ ಮಾಡುವ ಮೂಲಕ ಈ ಆರು ಜಿಲ್ಲೆಗಳ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವ ಶ್ಲಾಘನೀಯ ಕೆಲಸ ಮಾಡಿತು. ಸಂವಿಧಾನದ ಅನುಚ್ಛೇದ 371 ಜೆ ಯಂತೆ ಅಭಿವೃದ್ಧಿಯಲ್ಲಿ ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿ ಕೇಂದ್ರಕಾಯ್ದೆ ಮತ್ತು ರಾಜ್ಯ ಸರ್ಕಾರದ ನಿಯಮಗಳಂತೆ ಅಸ್ತಿತ್ವಕ್ಕೆ ಬಂದಿದ್ದ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ’ ಎಂದು ಮರುನಾಮಕರಣ ಮಾಡುವ ಮೂಲಕ ಅಭಿವೃದ್ಧಿ ಪಥದಲ್ಲೂ ಸ್ವಾಭಿಮಾನದ ಕನಸುಗಳನ್ನು ಬಿತ್ತಲಾಯಿತು.ಸಂವಿಧಾನದ 371 J ತಿದ್ದುಪಡಿಯಿಂದಾಗಿ ಈಗ ಈ ಪ್ರದೇಶವು ಸಾಕಷ್ಟು ಹಕ್ಕು- ಅವಕಾಶಗಳನ್ನು ಪಡೆದು ಅಭಿವೃದ್ಧಿ ಹೊಂದುತ್ತಿದೆ. ಸರಕಾರಿ ಉದ್ಯೋಗದಲ್ಲಿ ದೊರೆತಿರುವ ಪ್ರಾತಿನಿಧ್ಯದಿಂದಾಗಿ ಈ ಭಾಗದ ಸಾಕಷ್ಟು ಜನರಿಗೆ ಉದ್ಯೋಗಾವಕಾಶ ದೊರೆತಿರುವುದು ಸಮಾಧಾನಕರ ಸಂಗತಿ. ಆದರೆ ಈ ನಿಟ್ಟಿನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿಲ್ಲ ಸಾರ್ವಜನಿಕ ಕ್ಷೇತ್ರದ ಎಲ್ಲ ಸರಕಾರಿ ಇಲಾಖೆ, ಕಛೇರಿಗಳಲ್ಲಿ ಅನುಚ್ಛೇದ 371 ಜೆ ಯಂತೆ ಉದ್ಯೋಗಾವಕಾಶಗಳನ್ನು ನೀಡುತ್ತಿಲ್ಲ.ಈ ಭಾಗಕ್ಕೆ ಉದ್ಯೋಗ, ಅಭಿವೃದ್ಧಿ ಮತ್ತು ಅವಕಾಶಗಳು ನಿರೀಕ್ಷಿತ ಪ್ರಮಾಣದಲ್ಲಿ ದೊರೆತಾಗಲೇ ನಿಜವಾದ ಅರ್ಥದಲ್ಲಿ ಇದು ‘ ಕಲ್ಯಾಣ ಕರ್ನಾಟಕ’ ವಾಗುತ್ತದೆ. ಸರಕಾರವು ತನ್ನ ಬದ್ಧತೆಗೆ ಅನುಗುಣವಾಗಿ ಪ್ರತಿ ವರ್ಷದ ಬಜೆಟ್ ನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಗೆ ಅನುದಾನ ಮೀಸಲಿರಿಸುತ್ತದೆ ಮತ್ತು ಒದಗಿಸುತ್ತದೆ. ಆದರೆ ಹಾಗೆ ಒದಗಿಸಿದ ಅನುದಾನದಲ್ಲಿ ಬಹುಪಾಲು ಅನುದಾನ ಖರ್ಚು ಆಗದೆ ಹಾಗೆಯೇ ಉಳಿಯುತ್ತದೆ.ನಮ್ಮವರ ಇಚ್ಛಾಶಕ್ತಿಯ ಕೊರತೆ ಮತ್ತು ಉದ್ಧಾರದ ಬದ್ಧತೆ ಇಲ್ಲದೆ ಇರುವುದು ಇದಕ್ಕೆ ಪ್ರಮುಖ ಕಾರಣಗಳಾದರೂ ಸರಕಾರವು ರೂಪಿಸುವ ನೀತಿ- ನಿಯಮಗಳ ತೊಡಕುಗಳು ಕೂಡ ಅನುದಾನ ಪೂರ್ಣವಾಗಿ ಖರ್ಚಾಗದೆ, ವ್ಯಪಗತವಾಗಲು ಕಾರಣವಾಗಿದೆ. ಸಂವಿಧಾನದ ಅನುಚ್ಛೇದ 371 J ಯಂತೆ ನೀಡಬೇಕಾದ ಪೂರ್ಣಪ್ರಮಾದ ಸ್ವಾಯತ್ತತೆ ಮತ್ತು ಸ್ವಾತಂತ್ರ್ಯವನ್ನು ಮಂಡಳಿಗೆ ನೀಡದೆ ಇರುವುದು ಬಹುದೊಡ್ಡ ತೊಡಕು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ಸರಕಾರದ ಇತರ ನಿಗಮ- ಮಂಡಳಿಗಳಂತೆ ನೋಡದೆ ಅದಕ್ಕೆ ತಕ್ಕುದಾದ ಸ್ವಾಯತ್ತತೆ, ಪ್ರಾದೇಶಿಕ ಸರ್ಕಾರದ ಸ್ಥಾನ ಮಾನ ನೀಡಿದಾಗಲೇ ಕಲ್ಯಾಣ ಕರ್ನಾಟಕದ ಆಶಯ ಈಡೇರುತ್ತದೆ. ಪ್ರಜಾಪ್ರತಿನಿಧಿಗಳು ಮತ್ತು ವಿವಿಧ ಕ್ಷೇತ್ರಗಳ ಪರಿಣತರುಗಳನ್ನೊಳಗೊಂಡ ‘ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯನ್ನು ರಚಿಸಿ ಅದಕ್ಕೊಬ್ಬರನ್ನು ಅಧ್ಯಕ್ಷರನ್ನಾಗಿ, ಸರ್ಕಾರದ ಕಾರ್ಯದರ್ಶಿ ಮಟ್ಟದ ಹಿರಿಯ ಐಎಎಸ್ ಅಧಿಕಾರಿಯವರನ್ನು ಕಾರ್ಯದರ್ಶಿ ಎಂದು ನೇಮಿಸಿದ ಮಾತ್ರಕ್ಕೆ ಸ್ವಾಯತ್ತತೆ ಲಭಿಸಲಿಲ್ಲ. ಸರಕಾರದ ದೈನಂದಿನ ಆಡಳಿತ ನಿರ್ವಹಣೆಗೆ ‘ ಕ್ಯಾಬಿನೆಟ್’ ಇರುವಂತೆ ಈ ಭಾಗದಲ್ಲೂ ಆ ವ್ಯವಸ್ಥೆ ರೂಪುಗೊಳ್ಳಬೇಕು. ಮಂಡಳಿಯ ನಿರ್ಣಯಗಳನ್ನು ಸರ್ಕಾರದ ಕ್ಯಾಬಿನೆಟ್ ಗೆ ಅನುಮೋದನೆಗೆ ಸಲ್ಲಿಸುವ ಬದಲು ಒದಗಿಸಿದ ಅನುದಾನ, ಅನುಷ್ಠಾನಗೊಳಿಸಬೇಕಾದ ಕಾರ್ಯಕ್ರಮಗಳಿಗೆ ಅನುಗುಣವಾಗಿ ಎಲ್ಲ ನಿರ್ಧಾರಗಳನ್ನು ಇಲ್ಲಿಯೇ ಕೈಗೊಳ್ಳುವಂತೆ ಆಗಬೇಕು. ಅನುದಾನದ ಬಳಕೆಗೆ ಸ್ವಾತಂತ್ರ್ಯ ಇರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ನಿಧಿಯನ್ನು ಸ್ಥಾಪಿಸಿ ಹಣಕಾಸು ಇಲಾಖೆಯ ಹಿರಿಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮಂಜೂರಾತಿ ಪ್ರಾಧಿಕಾರಗಳನ್ನು ನೇಮಿಸಬೇಕು. ಮಂಡಳಿಗೆ ತನ್ನದೇ ಪ್ರತ್ಯೇಕ ಸಿಬ್ಬಂದಿಯೂ ಇರಬೇಕು.ಮಂಡಳಿಯ ವ್ಯಾಪ್ತಿಯನ್ನು ವಿಸ್ತರಿಸಿ, ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಇಲ್ಲವೆ ಅಪರ ಮುಖ್ಯ ಕಾರ್ಯದರ್ಶಿಗಳ ದರ್ಜೆಯ ಅಧಿಕಾರಿಯವರನ್ನು ಮಂಡಳಿಯ ಕಾರ್ಯದರ್ಶಿಯವರನ್ನಾಗಿ ನೇಮಿಸಿ ಅವರ ಆಧೀನದಲ್ಲಿ ವಿವಿಧ ಅಭಿವೃದ್ಧಿ ಇಲಾಖೆಗಳ ಸರಕಾರದ ಕಾರ್ಯದರ್ಶಿ ದರ್ಜೆಯ ಅಧಿಕಾರಿಗಳನ್ನು ಮತ್ತು ರಾಜ್ಯ ಸೇವೆಯ ಜಂಟಿ ನಿರ್ದೇಶಕರುಗಳು,ಉಪಕಾರ್ಯದರ್ಶಿಗಳು,ಆಧೀನ ಕಾರ್ಯದರ್ಶಿ ಹುದ್ದೆಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಸಚಿವಾಲಯದಲ್ಲಿ ಇರುವ ಎಲ್ಲ ಆಡಳಿತ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಬೇಕು. ಅಂದಾಗ ಮಾತ್ರ ಕಲ್ಯಾಣ ಕರ್ನಾಟಕ’ ಎಂಬ ಸುಂದರ ಹೆಸರಿನಲ್ಲಷ್ಟೆ ಸಂಭ್ರಮಿಸದೆ ನಿಜವಾದ ಅರ್ಥದಲ್ಲಿ ಕಲ್ಯಾಣ ಕರ್ನಾಟಕವು ಸಾಕಾರಗೊಳ್ಳಲು ಏನೇನು ಮಾಡಬೇಕು ಎಂಬುದನ್ನು ಈ ಭಾಗದ ಎಲ್ಲ ಹಂತದ ಜನಪ್ರತಿನಿಧಿಗಳು, ಅಭಿವೃದ್ಧಿ ಚಿಂತಕರು, ಕವಿ- ಸಾಹಿತಿಗಳು, ಪತ್ರಕರ್ತರುಗಳು ಮೊದಲಾದವರು ವಿಚಾರಿಸಿ,ಮುಂದಡಿಗಳನ್ನಿಡಲು ಸ್ಫೂರ್ತಿತುಂಬುವ ದಿನವಾಗಬೇಕು..

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ

Click to comment

Trending

Exit mobile version