Uncategorized

ನಾಗಮಂಗಲದಲ್ಲಿ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ನೆಲಕಚ್ಚಿದ ಜೆಡಿಎಸ್…!

Published

on

ನಾಗಮಂಗಲ: ರಾಜಕೀಯ ಜಿದ್ದಾಜಿದಿಗೆ ಹೆಸರಾದ ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಟಿಎಪಿಸಿಎಂಎಸ್ ಚುನಾವಣೆಯಲ್ಲಿ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಬೆಂಬಲಿತ ಅಭ್ಯರ್ಥಿಗಳು ಎಲ್ಲಾ 12 ಸ್ಥಾನಗಳಲ್ಲೂ ಗೆಲುವು ಸಾಧಿಸುವ ಮೂಲಕ ವಿಜಯ ಪತಾಕೆ ಹಾರಿಸಿದರೆ, ಹಾಲಿ ಶಾಸಕ ಸುರೇಶ್ಗೌಡರ ಬೆಂಬಲಿತ ಅಭ್ಯರ್ಥಿಗಳು ಸೋಲುಣ್ಣುವ ಮೂಲಕ ಜೆಡಿಎಸ್ ಸಂಪೂರ್ಣವಾಗಿ ನೆಲಕಚ್ಚಿದೆ. ಚುನಾವಣೆಯ ಆರಂಭದಲ್ಲಿಯೇ 04 ಡೆಲಿಕೆಟ್ ಸ್ಥಾನಗಳಲ್ಲಿ ಮುಖಭಂಗ ಅನುಭವಿಸಿದ್ದ ಶಾಸಕ ಸುರೇಶ್ಗೌಡರಿಗೆ ತಮ್ಮ ಬಣದ ಪರಿಶಿಷ್ಟ ಜಾತಿಗೆ ಸೇರಿದ ಅಭ್ಯರ್ಥಿಯ ನಾಮಪತ್ರ ತಿರಸ್ಕøತಗೊಂಡಿದ್ದ ರಾಜಕೀಯ ಹಿನ್ನಡೆಯ ಕಹಿಘಟನೆಯ ಬೆನ್ನಲ್ಲೆ ಸೆ.30ರ ಬುಧವಾರ ನಡೆದ ಚುನಾವಣೆಯಲ್ಲಿ ತಮ್ಮ ಬಣದ 07 ಅಭ್ಯರ್ಥಿಗಳ ಪರಾಜಯ ನುಂಗಲಾರದ ತುತ್ತಾಗಿದೆ. ಎನ್.ಚಲುವರಾಯಸ್ವಾಮಿಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಸೋಲಿನ ಫಲಿತಾಂಶದ ಕಹಿ ಘಟನೆಯ ಕರಿನೆರಳು ಸ್ಥಳೀಯ ಸಂಘ-ಸಂಸ್ಥೆಗಳ ಚುನಾವಣೆಯ ಗೆಲುವಿನ ಮೂಲಕ ಮರೆಯಾಗುತ್ತಿದೆ ಎಂಬುದು ನಾಗಮಂಗಲದ ಸಾರ್ವಜನಿಕ ಮತದಾರರ ಮಾತಾಗಿ ಚರ್ಚೆಯಾಗುತ್ತಿದೆ. ಸೆ.30ರ ಬುಧವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ನಡೆದ ಟಿಎಪಿಸಿಎಂಎಸ್ ಚುನಾವಣೆಯ ಮತದಾನದ ಆರಂಭದಿಂದ ಅಂತ್ಯದವರೆಗೂ ಜನಜಂಗುಳಿಯಿಂದ ತುಂಬಿದ್ದ ಮತಕೇಂದ್ರದ ಆವರಣ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಸಾರ್ವತ್ರಿಕ ಚುನಾವಣೆಯನ್ನೇ ನಾಚಿಸುವಂತೆ ನಡೆಯಿತು. ಮತಕೇಂದ್ರದ ಬಳಿ ಮತಯಾಚನೆಗಾಗಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರನ್ನು ನಿಯಂತ್ರಿಸಲು ಚಾಮರಾಜನಗರ-ಜೀವರ್ಗಿ ರಾ.ಹೆದ್ದಾರಿಯ ಒಂದು ಬದಿಯನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. 07 ಕೊಠಡಿಗಳಲ್ಲಿ ನಡೆಸಲಾದ ಮತದಾನದಲ್ಲಿ ಒಟ್ಟು 3450 ಅರ್ಹ ಮತದಾರರ ಪೈಕಿ 2842 ಮತದಾರರು ತಮ್ಮ ಹಕ್ಕು ಚಲಾಯಿಸುವ ಮೂಲಕ ಶೇ.82.03 ರಷ್ಟು ಮತದಾನವಾಗಿದ್ದು, ರಾತ್ರಿ 10.30 ರ ಸುಮಾರಿಗೆ ಪ್ರಕಟವಾದ ಫಲಿತಾಂಶದಲ್ಲಿ ಮಾಜಿ ಶಾಸಕ ಎನ್.ಚಲುವರಾಯಸ್ವಾಮಿ ಬಣದ ಅಭ್ಯರ್ಥಿಗಳಾದ ಎಸ್.ಸಿ.ಚೇತನ್ಕುಮಾರ್, ತಿಮ್ಮಪ್ಪ, ಆರ್.ಎ.ಗೀತಾ, ಎಂ.ಸವಿತ, ಪೂಜಾರಿ ಚಿಕ್ಕಣ್ಣ, ಯತೀಶ ಆರ್,ಈಡಿಗ, ರಾಜಯ್ಯ ಡಿ.ಬಿ. ಹಾಗೂ ಜೆ.ಆಶಾ ತಮ್ಮ ವಿರೋಧಿ ಬಣದ ಅಭ್ಯರ್ಥಿಗಳಿಗಿಂತ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಗೆಲುವು ಸಾಧಿಸಿದ್ದಾರೆ. ಫಲಿತಾಂಶ ಘೋಷಿಸಿದ ಚುನಾವಣಾಧಿಕಾರಿ ತಹಸೀಲ್ದಾರ್ ಕುಂಞ ಅಹಮ್ಮದ್ ವಿಜೇತ ಅಭ್ಯರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಅಭಿನಂದಿಸಿದರು. ಫಲಿತಾಂಶದ ಮುನ್ಸೂಚನೆ ತಿಳಿಯುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮಾಜಿ ಶಾಸಕ ಚಲುವರಾಯಸ್ವಾಮಿ ಪರ ಘೋಷಣೆಗಳನ್ನು ಕೂಗುವ ಮೂಲಕ ಪಟಾಕಿ ಸಿಡಿಸಿ ಸಂಭ್ರಮಿಸಿದರು. ತೀವ್ರ ಜಟಾಪಟಿ ಹಿನ್ನಲೆಯಲ್ಲಿ ಮತದಾನ ದಿನ ದ ಬೆಳಗಿನಿಂದಲೇ ಕಾರ್ಯಪ್ರವೃತ್ತರಾದ ಪೊಲೀಸರ ದಂಡು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಮತಕೇಂದ್ರದ ಸುತ್ತ ಹದ್ದಿನಕಣ್ಣಿಟ್ಟು ಶಾಂತಿಯುತ ಮತದಾನ ನಡೆಸುವಲ್ಲಿ ಪೊಲೀಸ್ ಇಲಾಖೆ ಪಾತ್ರ ಅಪಾರವಾಗಿತ್ತು. ವೃತ್ತ ಆರಕ್ಷಕ ನಿರೀಕ್ಷಕ ರಾಜೇಂದ್ರ ಸೇರಿದಂತೆ 02 ಸಿಪಿಐ, 04 ಪಿಎಸ್ಐ ಮತ್ತು 01 ಕೆಎಸ್ಆರ್ಪಿ ಹಾಗೂ ಜಿಲ್ಲಾ ಶಶಸ್ತ್ರ ಮೀಸಲು ಪಡೆ ಸೇರಿದಂತೆ ಸ್ಥಳೀಯ ಪೊಲೀಸ್ ಸಿಬ್ಬಂದಿ ಬಿಸಿಲು ಮತ್ತು ಮಳೆಯನ್ನು ಲೆಕ್ಕಿಸದೆ ತಮ್ಮ ಕರ್ತವ್ಯ ನಿಷ್ಠೆ ಮೆರೆದರು. ಶಾಂತಿಯುತ ಮತದಾನಕ್ಕೆ ಸಹಕರಿಸಿದ ಸಾರ್ವಜನಿಕರಿಗೆ, ಜನಪ್ರತಿನಿಧಿಗಳಿಗೆ ಮತ್ತು ಮತದಾರರಿಗೆ ಚುನಾವಣಾಧಿಕಾರಿ ತಹಸೀಲ್ದಾರ್ ಕುಂಞ ಅಹಮ್ಮದ್ ಧನ್ಯವಾದಗಳನ್ನು ತಿಳಿಸಿದರು. ಈ ಸಂದರ್ಭ ಸಹಾಯಕ ಚುನಾವಣಾಧಿಕಾರಿ ಖಾಲೀದ್ ಅಹಮ್ಮದ್, ಸಿಪಿಐ ರಾಜೇಂದ್ರ, ಪಿಎಸ್ಐಗಳಾದ ರವಿಕಿರಣ್, ರಾಮಚಂದ್ರ ಮತ್ತು ಬಸವರಾಜು ಇದ್ದರು.

ವರದಿ- ಎಸ್.ವೆಂಕಟೇಶ್. ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version