Uncategorized

ನಾಗನಕೆರೆಯಲ್ಲಿ ಅಂಗಡಿ ಮುಂಗಟ್ಟಿಲ್ಲದೇ ಸರಳವಾಗಿ ನಡೆದ ಗಿಡದ ಜಾತ್ರೆ..!

Published

on

ನಾಗಮಂಗಲ: ಮರ, ಗಿಡ, ಕಲ್ಲು, ಬಂಡೆ, ನೆಲ ಹಾಗೂ ಜಲದಂತಹ ಪ್ರಕೃತಿಯ ಒಂದೊಂದು ರೂಪದಲ್ಲೂ ದೇವರನ್ನು ಕಾಣುವ ನಮ್ಮ ಧಾರ್ಮಿಕ ಭಾವನೆ ವಿಶೇಷದಲ್ಲಿ ವೈಶಿಷ್ಟತೆ ಹೊಂದಿದೆ. ಅದೇ ರೀತಿ ಗುಡಿ ಗೋಪುರಗಳಿಲ್ಲದಿದ್ದರೂ ವಿಶಾಲವಾದ ಅಂಗಳದಲ್ಲಿ ಕಂಡುಬರುವ ಗಿಡಗಳ ಬುಡವನ್ನೇ ದೇವಾಲಯದಂತೆ ಬಿಂಬಿಸಿ ಭಕ್ತರು ದೇವರಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಅದೇ ರೀತಿ ಇಂದು ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ನಾಗನಕೆರೆ ಗಿಡದ ಜಾತ್ರೆಯಲ್ಲಿ ಈ ವರ್ಷ ಅಂಗಡಿ ಮುಂಗಟ್ಟಿಲ್ಲದೆ ಕೇವಲ ಸಾಂಪ್ರದಾಯಿಕ ಪೂಜೆಗಷ್ಟೆ ಸೀಮಿತವಾಗಿದ್ದು ಭಕ್ತಾಧಿಗಳ ನಿರಾಸೆಗೆ ಕಾರಣವಾಯಿತು.ಇಲ್ಲಿನ ನೆಲದ ಪವಾಡವೇ ಒಂದು ವಿಶೇಷ. ಚಿಕ್ಕತಿರುಪತಿಯೆಂದೇ ಪುರಾಣ ಪ್ರಸಿದ್ದವಾದ ಈ ಕ್ಷೇತ್ರ. ಪ್ರತಿ ವರ್ಷದ ಕಾರ್ತಿಕಮಾಸದ ಅಮವಾಸ್ಯೆ ನಂತರದ ಶುಕ್ರವಾರ ನಡೆಯುವ ಜಾತ್ರೆಯಲ್ಲಿ ದಾಸಪ್ಪಂದಿರ ಜಾಗಟೆ, ಬಾನ್ಕೆಗಳ ನಾದದೊಂದಿಗೆ ಗೋವಿಂದನ ನಾಮಸ್ಮರಣೆ ಆಸ್ತಿಕರನ್ನು ಮಂತ್ರ ಮುಗ್ಧರನ್ನಾಗಿಸುತ್ತದೆ.ಆದರೆ ಈ ವರ್ಷ ವಕ್ಕರಿಸಿದ ಕೊರೋನಾ ಮಹಾಮಾರಿಯ ಹಿನ್ನಲೆಯಲ್ಲಿ ಜಿಲ್ಲಾಡಳಿತ ಜಾತ್ರೆಯನ್ನು ರದ್ದುಪಡಿಸಿ, ಕೇವಲ ಸಾಂಪ್ರದಾಯಿಕ ಪೂಜಾ ಕೈಂಕರ್ಯಗಳಿಗಷ್ಟೆ ಅವಕಾಶ ಕಲ್ಪಿಸಲಾಗಿತ್ತು. ಆಗಮಿಸಿದ್ದ ಭಕ್ತಾದಿಗಳು ತಮ್ಮ ಮಕ್ಕಳಿಗೆ ಇಲ್ಲಿ ಮೊದಲ ಮುಡಿ ಕೊಡುವುದು ವಾಡಿಕೆ ಮತ್ತು ನಂಬಿಕೆ. ಅದರಂತೆ ಪ್ರತಿವರ್ಷದ ಶೇ.01ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ಆಗಮಿಸಿದ್ದ ಭಕ್ತರು ಪೂಜೆ ಸಲ್ಲಿಸುವ ಮೂಲಕ ತಮ್ಮ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಸಲ್ಲಿಸಿದರು.ಪ್ರತಿವರ್ಷ ನಾಡಿನ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತ ಸಮೂಹ ಇಲ್ಲಿ ಬಂದು ತಿರುಪತಿ ವೆಂಕಟೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸುವುದಲ್ಲದೆ, ತಿರುಪತಿ ಯಾತ್ರೆಗೆ ತೆರಳುವ ದಾಸಪ್ಪಂದಿರುಗಳಿಗೆ ಮುಡುಪು ಸಲ್ಲಿಸಿ ಕಳುಹಿಸಿ ಕೊಡುವುದು ವಾಡಿಕೆ ಆದರೆ ಈ ವರ್ಷ ಕೊರೋನಾ ಹಿನ್ನಲೆಯಲ್ಲಿ ಸಾಂಪ್ರದಾಯಿಕ ಸರಳ ಪೂಜೆಗಷ್ಟೆ ಸೀಮಿತವಾಗಿದ್ದು, ಭಕ್ತರು ದೇವರ ದರ್ಶನ ಪಡೆದು ಭಕ್ತಿಯಿಂದ ದೇವರಿಗೆ ಪೂಜೆ ಸಲ್ಲಿಸಿದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version