ಅರಸೀಕೆರೆ

ಗೆದ್ದ ಅಭ್ಯರ್ಥಿಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ಜೆಡಿಎಸ್ ಪಕ್ಷದಿಂದ ಹೊಸ ತಂತ್ರ..!

Published

on

ಅರಸೀಕೆರೆ: ಜೇನುಕಲ್ಲು ಸಿದ್ದೇಶ್ವರ ಪಾದುಕೆ ಆಣೆಗೂ ನಾವು ಜೆಡಿಎಸ್ ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ, ನೀವು ಹೇಳಿದಾಗೆ ಕೇಳ್ತೀವಿ ಅಂತ ವಿಭಿನ್ನವಾಗಿ ಪ್ರಮಾಣ ಮಾಡಿಸುವ ಮುಖಾಂತರ ಗ್ರಾಮ ಪಂಚಾಯಿತಿಯಲ್ಲಿ ವಿಜೇತರಾದ ಬೆಂಬಲಿತ ಸದಸ್ಯರುಗಳನ್ನು ಪಕ್ಷದಲ್ಲೇ ಉಳಿಸಿಕೊಳ್ಳಲು ವಿಚಿತ್ರ ಪದ್ಧತಿಯನ್ನು ಶಾಸಕರು ಮಾಡುವ ಮೂಲಕ ನಗೆಪಾಟಲಿಗೆ ಗುರಿಯಾಗಿದ್ದಾರೆ. ಇಂತಹದೊಂದು ಘಟನೆ ಸಾಕ್ಷಿಯಾಗಿದ್ದು ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನ ಯಾದಾಪುರ ಬೆಟ್ಟದ ಮೇಲಿರುವ ಜೇನುಕಲ್ಲು ಸಿದ್ದೇಶ್ವರ ಸನ್ನಿಧಿಯಲ್ಲಿ. ಶೇಕಡ 80ಕ್ಕೂ ಅಧಿಕ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಜಯಗಳಿಸಿದ್ದು ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಮತ್ತು ಕೆಲವು ಮುಖಂಡರುಗಳು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಕರೆ ಮಾಡಿ ದೂರವಾಣಿ ಮುಖಾಂತರ ಆಮಿಷವೊಡ್ಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ, ಗೆಲುವು ಸಾಧಿಸಿರುವ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳನ್ನು ಅರಸೀಕೆರೆ ನಗರದ ಹೊರಭಾಗದಲ್ಲಿರುವ ಜೇನುಕಲ್ಲು ಸಿದ್ದೇಶ್ವರ ಬೆಟ್ಟಕ್ಕೆ ಕರೆದೊಯ್ದು ಆಣೆ-ಪ್ರಮಾಣ ಮಾಡಿಸಿಕೊಂಡಿದ್ದಾರೆ. ಸಿದ್ದೇಶ್ವರ ಪಾದುಕೆಯ ಬಳಿ ಹೋಮಕುಂಡಕ್ಕೆ ಕರ್ಪೂರವನ್ನು ಹಾಕುವ ಮೂಲಕ ಶಾಸಕರು ಐದು ವರ್ಷಗಳ ಕಾಲ ನಮಗೆ ಶಾಸಕರು ಏನು ಹೇಳುತ್ತಾರೋ ಅದನ್ನು ಚಾಚೂ ತಪ್ಪದೆ ನಾವು ಕೆಲಸ ಮಾಡಿಕೊಂಡು ಹೊಗ್ತೇವೆ.ಯಾವುದೇ ಕಾರಣಕ್ಕೂ ನಾವು ಜೆಡಿಎಸ್ ಪಕ್ಷವನ್ನು ಬಿಟ್ಟು ಬೇರೆ ಪಕ್ಷಕ್ಕೆ ಹೋಗುವುದಿಲ್ಲ ಸಿದ್ದೇಶ್ವರ ಆಣೆ. ಎಂಬ ಮಾತನ್ನು ಅಭ್ಯರ್ಥಿಗಳಿಂದ ಹೇಳಿಸುವ ಮೂಲಕ ಕುಂಡಕ್ಕೆ ಕರ್ಪೂರ ಹಾಕಿ ಪಕ್ಷಕ್ಕೆ ದ್ರೋಹ ಬಗೆದಂತೆ ದೇವರ ಹೆಸರಲ್ಲಿ ಪ್ರಮಾಣ ಮಾಡಿಸಿದ್ದಾರೆ. ನಿನ್ನೇ ರಾತ್ರಿ ಆಣೆ ಪ್ರಮಾಣ ಮಾಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಆಡಳಿತ ಪಕ್ಷ ಸೇರಿದಂತೆ ಕೆಲವು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮ ಪಂಚಾಯಿತಿ ಚುನಾವಣೆ ಎಂದರೇ ಅದೊಂದು ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುವಂತದ್ದು,ತಮ್ಮ ಗ್ರಾಮವನ್ನು ಅವರುಗಳೇ ಸ್ವತಹ ಅಭಿವೃದ್ಧಿ ಪಡಿಸಬೇಕು ಪಕ್ಷಬೇಧ ಮರೆತು ಕೆಲಸ ಕಾರ್ಯ ಮಾಡಿಕೊಂಡು ಹೋಗಬೇಕಾದ ಅವರನ್ನು ಪಕ್ಷದ ಹೆಸರಲ್ಲಿ ಮತ್ತು ದೇವರ ಹೆಸರಲ್ಲಿ ಆಣೆ-ಪ್ರಮಾಣ ಮಾಡಿಸಿ ಮೂಢನಂಬಿಕೆಯ ಪರಮಾವಧಿಯನ್ನು ಸ್ಥಾಪಿಸುತ್ತಿದ್ದಾರೆ. ಇದೊಂದು ಪ್ರಜಾಪ್ರಭುತ್ವದ ಕಗ್ಗೊಲೆ ಎನ್ನುವುದು ಕೆಲವರ ಮಾತಾಗಿದೆ. ಇನ್ನೂ ಗ್ರಾಮ ಪಂಚಾಯಿತಿಯ ಅಧಿಕಾರ ಹಿಡಿಯಲು ಚುನಾವಣೆಯಲ್ಲಿ ಗೆದ್ದಂತಹ ನಾಯಕರುಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿರುವುದು ಎಷ್ಟು ಸರಿ ಎಂಬುದನ್ನು ಕೂಡ ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

ವರದಿ-ಜೀವನ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಅರಸೀಕೆರೆ

Click to comment

Trending

Exit mobile version