Uncategorized

ರೈತರ ತೀರ್ಮಾನದಂತೆ ಭೂಸ್ವಾಧೀನ ಕೈಬಿಡಿಸುವುದು ನನ್ನ ಹೊಣೆ: ಮಾಜಿ ಸಿಎಂ ಕುಮಾರಸ್ವಾಮಿ.

Published

on

ನಾಗಮಂಗಲ: ಕೇವಲ ಕ್ರಷರ್ ಉಳಿಸುವ ಸಲುವಾಗಿ ಖುದ್ದು ಸ್ಥಳಕ್ಕಾಗಮಿಸುವ ಮೂಲಕ ಹೋರಾಟಕ್ಕಿಳಿದಿದ್ದ ಹೆಚ್.ಡಿ.ದೇವೇಗೌಡರು, ಭೂಮಿ ಕಳೆದುಕೊಳ್ಳುವ ಭೀತಿಯಲ್ಲಿರುವ ನಾಲ್ಕಾರು ಗ್ರಾಮಗಳ ರೈತರ ಸಹಕಾರಕ್ಕೆ ಬರುವರೇ ಎಂದು ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ನೀಡಿದ್ದ ಹೇಳಿಕೆಗೆ ಆಕ್ರೋಶಗೊಂಡ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿ ಹಟ್ನ ಗ್ರಾಮದ ಸಮೀಪ ರೈತರು ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡುವಂತೆ ಒತ್ತಾಯಿಸಿ ನಡೆಸಲಾಗುತ್ತಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸುವ ಮೂಲಕ ಟೀಕಾಕಾರರಿಗೆ ಉತ್ತರ ನೀಡಿದರು. ರೈತರ ಮನವಿಯನ್ನಾಲಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಕೈಗಾರಿಕೋಧ್ಯಮಕ್ಕಾಗಿ ಸರ್ಕಾರ ಸ್ವಾಧೀನ ಪಡಿಸಿಕೊಳ್ಳಲು ಮುಂದಾಗಿರುವ ರೈತರ ಭೂಮಿಯನ್ನು ರೈತರಿಗೆ ಉಳಿಸಿಕೊಡುವುದು ನನ್ನ ಹೊಣೆ ಎಂದು ಭರವಸೆ ನೀಡಿದರು. ರೈತರ ಭಾವನೆಗಳಿಗೆ ದೇವೇಗೌಡರ ಕುಟುಂಬ ಇದುವರೆಗೂ ವಿರುದ್ದವಾಗಿ ನಡೆದಿಲ್ಲ. ರೈತರೇ ನಮ್ಮೆಲ್ಲರ ಶಕ್ತಿ ಎಂಬ ಸಿದ್ದಾಂತದಡಿ ಬದುಕುತ್ತಿರುವವರು ನಾವು. ಎರಡನೇ ಬಾರಿ ರಾಜ್ಯದ ಸಿಎಂ ಸ್ಥಾನ ನೀಡಿದ ಕೊಡುಗೆಯಲ್ಲಿ ಈ ಜಿಲ್ಲೆಯ ಜನತೆಯ ಪಾತ್ರ ಅಪಾರ. ನಮ್ಮನ್ನ ಬೆಳೆಸಿರುವವರು ನೀವು. ನಿಮ್ಮನ್ನು ಸಂಕಷ್ಟಕ್ಕೆ ದೂಡಿ ನಾವು ಅಧಿಕಾರ ನಡೆಸುವಂತಹ ದುಸ್ಥಿತಿ ನಮಗಿನ್ನು ಬಂದಿಲ್ಲ. ರೈತರ ಏಳ್ಗೆಗಾಗಿಯೆ ನಾನಿನ್ನು ರಾಜಕೀಯದಲ್ಲಿದ್ದೇನೆ. ರೈತರ ಸರ್ವತೋಮುಖ ಅಭಿವೃದ್ದಿ ನನ್ನ ಗುರಿ. ಈ ತಾಲೂಕಿನ ಜನ ನಮ್ಮನ್ನು ಎಂದೂ ಕೈಬಿಟ್ಟಿಲ್ಲ. ಅದಕ್ಕೆ ನಾನು ಚಿರಋಣಿಯಾಗಿರುತ್ತೇನೆ. ದೇವೇಗೌಡರು ಓಡಾಡಿದ ಈ ಪ್ರದೇಶದಲ್ಲಿ ರೈತರಿಗೆ ಅನ್ಯಾಯವಾಗಲು ಎಂದೂ ಬಿಡುವುದಿಲ್ಲ. ರೈತರ ತೀರ್ಮಾನವೇ ಅಂತಿಮ ತೀರ್ಮಾನ. ನಿಮ್ಮೇಲ್ಲರ ಕೋರಿಕೆಯಂತೆ ನಿಮ್ಮ ಜಮೀನನ್ನು ನಿಮ್ಮಂತೆಯೇ ಉಳಿಸಿಕೊಡುವುದು ನನ್ನ ಹೊಣೆ ಎಂದರು.ದೇವೇಗೌಡರ ಹೋರಾಟದ ಬಗ್ಗೆ ವ್ಯಂಗ್ಯವಾಡಿದ್ದಕ್ಕೆ ಪ್ರತಿಕ್ರಿಯಿಸಿದ ಹೆಚ್ಡಿಕೆ, ದೇವೇಗೌಡರ ಹೋರಾಟದ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ. ಅವರ ಹೋರಾಟವನ್ನು ಇಡೀ ದೇಶವೇ ನೋಡಿದೆ. ಕ್ರಷರ್ ಮಾತ್ರವಲ್ಲದೆ, ಅನ್ಯಾಯ ನಡೆಯುವ ವಿಷಯ ತಿಳಿದರೆ ಮೋರಿ ಕ್ಲೀನ್ ಮಾಡಿಸುವುದಕ್ಕೂ ಬರ್ತಾರೆ. ಪ್ರಧಾನಿಯಾಗಿದ್ದಾಗಲೆ ಬೆಂಗಳೂರಿನಲ್ಲಿ ಸೀಮೆಎಣ್ಣೆ ಡಬ್ಬಿ ಹಿಡಿದು ಹೋರಾಟ ನಡೆಸಿದವರು. ರೈತರ ಭೂಸ್ವಾಧೀನ ವಿಷಯದಲ್ಲಿ ನಮ್ಮ ಹೋರಾಟದ ಬಗ್ಗೆ ಪ್ರಶ್ನಿಸಿದವರು ನಮ್ಮ ರೈತಪರ ಹೋರಾಟದ ಬಗ್ಗೆ ಈಗಾಲಾದರೂ ಅರ್ಥ ಮಾಡಿಕೊಳ್ಳಲಿ ಎಂದು ಸಿಆರ್ಎಸ್ಗೆ ಟಾಂಗ್ ನೀಡಿದರು.ವೇದಿಕೆಯಲ್ಲಿ ಶಾಸಕ ಸುರೇಶ್ಗೌಡ ಮಾತನಾಡಿ, ಭೂಸ್ವಾಧೀನ ವಿಷಯದಲ್ಲಿ ರಾಜಕೀಯ ಬೇಡ. ಸರ್ಕಾರ ಭೂಸ್ವಾಧೀನ ಕೈಬಿಡುವ ವಿಷಯದಲ್ಲಿ ನಿಮ್ಮ ಒಗ್ಗಟ್ಟು ಹೊಡೆದರೆ ನಮ್ಮ ಹೋರಾಟದ ಶಕ್ತಿ ಕುಂದುತ್ತದೆ. ನಾವು ನಿಮ್ಮ ವಿರೋಧಿಗಳಲ್ಲ. ಕೈಗಾರಿಕೆ ನಮ್ಮ ತಾಲೂಕಿಗೆ ಬಾರದಿದ್ದರೂ ಪರವಾಗಿಲ್ಲ. ನಾವು ನಿಮ್ಮಪರವಾದ ಧ್ವನಿಯಾಗಿರುತ್ತೇವೆ ಎಂದು ಅಂಕಿ ಅಂಶಗಳೊಂದಿಗೆ ರೈತರಿಗೆ ಮನವರಿಕೆ ಮಾಡಿಕೊಟ್ಟರು.ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಹಾಗೂ ಮಾಜಿ ಸಂಸದ ಶಿವರಾಮೇಗೌಡ ಮಾತನಾಡಿದರು. ಇದೇ ವೇದಿಕೆಯಲ್ಲಿ ಭೂಮಿಯನ್ನು ಉಳಿಸಿಕೊಡುವಂತೆ ನೂರಾರು ರೈತರು ಮನವಿ ಸಲ್ಲಿಸಿದರು. ಜಿ.ಪಂ. ಸದಸ್ಯರಾದ ಮುತ್ತಣ್ಣ ಮತ್ತು ಹೆಚ್.ಟಿ.ಮಂಜುನಾಥ್, ಮನ್ಮುಲ್ ನಿರ್ದೇಶಕ ನೆಲ್ಲಿಗೆರೆ ಬಾಲು, ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್, ಸ್ಥಳೀಯ ಮುಖಂಡರಾದ ಗರುಡನಹಳ್ಳಿ ಶ್ರೀನಿವಾಸ್ ಹಾಗೂ ಬಿಳಗುಂದ ದಾಸಶೆಟ್ಟಿ ಸೇರಿದಂತೆ 500 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version