ದೇಶ - ವಿದೇಶ

ಸಾಲವೂ ಉಳಿಯಿತು,ಬೆಳೆಯೂ ಹೋಯಿತು- ಅರಕಲಗೂಡಿನಲ್ಲಿ ಕೋಸು ಬೆಳಗಾರರ ಅಳಲು..

Published

on

ಅರಕಲಗೂಡು(ಹಾಸನ):ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಯಗಟಿ ಭಾಗದಲ್ಲಿ ಕೋಸು ಬೆಳೆ ಕಟಾವು ನಡೆಸಲಾಗದ ಕಾರಣ ಕುರಿ ಮಂದೆ ಬಿಟ್ಟು ಮೇಯಿಸುತ್ತಿರುವ ಮನಕಲಕುವ ದೃಶ್ಯ ಕಂಡು ಬಂದಿದೆ.
ಸದ್ಯ ಬೆಳೆದ ಬೆಳೆ ಮಾರಾಟ ಮಾಡುವ ಸಮಯಕ್ಕೆ ಸರಿಯಾಗಿ ಕೋವಿಡ್- ೧೯ ಸಂಕಷ್ಟ ಎದುರಾಗಿ ಲಾಕ್ ಡೌನ್ ಘೋಷಣೆಯಾಗಿದೆ. ಹೀಗಾಗಿ ಉತ್ತಮವಾಗಿ ಫಸಲು ಬಂದಿದ್ದ ಕೋಸು ಬೆಳೆ ಮಾರುಕಟ್ಟೆಗೆ ಸಾಗಿಸಲಾಗದೇ ಹೊಲಗಳಲ್ಲೇ ಉಳಿದಿತ್ತು.ಆದ್ರೀಗ ಲಾಕ್ ಡೌನ್ ತೆರವುಗೊಳಿಸಬಹುದೆಂಬ ನಿರೀಕ್ಷೆ ಹುಸಿಯಾದ ಪರಿಣಾಮ ರೈತರು ಜಮೀನಿನಲ್ಲಿ ಕುರಿ ಬಿಟ್ಟು ಕೋಸು ಬೆಳೆ ಮೇಯಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.
ಅಂದ ಹಾಗೇ ಕೋಸನ್ನು ಮೈಸೂರು, ಬೆಂಗಳೂರು ಮಾರುಕಟ್ಟೆಗೆ ಸಾಗಿಸಲು ವಾಹನಗಳ ಕೊರತೆ ಎದುರಾಗಿದೆ. ಜೊತೆಗೆ ಸ್ಥಳಕ್ಕೆ ಬಂದು ಖರೀದಿಸುತ್ತಿದ್ದ ವ್ಯಾಪಾರಸ್ಥರು ಇತ್ತ ಸುಳಿದಿಲ್ಲ. ಪರಿಣಾಮವಾಗಿ ಬೆಳೆದ ಬೆಳೆಯನ್ನು ಶಿರಸಿ, ಚಳ್ಳಕೆರೆ, ಚಿತ್ರದುರ್ಗ ಕಡೆಯಿಂದ ಬಂದಿರುವ ಕುರಿ ಮಂದೆಯವರಿಗೆ ಮೇಯಿಸಲು ಕೊಡಲಾಗಿದೆ.
ಇನ್ನು ನಮ್ಮ ಜೇಬು ತುಂಬಿಸಬೇಕಿದ್ದ ಆಸೆಯ ಕೋಸು ಫಸಲು ಇದೀಗ ಕುರಿಗಳ ಹೊಟ್ಟೆ ತುಂಬಿಸುತ್ತಿದೆ.ಸಾಲ ಮಾಡಿ ಬೆಳೆದವು. ಸಾಲವೂ ಉಳಿಯಿತು,ಬೆಳೆಯೂ ಹೋಯಿತು.ಆರ್ಥಿಕ ಸಂಕಷ್ಟ ಹೊತ್ತು ಜೀವನ ಸಾಗಿಸುವ ದುಸ್ಥಿತಿ ಬಂದೊದಗಿದೆ ಎಂಬುದು ರೈತರ ಅಳಲಾಗಿದೆ.

ಎ.ಎಸ್ ಸಂತೋಷ್ ಎಕ್ಸ್ ಪ್ರೆಸ್ ಅರಕಲಗೂಡು(ಹಾಸನ)

Click to comment

Trending

Exit mobile version