Uncategorized

ಸಾರ್ಥಕ ಬದುಕು ಸಾಗಿಸಿದ ಕರದಳ್ಳಿ – ವಿಶ್ವಾರಾಧ್ಯ ಸತ್ಯಂಪೇಟೆ..!

Published

on

ಶಹಾಪುರ : ತನ್ನನ್ನು ತಾನು ಗುರುತಿಸಿಕೊಂಡು,ತನ್ನ ವಿಶೇಷತೆಯನ್ನು ಶಕ್ತಿಯ ಪರಿಮಿತಿಯನ್ನು ಅರಿತು,ತನ್ನ ತನದ ವೈಶಿಷ್ಟ್ಯವನ್ನು ಬೆಳೆಸಿಕೊಳ್ಳುತ್ತಾ ಉಳಿದವರ ಜೊತೆಗೆ ಸಮಭಾವದಿಂದ ಬಾಳಿ ಸಾರ್ಥಕ ಬದುಕನ್ನು ಸಾಗಿಸಿದ ಚಂದ್ರಕಾಂತ ಕರದಳ್ಳಿಯವರ ನೆನಪು ಇನ್ನೂ ಕಾಡುತ್ತಿದೆ ಎಂದು ಪ್ರಗತಿಪರ ಚಿಂತಕ ವಿಶ್ವಾರಾಧ್ಯ ಸತ್ಯಂಪೇಟೆ ಹೇಳಿದರು. ನಗರದ ದೇಶಮುಖ್ ಬಡಾವಣೆಯಲ್ಲಿರುವ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಭಾಂಗಣದಲ್ಲಿ ಜರುಗಿದ ಚಂದ್ರಕಾಂತ ಕರದಳ್ಳಿ ಅವರ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಚಂದ್ರಕಾಂತ ಕರದಳ್ಳಿ ಸಾಹಿತ್ಯ ಪ್ರತಿಷ್ಠಾನ ಉದ್ಘಾಟನೆ ಹಾಗೂ ಚಂದ್ರಕಾಂತ ಕರದಳ್ಳಿ ಸದ್ಭಾವನಾ ಪ್ರಶಸ್ತಿ ಪುರಸ್ಕಾರ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮನಸ್ತಾಪ ಬಂದಾಗ ಅಹಂಕಾರ ಮುರಿಯಬೇಕೆ ಹೊರತು ಸಂಬಂಧಗಳನ್ನು ಯಾವತ್ತೂ ಮುರಿಯಬಾರದು ಎಂಬುದನ್ನು ಕರದಳ್ಳಿಯವರು ಆಗಾಗ ನಮ್ಮೆಲ್ಲರಿಗೂ ಹೇಳುತ್ತಿದ್ದರು ಎಂಬ ವಿಷಯವನ್ನು ಪ್ರಸ್ತಾಪಿಸಿದರು.ಶರಣ ಸಾಹಿತಿ ಶಿವಣ್ಣ ಇಜೇರಿ ಮಾತನಾಡಿ ಚಂದ್ರಕಾಂತ ಕರದಳ್ಳಿ ಇವರು ಬಡತನ ಕುಟುಂಬದಿಂದ ಬಂದಂಥ ಒಬ್ಬ ಸಾಮಾನ್ಯ ಶಿಕ್ಷಕ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡು ಈ ಭಾಗದ ಕೀರ್ತಿಯನ್ನು ಉತ್ತುಂಗಕ್ಕೆ ಕೊಂಡೊಯ್ದ ಮೇರು ಸಾಹಿತಿಗಳಲ್ಲೊಬ್ಬರಾದ ಕರದಳ್ಳಿಯವರಿಗೆ ಸಲ್ಲುತ್ತದೆ ಎಂದು ಹೇಳಿದರು. ಖ್ಯಾತ ಕಥೆಗಾರ ಸಿದ್ಧರಾಮ ಹೊನಕಲ್ ಮಾತನಾಡಿ ಮಕ್ಕಳ ಸಾಹಿತ್ಯ ಕ್ಷೇತ್ರದಲ್ಲಿ ಅವರು ಇಂದಿಗೂ ದಂತಕತೆ,ಶಿಶು ಸಾಹಿತ್ಯಕ್ಕೊಂದು ಹೊಸ ಭಾಷ್ಯೆ ಬರೆದವರು ತಮ್ಮ ಸಾಹಿತ್ಯ ಬದುಕಿನಲ್ಲಿ ಉತ್ತುಂಗದ ದಿನಗಳಲ್ಲಿ ಹೆಸರಾಂತ ಹಿರಿಯ ಸಾಹಿತಿಗಳು ಜೊತೆಗೂಡಿ ನಾಡಿನ ವಿವಿಧೆಡೆ ಸಂಚರಿಸಿ ಸಾಹಿತ್ಯದ ಔತಣವನ್ನು ಉಣಬಡಿಸಿದವರು ಎಂದು ಅವರನ್ನು ಬಣ್ಣಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸಿದ್ದಪ್ಪ ಹೊಟ್ಟಿ ಅವರು ಮಾತನಾಡಿ ಚಂದ್ರಕಾಂತ ಕರದಳ್ಳಿಯವರ ಸಾಹಿತ್ಯದ ಕೊಡುಗೆ ಅಪಾರವಾದದ್ದು, ಅಲ್ಲದೆ ಈ ಭಾಗದಲ್ಲಿ ಮೊಟ್ಟ ಮೊದಲು ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಲೋಕವನ್ನು ಸೃಷ್ಟಿಸಿದವರು ಇವರೇ ಎಂದು ಹೇಳಿದರು.ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳು ಹಾಗೂ ನಿವೃತ್ತ ಪ್ರಾಚಾರ್ಯರಾದ ದೊಡ್ಡಬಸಪ್ಪ ಬಳೂರಗಿ ಅವರಿಗೆ ಚಂದ್ರಕಾಂತ ಕರದಳ್ಳಿ ಸದ್ಬಾವನಾ ಪ್ರಶಸ್ತಿ ಪುರಸ್ಕಾರದ ಜತೆಗೆ 5ಸಾವಿರ₹ನಗದು ಹಾಗೂ ಫಲಕವನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶಹಾಪೂರದ ಚರಬಸವೇಶ್ವರ ಸಂಸ್ಥಾನ ಗದ್ದುಗೆಯ ಶ್ರೀ ವೇದಮೂರ್ತಿ ಬಸವಯ್ಯ ಶರಣರು ವಹಿಸಿಕೊಂಡಿದ್ದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಸಿದ್ದಲಿಂಗಣ್ಣ ಆನೇಗುಂದಿ ವಹಿಸಿಕೊಂಡಿದ್ದರು, ಪ್ರತಿಷ್ಠಾನದ ಅಧ್ಯಕ್ಷರಾದ ನಾಗರಾಜ್ ಕರದಳ್ಳಿ,ಗುಂಡಣ್ಣ ತುಂಬಗಿ,ಖಾಜಾ ಪಟೇಲ್, ಗುರುಬಸಯ್ಯ ಗದ್ದುಗೆ,ಎಂ.ಬಿ. ನಾಡಗೌಡ,ಶ್ಯಾಮಲಾಲ್,ಸಣ್ಣ ನಿಂಗಪ್ಪ ನಾಯ್ಕೋಡಿ,ಆರ್. ಮಹದೇವಪ್ಪ ಚನ್ನಪ್ಪ ಠಾಣಾಗುಂದಿ, ನೂರಂದಪ್ಪ ಲೇವಡಿ,ಹಾಗೂ ಇತರರು ಉಪಸ್ಥಿತರಿದ್ದರು.ಇದೇ ಸಂದರ್ಭದಲ್ಲಿ ಕನ್ನಡಪರ ಹೋರಾಟಗಾರರಾದ ಡಾ. ಶರಣು ಬಿ.ಗದ್ದುಗೆ,ಪ್ರಕಾಶ್ ಅಂಗಡಿ,ರಾಜಗೋಪಾಲ್ ವಿಭೂತಿ ಅವರಿಗೆ ಗೌರವ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.ಈ ಕಾರ್ಯಕ್ರಮದ ಪೂರ್ವದಲ್ಲಿ ಡಾ.ಶ್ವೇತಾ ಸಂಧಿಮಠ ಪ್ರಾರ್ಥಿಸಿದರು, ಶಿವಪ್ರಸಾದ್ ಕರದಳ್ಳಿ ಪ್ರಾಸ್ತಾವಿಕ ನುಡಿಗಳಾಡಿದರು, ವಿಶಾಲಾಕ್ಷಿ ಹಿರೇಮಠ ಸ್ವಾಗತಿಸಿದರು, ಬಸವರಾಜ ಸಿನ್ನೂರ ನಿರೂಪಿಸಿದರು, ವೀರೇಶ ಉಳ್ಳಿ ವಂದಿಸಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Click to comment

Trending

Exit mobile version