ಬೆಂಗಳೂರು

ಆನ್-ಲೈನ್ ಬೋಧನೆ ಅವಧಿ ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕ್ರಮ: ಸುರೇಶ್ ಕುಮಾರ್ ..!

Published

on

ಬೆಂಗಳೂರು: ಕೋವಿಡ್ ಸೋಂಕಿನ ಪ್ರಸರಣದ ಹಿನ್ನೆಲೆಯಲ್ಲಿ ಭೌತಿಕವಾಗಿ ಇನ್ನೂ ಶಾಲೆಗಳು ತೆರೆಯಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಶಾಲೆಗಳು ಶಿಕ್ಷಣದಲ್ಲಿ ತಂತ್ರಜ್ಞಾನಾಧಾರಿತ ಶಿಕ್ಷಣ ಕುರಿತು ತಜ್ಞರ ಸಮಿತಿಯ ಶಿಫಾರಸ್ಸಿನನ್ವಯ ಆನ್‍ಲೈನ್ ಬೋಧನಾ ತರಗತಿಗಳನ್ನು ನಡೆಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.ಶಾಲೆಗಳು ಸರ್ಕಾರದ ಆನ್-ಲೈನ್ ಮಾರ್ಗಸೂಚಿ ಪಾಲಿಸದೇ ಹೆಚ್ಚಿನ ಅವಧಿ ಆನ್-ಲೈನ್ ತರಗತಿಗಳನ್ನು ನಡೆಸುತ್ತಿರುವುದರಿಂದ ಮಕ್ಕಳ ಆರೋಗ್ಯ ಮತ್ತು ದೃಷ್ಟಿಯ ಮೇಲೆ ಪರಿಣಾಮಗಳುಂಟಾಗುತ್ತಿವೆ ಎಂಬ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಇಲಾಖೆ ಸುತ್ತೋಲೆ ಹೊರಡಿಸಿದ್ದು, ತಜ್ಞರ ವರದಿಯ ಶಿಫಾರಸಿನ ಅವಧಿಯನ್ವಯ ಆನ್-ಲೈನ್ ಬೋಧನೆ ಮಾಡಬೇಕು. ಈ ಮಾರ್ಗಸೂಚಿ ಉಲ್ಲಂಘಿಸುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕರ್ನಾಟಕ ಶಿಕ್ಷಣ ಕಾಯ್ದೆ-1983 (1995)ರ ಸೆಕ್ಷನ್ 124(5) ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ರಾಜ್ಯದ ಖಾಸಗಿ ಶಾಲೆಗಳು ಆನ್-ಲೈನ್ ಬೋಧನೆ ಆರಂಭಿಸಿ ಹೆಚ್ಚುವರಿ ಶುಲ್ಕ ಪಾವತಿಸಲು ಒತ್ತಡ ತರುತ್ತಿದ್ದ ಹಿನ್ನೆಲೆಯಲ್ಲಿ ಪೋಷಕರ ದೂರಿನನ್ವಯ ಕ್ರಮ ಕೈಗೊಂಡು ಹೆಚ್ಚುವರಿ ಶುಲ್ಕ ಪಡೆಯದೇ ಆನ್-ಲೈನ್ ತರಗತಿಗಳನ್ನು ನಡೆಸುವಂತೆ ಏಪ್ರಿಲ್ 2020ರಲ್ಲಿ ಆದೇಶ ನೀಡಲಾಗಿತ್ತು. ಪೋಷಕರಿಗೆ ಮಕ್ಕಳ ಆನ್-ಲೈನ್ ತರಗತಿಗಳಿಗೆ ಮೊಬೈಲ್‍ನಂತಹ ಸಾಧನಗಳನ್ನು ಕೊಳ್ಳಲು ಸಾಮರ್ಥ್ಯ ಇಲ್ಲದಿರುವ ಮತ್ತು ಎಲ್‍ಕೆಜಿಯಿಂದ ಐದನೇ ತರಗತಿ ಮಕ್ಕಳು ಆನ್-ಲೈನ್ ಶಿಕ್ಷಣದಲ್ಲಿ ಭಾಗವಹಿಸಲು ತೊಂದರೆಗಳಾಗುತ್ತಿವೆ ಎಂಬ ಪೋಷಕರ ದೂರಿನ ಹಿನ್ನೆಲೆಯಲ್ಲಿ ಜೂ.15ರಂದು ತಜ್ಞರ ಸಮಿತಿ ರಚಿಸಿ ಆನ್-ಲೈನ್ ಶಿಕ್ಷಣ ಕುರಿತು ವರದಿ ನೀಡಲು ಕೇಳಲಾಗಿತ್ತು. ಏತನ್ಮಧ್ಯೆ ಜೂ. 17ರಂದು ಎಲ್‍ಕೆಜಿಯಿಂದ ಐದನೇ ತರಗತಿವರೆಗೆ ಆನ್-ಲೈನ್ ಶಿಕ್ಷಣ ರದ್ದುಪಡಿಸಲು ಆದೇಶ ಹೊರಡಿಸಲಾಗಿತ್ತು. ತಜ್ಞರ ಸಮಿತಿ ವರದಿ ಬರುವತನಕ ಪ್ರಾಥಮಿಕ ತರಗತಿಗಳಿಂದ 10ನೇ ತರಗತಿವರೆಗೆ ಆನ್‍ಲೈನ್ ಶಿಕ್ಷಣಕ್ಕೆ ತರಗತಿವಾರು ಆವಧಿ ನಿಗದಿಪಡಿಸಿ ಜೂ. 27ರಂದು ಸುತ್ತೋಲೆ ಹೊರಡಿಸಲಾಗಿತ್ತು. ಇಲಾಖೆಯ ಜೂ. 17ರ ಸುತ್ತೋಲೆ ವಿರುದ್ಧ ಖಾಸಗಿ ಶಿಕ್ಷಣಸಂಸ್ಥೆಗಳು ಉಚ್ಚ ನ್ಯಾಯಾಲಯದಲ್ಲಿ ದಾವೆ ಸಲ್ಲಿಸಿದ್ದು, ಘನ ನ್ಯಾಯಾಲಯವು ಜೂ. 17 ಮತ್ತು ಜೂ. 27ರ ಆದೇಶಗಳಿಗೆ ತಡೆಯಾಜ್ಞೆ ನೀಡಿದ್ದು, ಆನ್-ಲೈನ್ ಶಿಕ್ಷಣವನ್ನು ಯಥಾವತ್ತಾಗಿ ಮುಂದುವರೆಸಿಕೊಂಡು ಹೋಗಲು ಅವಕಾಶವಾಗಿತ್ತು.

Click to comment

Trending

Exit mobile version