Uncategorized

ವಿಷ್ಣು ದೇವಾಲಯಗಳಲ್ಲಿ ವಿಜೃಂಭಣೆಯ ವೈಕುಂಠ ಏಕಾದಶಿ ಆಚರಣೆ..!

Published

on

ನಾಗಮಂಗಲ: ಹಿಂದು ಧರ್ಮದ ಪುರಾಣ ಪ್ರತೀತಿಯಂತೆ ವಿಷ್ಣುವಿನ ವಾಸಸ್ಥಳ ವೈಕುಂಠದಲ್ಲಿ ಮಾರ್ಗಶಿರ ಅಥವ ಪುಷ್ಯ ಮಾಸದ ಹನ್ನೊಂದನೆ ದಿನದ ಏಕಾದಶಿಯಂದು ವರ್ಷಕೊಮ್ಮೆ ಮುಕ್ಕೋಟಿ ದೇವತೆಗಳು ಸೇರಿದಂತೆ ಭಕ್ತಗಣಕ್ಕೆ ದರ್ಶನ ನೀಡುವ ನಂಬಿಕೆಯಂತೆ ಆಚರಿಸುವ ವೈಕುಂಠ ಏಕಾದಶಿ ಆಚರಣೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಾಧ್ಯಂತ ವಿಷ್ಣು ಸಂಬಂಧಿತ ದೇವಾಲಯಗಳಲ್ಲಿ ವಿಜೃಂಭಣೆಯಿಂದ ಜರುಗಿತು. ವೈಕುಂಠ ಏಕಾದಶಿ ನಿಮಿತ್ತ ಪಟ್ಟಣದ ಸೌಮ್ಯಕೇಶವಸ್ವಾಮಿ ದೇವಾಲಯವೂ ಸೇರಿದಂತೆ ತಾಲೂಕಿನಾಧ್ಯಂತ ವೈಷ್ಣವ ದೇವಾಲಯಗಳನ್ನು ತಳಿರು-ತೋರಣಗಳಿಂದಲ್ಲದೆ ವೈವಿಧ್ಯ ಪುಷ್ಪಾಲಂಕಾರ ಮತ್ತು ವಿದ್ಯುತ್ ದೀಪಾಲಂಕಾರದೊಂದಿಗೆ ಸಿಂಗರಿಸಲಾಗಿತ್ತು. ಮುಂಜಾನೆಯ ಶುಭ ಬ್ರಾಹ್ಮೀ ಮುಹೂರ್ತದಲ್ಲಿ ವೈಕುಂಠದ್ವಾರದ ಮೂಲಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು. ದೇವರ ದರ್ಶನಕ್ಕಾಗಿ ಆಸ್ತಿಕರು ಸರತಿಯಲ್ಲಿ ಕಾದು ದರ್ಶನ ಮಾಡಿದರು. ಮೂಲ ಮೂರ್ತಿಗಳಿಗೆ ಪಂಚಾಮೃತ ಅಭಿಷೇಕಾಧಿ ವಿಶೇಷ ಅಲಂಕಾರ ಭಕ್ತರ ಏಕಾಗ್ರತೆಯ ಪ್ರಾರ್ಥನೆಗೆ ಸಹಕರಿಸುತ್ತಿತ್ತು. ಪ್ರತಿ ದೇವಾಲಯಗಳಲ್ಲೂ ಗೋವಿಂದನ ನಾಮಸ್ಮರಣೆ ಸಾಮಾನ್ಯವಾಗಿತ್ತು.ಮಂಗಳವಾದ್ಯವೂ ಸೇರಿದಂತೆ ಭಜನಾ ತಂಡಗಳೊಂದಿಗೆ ಉತ್ಸವ ಮೂರ್ತಿ ಮೆರವಣಿಗೆ ನಡೆಯಿತು. ದೇವರ ದರ್ಶನ ಪಡೆದ ಭಕ್ತಾಧಿಗಳಿಗೆ ತೀರ್ಥ-ಪ್ರಸಾದ ವಿನಿಯೋಗ ಆಯೋಜಿಸಲಾಗಿತ್ತು. ಶ್ರೀ ಯೋಗನರಸಿಂಹಸ್ವಾಮಿ, ಶ್ರೀ ಕಲ್ಯಾಣ ವೆಂಕಟರಮಣಸ್ವಾಮಿ, ಶ್ರೀ ಕಂಚಿವರದಸ್ವಾಮಿ, ಉಪ್ಪಾರಹಳ್ಳಿ ಶ್ರೀ ಹನುಮಂತ ದೇವರ ಸನ್ನಿಧಿ, ಕೋಟೆಬೆಟ್ಟದ ಶ್ರೀ ಕೋಟೆ ವೆಂಕಟರಮಣಸ್ವಾಮಿ, ಬಿಂಡಿಗನವಿಲೆಯ ಶ್ರೀ ಚೆನ್ನಕೇಶವಸ್ವಾಮಿ, ಬೆಳ್ಳೂರಿನ ಶ್ರೀ ಮಾದವರಾಯಸ್ವಾಮಿ, ದೇವಲಾಪುರದ ಶ್ರೀ ವೆಂಕಟೇಶ್ವರಸ್ವಾಮಿ ಹಾಗೂ ಚೀಣ್ಯದ ಶ್ರೀ ಸೌಮ್ಯಕೇಶ್ವರಿ ಸೇರಿದಂತೆ ಮತ್ತಿತರ ದೇವಾಲಯಗಳಲ್ಲಿ ವೈಕುಂಠ ಏಕಾದಶಿ ಆಚರಿಸಲಾಯಿತು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Click to comment

Trending

Exit mobile version