ರಾಜ್ಯ

ಯಾವುದೇ ಕ್ಷಣದಲ್ಲಿ ಬಿಜೆಪಿ ನಾಯಕರನ್ನ ಭೇಟಿಯಾಗಲಿದ್ದಾರೆ ಕಾಂಗ್ರೆಸ್‍ನ ಅತೃಪ್ತರು..!

Published

on

ನವದೆಹಲಿ, ಡಿ.30- ಸಚಿವ ಸ್ಥಾನ ಸಿಗದೆ ಪಕ್ಷದ ವರಿಷ್ಠರ ವಿರುದ್ಧ ಕಾಂಗ್ರೆಸ್‍ನ ಅತೃಪ್ತ ಶಾಸಕರ ಒಂದು ಬಣ ಯಾವುದೇ ಸಂದರ್ಭದಲ್ಲೂ ಬಿಜೆಪಿ ನಾಯಕರನ್ನು ಭೇಟಿ ಮಾಡುವುದು ಬಹುತೇಕ ಖಚಿತವಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ನವದೆಹಲಿಯಲ್ಲಿ ಇಲ್ಲದ ಕಾರಣ ಕಾಂಗ್ರೆಸ್‍ನ ಭಿನ್ನಮತೀಯರ ಭೇಟಿಗೆ ಈವರೆಗೂ ಸಾಧ್ಯವಾಗಿಲ್ಲ. ಇಂದು ಸಂಜೆ ಅಥವಾ ನಾಳೆ ವೇಳೆಗೆ ಶಾ ಆಗಮಿಸಲಿದ್ದು, ನಂತರವಷ್ಟೇ ಮುಖಾಮುಖಿಯಾಗುವ ಸಾಧ್ಯತೆ ಇದೆ.

ಸಂಪುಟದಿಂದ ಕೈ ಬಿಟ್ಟಿರುವುದಕ್ಕೆ ಅಸಮಾಧಾನಗೊಂಡಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಆರ್.ಶಂಕರ್, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಅವರು ಕಳೆದ ಮೂರು ದಿನಗಳಿಂದ ನವದೆಹಲಿಯಲ್ಲಿ ಬೀಡುಬಿಟ್ಟಿದ್ದಾರೆ.ನಿನ್ನೆ ರಾತ್ರಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೇಡ್ಕರ್ ಅವರನ್ನು ಈ ಮೂವರು ಶಾಸಕರು ಪಂಚತಾರಾ ಹೋಟೆಲ್‍ವೊಂದರಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ.

ಈ ಮೂವರು ಶಾಸಕರು ಅಮಿತ್ ಶಾ ಅವರನ್ನು ಭೇಟಿ ಮಾಡಬೇಕೆಂಬ ಇಂಗಿತ ವ್ಯಕ್ತಪಡಿಸಿದ್ದರಾದರೂ ಪ್ರವಾಸದಲ್ಲಿರುವ ಕಾರಣ ಸಾಧ್ಯವಾಗಿಲ್ಲ. ಪ್ರಕಾಶ್ ಜಾವೇಡ್ಕರ್ ಜತೆ ಮಾತುಕತೆ ನಡೆಸಿದ ವೇಳೆ ಕಾಂಗ್ರೆಸ್‍ನಿಂದ ಎಷ್ಟು ಶಾಸಕರು ಬಿಜೆಪಿಗೆ ಬರಲು ಸಿದ್ದರಿದ್ದಾರೆ, ಇವರೆಲ್ಲರೂ ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಲಿದ್ದಾರೆಯೇ, ಮುಂದಿನ ರಾಜಕೀಯ ಸ್ಥಿತಿ-ಗತಿ ಸೇರಿದಂತೆ ಪ್ರಚಲಿತ ವಿದ್ಯಮಾನಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಜತೆ ಸದ್ಯಕ್ಕೆ 9 ಮಂದಿ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ದರಿದ್ದಾರೆ. ಅವರ ಹೆಸರುಗಳನ್ನು ಬಹಿರಂಗಪಡಿಸುವುದಿಲ್ಲ. ಮಾಧ್ಯಮಗಳಲ್ಲಿ ಸೋರಿಕೆಯಾದರೆ ಇಡೀ ಯೋಜನೆಯೇ ಕೈ ಕೊಡಲಿದೆ. ಯಾವ್ಯಾವ ಶಾಸಕರು ಪಕ್ಷಕ್ಕೆ ಬರಲಿದ್ದಾರೆ ಎಂಬುದನ್ನು ನೀವು ಕಾದು ನೋಡಿ. ಮೊದಲು ಅಧ್ಯಕ್ಷರ ಭೇಟಿಗೆ ವೇದಿಕೆ ಸಿದ್ದಪಡಿಸಿ ಎಂದು ರಮೇಶ್ ಜಾರಕಿಹೊಳಿ ಮನವಿ ಮಾಡಿದ್ದಾರೆ.

ನನಗೆ ಕಾಂಗ್ರೆಸ್‍ನಲ್ಲಿ ಉಳಿಯುವಂತೆ ನಾನಾ ರೀತಿಯ ಆಮಿಷಗಳನ್ನು ಒಡ್ಡಿದರೂ ತೆಗೆದುಕೊಂಡಿರುವ ನಿರ್ಧಾರದಿಂದ ಹಿಂದೆ ಸರಿದಿಲ್ಲ ಎಂದು ರಮೇಶ್ ಜಾರಕಿಹೊಳಿ ತಮ್ಮ ಕಾರ್ಯತತ್ರದ ಬಗ್ಗೆ ಮನವರಿಕೆ ಮಾಡಿಕೊಡಲಿದ್ದಾರೆ. ಆದರೆ, ಈ ಹಿಂದೆ ಎರಡು ಬಾರಿ ಸರ್ಕಾರ ರಚನೆ ಮಾಡುವ ಅವಕಾಶದಲ್ಲಿ ಮುಖಭಂಗಕ್ಕೆ ಒಳಗಾಗಿದ್ದ ಬಿಜೆಪಿ ವರಿಷ್ಠರು ಯಾವುದೇ ರೀತಿಯ ಆತುರದ ನಿರ್ಧಾರ ಕೈಗೊಳ್ಳದೆ ಪ್ರತಿಯೊಂದರಲ್ಲೂ ಎಚ್ಚರಿಕೆ ಹೆಜ್ಜೆ ಇಡುತ್ತಿದ್ದಾರೆ.

ಸರ್ಕಾರ ರಚನೆ ಮಾಡುವುದಾಗಿ ಕೇಳಿ ಕೊನೆಗೆ ನಿರೀಕ್ಷಿತ ಸಂಖ್ಯೆಯಲ್ಲಿ ಶಾಸಕರು ಬಾರದಿದ್ದರೆ ಮತ್ತೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆಯಾಗುತ್ತದೆ ಎಂಬ ಒಂದೇ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ಮತ್ತು ಅವರ ತಂಡ ಏನೇ ಹೇಳುತ್ತಿದ್ದರೂ ಬಿಜೆಪಿ ವರಿಷ್ಠರು ಮಾತ್ರ ಎಚ್ಚರಿಕೆ ಹೆಜ್ಜೆಯಿಂದಲೇ ಮುನ್ನಡೆಯಲು ತೀರ್ಮಾನಿಸಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷ ಅಮಿತ್‍ಶಾ ಅವರನ್ನು ಭೇಟಿ ಮಾಡಲು ನವದೆಹಲಿಗೆ ತೆರಳಿರುವ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖಂಡ ಜಗದೀಶ್ ಶೆಟ್ಟರ್, ಪ್ರಧಾನಕಾರ್ಯದರ್ಶಿ ಅರವಿಂದ ಲಿಂಬಾವಳಿ ಇಲ್ಲಿಯೇ ಬೀಡುಬಿಟ್ಟಿದ್ದು, ಪ್ರತಿಯೊಂದು ಬೆಳವಣಿಗೆಯನ್ನು ಗಮನಿಸುತ್ತಿದ್ದಾರೆ.

ಈ ಬಾರಿಯ ಆಪರೇಷನ್ ಕಮಲದಲ್ಲಿ ರಾಜ್ಯದ ಯಾವುದೇ ನಾಯಕರು ನೇರವಾಗಿ ಭಾಗಿಯಾಗದಂತೆ ಹಾಗೂ ಪಕ್ಷಕ್ಕೆ ಹಾನಿಯಾಗದಂತೆ ಕೇಂದ್ರ ನಾಯಕರು ಸೂಕ್ಷ್ಮವಾಗಿ ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಾಂಗ್ರೆಸ್-ಜೆಡಿಎಸ್ ನಾಯಕರ ಆಂತರಿಕ ಕಚ್ಚಾಟದಿಂದಲೇ ದೋಸ್ತಿ ಸರ್ಕಾರ ಪತನವಾಗಲಿದೆ. ಇದರಲ್ಲಿ ಬಿಜೆಪಿಯ ಪಾತ್ರವೇನೂ ಇಲ್ಲ ಎಂಬುದು ಜನರಿಗೆ ಮನವರಿಕೆಯಾಗುವಂತೆ ರಣತಂತ್ರ ರೂಪಿಸಲಾಗಿದೆ.

ಇನ್ನು ಅಮಿತ್ ಶಾ ಭೇಟಿಗೆ ಸಿಕ್ಕ ನಂತರ ರಮೇಶ್ ಜಾರಕಿಹೊಳಿ ಮತ್ತು ಅವರ ತಂಡ ಒಂದೆರಡು ದಿನಗಳಲ್ಲಿ ಬೆಂಗಳೂರಿಗೆ ಆಗಮಿಸಲಿದ್ದು, ಅತೃಪ್ತ ಶಾಸಕರ ಜತೆ ಚರ್ಚಿಸಿ ತಮ್ಮ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ತಿಳಿದು ಬಂದಿದೆ.

Click to comment

Trending

Exit mobile version