ಮಂಡ್ಯ

ನಾಗಮಂಗಲದಲ್ಲಿ ರಂಗೇರಿದ ಗ್ರಾಮ ಪಂಚಾಯ್ತಿ ಚುನಾವಣಾ ಕಣ..!

Published

on

ನಾಗಮಂಗಲ: ಮನೆಯೊಂದು ಮೂರು ಬಾಗಿಲು ಎಂಬಂತಾಗಿದ್ದ ಸಕ್ಕರೆನಾಡು ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಜೆಡಿಎಸ್ನಲ್ಲಿ ಇದೀಗ ಸರಣಿ ಸಭೆಗಳ ವೇದಿಕೆಯಲ್ಲಿ ಮೂರು ಜನರು ನಿರತರಾಗುವ ಮೂಲಕ ಕಾರ್ಯಕರ್ತರಲ್ಲಿ ಒಗ್ಗಟ್ಟಿನ ಪಾಠ ಹೇಳುತ್ತಿದ್ದಾರೆ. ಕಾಳಿಂಗನಹಳ್ಳಿ, ನೆಲ್ಲಿಗೆರೆ, ಚುಂಚನಹಳ್ಳಿ, ದೇವಿಹಳ್ಳಿ, ಲಾಳನಕೆರೆ ಹಾಗೂ ಕದಬಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಮ ಪಂಚಾಯ್ತಿಗಳ ಕೇಂದ್ರ ಸ್ಥಾನಗಳಲ್ಲಿ ಶಾಸಕ ಸುರೇಶ್ಗೌಡ, ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ ಹಾಗೂ ಮಾಜಿ ಸಂಸದ ಎಲ್.ಆರ್.ಶಿವರಾಮೆಗೌಡ ಒಟ್ಟಾಗಿ ನಡೆಸುತ್ತಿರುವ ಸಭೆಯ ಬಗ್ಗೆ ತಾಲೂಕಿನ ರಾಜಕೀಯ ಪಡಸಾಲೆಯ ಚರ್ಚೆ ತೀವ್ರ ಕುತೂಹಲ ಕೆರಳುಸುತ್ತಿದೆ. ಶಾಸಕ ಸುರೇಶ್ಗೌಡ ಮಾತನಾಡಿ, ವಿಧಾನಸಭೆ, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗಳಲ್ಲಿ ಪಕ್ಷದ ಚಿಹ್ನೆಯಡಿ ಸ್ಪರ್ಧಿಸುವ ನಮ್ಮೆಲ್ಲರ ಗೆಲುವಿಗಾಗಿ ಶ್ರಮಿಸುವ ಕಾರ್ಯಕರ್ತರ ಋಣವನ್ನು ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸಹಕರಿಸುವ ಮೂಲಕ ತೀರಿಸುವ ಹೊಣೆ ನಮ್ಮದು. ಗ್ರಾ.ಪಂ.ಚುನಾವಣೆಯ ಅಭ್ಯರ್ಥಿಯ ಆಯ್ಕೆಯಲ್ಲಿ ನಮ್ಮ ಪಾತ್ರವಿರುವುದಿಲ್ಲ. ನಿಷ್ಟಾವಂತ ಹಾಗೂ ಸಮಾಜಮುಖಿ ಕೆಲಸಮಾಡುವ ವ್ಯಕ್ತಿಯನ್ನು ಸ್ಥಳೀಯವಾಗಿ ಆಯ್ಕೆ ಮಾಡಿಕೊಳ್ಳುವುದು ನಿಮ್ಮ ಕರ್ತವ್ಯ. ಆದರೆ ಗೆದ್ದ ನಂತರ ನಿಮ್ಮೆಲ್ಲರ ನಿರೀಕ್ಷೆಯನ್ನು ಹುಸಿಗೊಳಿಸಿ ಪಕ್ಷಕ್ಕೆ ದ್ರೋಹಬಗೆದು ವಿರೋಧಿಗಳ ಜತೆ ಸೇರುವವರ ಬಗ್ಗೆ ಎಚ್ಚರವಿರಲಿ. ಅಭ್ಯರ್ಥಿಯ ಜೊತೆಯೇ ಇದ್ದು ಚುನಾವಣೆಯ ಅಂತಿಮ ಕ್ಷಣದಲ್ಲಿ ಕೈ ಕೊಡುವವರಿದ್ದಾರೆ, ಅಂತಹವರು ಈಗಲೇ ಪಕ್ಷ ತೊರೆದು ಹೋಗಬಹುದು ಎಂದು ಕಾರ್ಯಕರ್ತರಿಗೆ ಸೂಚಿಸಿದರು. ಇನ್ನೂ ಅಪ್ಪಾಜಿಗೌಡ ಮಾತನಾಡಿ, ಸರ್ಕಾರದ ಪ್ರತಿಯೊಂದು ಯೋಜನೆಗಳು ತಳಮಟ್ಟಕ್ಕೆ ತಲುಪಬೇಕೆಂದರೆ ಉತ್ತಮ ಸದಸ್ಯರನ್ನ ಆಯ್ಕೆಮಾಡುವ ಜವಬ್ದಾರಿ ಕಾರ್ಯಕರ್ತರ ಮೇಲಿದೆ. ಗ್ರಾಮಗಳ ಅಭಿವೃದ್ದಿಯ ಹಿತದೃಷ್ಟಿಯಿಂದ ಒಗ್ಗಟ್ಟಾಗಿ ಚುನಾವಣೆ ನಡೆಸಿ. ಅತಿ ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಬೆಂಬಲಿತರು ಚುನಾಯಿತರಾಗುವ ಮೂಲಕ ನಾಗಮಂಗಲ ಜೆಡಿಎಸ್ ಭದ್ರಕೋಟೆ ಎಂಬುದನ್ನು ಸಾಬೀತುಪಡಿಸಿ ಎಂದು ಕರೆನೀಡಿದರು. ಸಬೆಯನ್ನು ಹೊರತುಪಡಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ, ಮೈತ್ರಿ ಸರ್ಕಾರ ಬೀಳಲು ನಿಜವಾದ ಕಾರಣಕರ್ತರು ಯಾರೆಂಬುದು ರಾಜ್ಯದ ಜನತೆಗೆ ಗೊತ್ತಿದೆ. ಸರ್ಕಾರ ಬಿದ್ದ ಒಂದು ವರ್ಷದ ನಂತರ ನಾನು ಬೀಳಿಸಿದೆ ಎಂದು ಹೇಳುತ್ತಿರುವುದು ತರವಲ್ಲ. ರಮೇಶ್ ಜಾರಕಿಹೋಳಿ ಸರ್ಕಾರ ಕೆಡವಿದ್ದು ನಾನು ಎಂದು ಹೇಳಿಕೊಂಡರೆ, ಎಂಎಲ್ಸಿ ಸಿ.ಪಿ.ಯೋಗೇಶ್ವರ್ ಸರ್ಕಾರ ಬೀಳಲು ನನ್ನದೆ ಸ್ಕೇಚ್ ಎಂದು ಹೇಳಿಕೊಳ್ಳುತ್ತಿದ್ದಾರೆ. ಇನ್ನೂ ಕೋಡಿಹಳ್ಳಿ ಚಂದ್ರಶೇಖರ್ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮದು ರೈತಪರ ನಿಲುವಿರುವ ಪಕ್ಷ, ಎಪಿಎಂಸಿ ಕಾಯ್ದೆಯ ತಿದ್ದುಪಡಿಯಲ್ಲಿ ರೈತರಿಗೆ ಅನುಮೂಲವಾಗುವ ಅಂಶಗಳನ್ನು ಗಮನಿಸಿ ಮಸೂದೆಯನ್ನು ಬೆಂಬಲಿಸಲಾಗಿದೆ. ಈ ವಿಷಯವನ್ನು ಅರ್ಥೈಸಿಕೊಳ್ಳದ ಕೋಡಿಹಳ್ಳಿ ಚಂದ್ರಶೇಖರ್ ಹೆಚ್.ಡಿ.ಕುಮಾರಸ್ವಾಮಿರವರನ್ನು ರಾಜಕೀಯದಿಂದ ದೂರವಿರುವ ಬಗ್ಗೆ ನೀಡಿರುವ ಹೇಳಿಕೆಯನ್ನು ತಕ್ಷಣ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version