ಎತ್ತಿನಹೊಳೆಯಿಂದ ನೀರು ಹರಿಯಲಿದೆ, ಹಸಿರಾಗಲಿದೆ ಬೆಂಗಳೂರು ಗ್ರಾಮಾಂತರ ಹಾಗೂ ನಗರ ಪ್ರದೇಶಗಳು

ಬೆಂಗಳೂರು: ಡಿಸೆಂಬರ್:೨೧ – ಎತ್ತಿನಹೊಳೆ ಬರುತ್ತಿದೆ…ಬರುತ್ತಿದೆ… ಎಲ್ಲಿದೆ ಎತ್ತಿನ ಹೊಳೆ ವೀರಪ್ಪ ಮೊಯಿಲಿಯವರು ಬರೀ ಸುಳ್ಳು ಹೇಳುತ್ತಿದ್ದಾರೆ, ಜನರ ಕಣ್ಣಿಗೆ ಮಣ್ಣೆರಚುವ ಕೆಲಸ ಮಾಡುತ್ತಿದ್ದಾರೆ ಎಂದು ಕೆಲವರು ಇತ್ತೀಚಿಗೆ ಮಾತನಾಡಿಕೊಳ್ಳುತ್ತಿರುವುದು ಸಹಜ. ಯಾಕೆಂದರೆ ಸಾವಿರಾರು ಕೋಟಿ ಯೋಜನೆ ಇದಾಗಿದ್ದು, ನೀರಿನ ತಿರುವನ್ನೆ ಬದಲಿಸಿ, ಭಗೀರಥ ಪ್ರಯತ್ನ ನೀರನ್ನು ತರುವುದು ಸುಲಭದ ಮಾತಲ್ಲ, ಹಾಗಾಗಿ ನಿಜವಾಗಲೂ ಎತ್ತಿನಹೊಳೆ ನಡೆಯುತ್ತಿದೆ ಎಂಬ ಮಾಹಿತಿ ತಿಳಿದುಕೊಳ್ಳಲು ಹೋದಾಗ ಅಲ್ಲೊಂದು ಅಚ್ಚರಿ ಕಾದಿತ್ತು. ಖಂಡಿತವಾಗಿಯೂ ಎತ್ತಿನಹೊಳೆ ಬೃಹತ್ ಗಾತ್ರದಲ್ಲಿ ಕಾಮಗಾರಿ ನಡೆಯುತ್ತಿದ್ದು, ಇನ್ನೇನು ಕೆಲವೇ ವರ್ಷಗಳಲ್ಲಿ ನೀರು ಹರಿಸುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ ಎಂದು ಅಲ್ಲಿನ ಇಂಜಿನಿಯರ್‌ಗಳು ತಿಳಿಸಿದರು.
ಸುಮಾರು ೮೫ ಭಾಗ ಕೆಲಸ ಈಗ ಪೂರ್ಣಗೊಂಡಿದ್ದು, ಕೆಲಸ ವಿಳಂಬವಾಗಲೂ ಈ ಹಿಂದೆ ಆದ ಭೀಕರ ಮಳೆಯು ಕಾರಣವಾಗಿದ್ದು, ಈಗ ಕೆಲಸ ಅತ್ಯಂತ ವೇಗದ ಗತಿಯಲ್ಲಿ ನಡೆಯುತ್ತಿದೆ ಎಂದರು.
ದಾಸನಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಜಿ.ಜಯರಾಮಯ್ಯರವರ ನೇತೃತ್ವದಲ್ಲಿ ಯಲಹಂಕದ ಮುಖಂಡರುಗಳನ್ನು ಎತ್ತಿನ ಹೊಳೆ ಯೋಜನೆ ವೀಕ್ಷಣೆಗೆ ಕರೆದುಕೊಂಡು ಹೋಗಲಾಗಿತ್ತು.
ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಹಾಗೂ ಭದ್ರಾ ಮೇಲ್ದಂಡೆ ಯೋಜನೆಗಳನ್ನು ಶೀಘ್ರವಾಗಿ ಅನುಷ್ಟಾನಗೊಳಿಸುವ ಏಕೈಕ ಮೂಲ ಉದ್ದೇಶದಿಂದ ಘನ ಸರ್ಕಾರವೂ ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ, (ಕರ್ನಾಟಕ ಸರ್ಕಾರದ ಪೂರ್ಣ ಸ್ವಾಮ್ಯದ ಸಂಸ್ಥೆ) ಕಂಪನಿ ನಿಯಾಮವಳಿ ೨೦೧೩ರಡಿಯಲ್ಲಿ ಕೋಲಾರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಎಲ್ಲಾ ತಾಲ್ಲೂಕುಗಳಿಗೆ ಹಾಗೂ ತುಮಕೂರು, ಚಿಕ್ಕಮಗಳೂರು ಹಾಸನ ಜಿಲ್ಲೆಗಳ ಆಯ್ದ ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವ ಯೋಜನೆಯನ್ನು ನಿರ್ವಹಿಸಲು ಸ್ಥಾಪಿಸಲಾಗಿದೆ.

ಉದ್ದೇಶ
: ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಸಮಗ್ರವಾಗಿ ಹಾಗೂ ತುಮಕೂರು, ಚಿಕ್ಕಮಗಳೂರು, ಹಾಸನ ಜಿಲ್ಲೆಗಳಲ್ಲಿ ಆಯ್ದ ತಾಲ್ಲೂಕುಗಳಿಗೆ ಕುಡಿಯುವ ನೀರು ಒದಗಿಸುವುದು ಹಾಗೂ ಪಾಲಾರ್ ಮತ್ತು ಪೆನ್ನಾರ್ ನದಿ ಕೊಳಗಳಲ್ಲಿ ಬರುವ ಕೆರೆಗಳನ್ನು ಅವುಗಳ ಸಾಮರ್ಥ್ಯದ ಶೇ. ೫೦ ರಷ್ಟು ತುಂಬಿಸಿ, ಅಂತರ್ಜಲ ಮಟ್ಟವನ್ನು ಉತ್ತಮ ಪಡಿಸುವುದು.
ಯೋಜನೆಯ ವಿವರಗಳು:
ಈ ಯೋಜನೆಯಲ್ಲಿ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿ ಹರಿಯುವ ಎತ್ತಿನಹೊಳೆ, ಕಾಡುಮನೆಹೊಳೆ, ಕೇರಿಹೊಳೆ ಮತ್ತು ಹೊಂಗದ ಹಳ್ಳಗಳಲ್ಲಿ ದೊರೆಯುವ ಪ್ರವಾಹದ ಹೆಚ್ಚುವರಿ ನೀರನ್ನು ಪಶ್ಚಿಮದ ಕೆಳಭಾಗದ ಬೇಡಿಕೆಗಳಿಗೆ ಯಾವುದೇ ತೊಂದರೆಯಾಗದಂತೆ ಹಾಗೂ ಪರಿಸರಕ್ಕೆ ದಕ್ಕೆಯಾಗದಂತೆ ಕೇವಲ ಮುಂಗಾರು ಮಳೆ ಅವಧಿಯಲ್ಲಿ ಜೂನ್ ತಿಂಗಳಿಂದ ನವೆಂಬರ್ ವರೆಗೆ ಮಾತ್ರ ನೀರನ್ನು ಎತ್ತಿನ ಹೊಳೆ ಯೋಜನೆ ಈ ಮೇಲೆ ತಿಳಿಸಿದ ಪೂರ್ವ ಭಾಗದ ಪ್ರದೇಶಗಳಿಗೆ ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆ ಅನುಷ್ಟಾನಗೊಳಿಸುವ ಉದ್ದೇಶವನ್ನು ಪೂರೈಸಲು ಯೋಜಿಸಲಾಗಿದೆ.
ಈ ಹಳ್ಳಗಳು ಸಕಲೇಶಪುರ ಹತ್ತಿರ ಪಶ್ಚಿಮ ಘಟ್ಟದ ಮೇಲ್ಬಾಗದಲ್ಲಿದ್ದು, ಇವುಗಳಿಗೆ ಅಡ್ಡಲಾಗಿ ಯಾವುದೇ ಮುಳುಗಡೆ ಇಲ್ಲದಂತೆ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ಎಂಟು ಸ್ಥಳಗಳಲ್ಲಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿ ಅಲ್ಲಿಂದ ನೀರನ್ನು ಪಂಪುಗಳ ಮೂಲಕ ಎತ್ತಿನಹೊಳೆ ಯೋಜನೆ ಪೂರ್ವಭಾಗಕ್ಕೆ ಕೊಂಡೊಯ್ಯಲು ಉದ್ದೇಶಿಸಲಾಗಿದೆ.
ಬ್ಯಾರೇಜ್‌ಗಳಿಂದ ಎತ್ತಲ್ಪಟ್ಟ ನೀರನ್ನು ಸಕಲೇಶಪುರ ತಾಲ್ಲೂಕಿನ ಹರವನಹಳ್ಳಿ ಬಳಿಯ ವಿತರಣಾ ತೊಟ್ಟಿ ೪ಕ್ಕೆ ಪೈಪುಗಳ ಮೂಲಕ ನೀರನ್ನು ಕೊಂಡೊಯ್ಯಲಾಗುವುದು. ಈ ವಿತರಣಾ ತೊಟ್ಟಿಯಿಂದ ತೆರೆದ ಗುರುತ್ವಾಕಾಲುವೆ ಮೂಲಕ ಸುಮಾರು ೨೬೦ ಕಿ.ಮೀ. ಉದ್ದದ ಕಾಲುವೆಯನ್ನು ನಿರ್ಮಿಸಲು ಉದ್ದೇಶಿಸಲಾಗಿದೆ.
ಈ ಕಾಲುವೆ ಮಾರ್ಗದ ಮಧ್ಯದಲ್ಲಿ ಕೆ.ಬಿ. ಕ್ರಾಸ್ ಸುಮಾರು ೩.೨೦ ಕಿ.ಮೀ. ನಿಟ್ಟೂರು ಬಳಿ ೨.೬೦ ಕಿ.ಮೀ, ಚೇಳೂರು ಬಳಿ ಅತಿ ದೊಡ್ಡ ಮೇಲ್ಗಾಲುವೆ ೦.೪೭ ಕಿ.ಮೀ. ಕೆಸ್ತೂರು ಬಳಿ ೧.೭೦ ಕಿ.ಮೀ ಮತ್ತು ಇರಳಸಂದ್ರ ಜಲಾಶಯವ ಮೇಲ್ಬಾಗದಲ್ಲಿ ೨.೬ ಕಿ.ಮೀ ಗಳಲ್ಲಿ ಉದ್ದದ ಮೇಲ್ಗಾಲುವೆಗಳನ್ನು ನಿರ್ಮಾಣ ಮಾಡಲಾಗುವುದು. ಇದಲ್ಲದೆ ಈ ಕಾಲುವೆಯೂ ರಾಷ್ಟ್ರೀಯ ಹೆದ್ದಾರಿಗಳನ್ನು ಐದು ಕಡೆ ಹಾಗೂ ವಿವಿಧ ರಾಜ್ಯ ಹೆದ್ದಾರಿಗಳನ್ನು ಆರು ಕಡೆ ಹಾಯ್ದು, ತದ ನಂತರ ಕೊರಟಗೆರೆ ತಾಲ್ಲೂಕಿನ ಬೈರಗೊಂಡಲು ಗ್ರಾಮದ ಬಳಿ ನಿರ್ಮಿಸಲು ಯೋಜಿಸಿರುವ ೫.೭೮೩ ಟಿ.ಎಂ.ಸಿ. ಸಂಗ್ರಹಣಾ ಜಲಾಶಯಕ್ಕೆ ನೀರನ್ನು ತುಂಬಿಸುವುದು.
ಕಿ.ಮೀ೨೨೩ ಕಿ.ಮೀ.೨೩೩ ರಲ್ಲಿ ಮಧುಗಿರಿ ಹಾಗೂ ೨೪೪.೯೦ ರಾಮನಗರ – ಟಿ.ಜಿ.ಹಳ್ಳಿ ಪೂರಕ ಕಾಲುವೆಗೆ ನೀರು ಹರಿಸುವುದು. ತದನಂತರ ಕಾಲುವೆ ೨೬೦ ಕಿ.ಮೀ. ಇಂದ ಮುಂದೆ ಗೌರಿಬಿದನೂರು ತಾಲ್ಲೂಕಿನ ಕಡೆಗೆ ೭೫ ಕಿ.ಮೀ. ಗೌರಿಬಿದನೂರು ತಾಲ್ಲೂಕಿಗೆ ಕುಡಿಯುವ ನೀರು ಒದಗಿಸಲು ಮತ್ತು ಆಯ್ದ ಕೆರೆಗಳಿಗೆ ಅವುಗಳ ಸಾಮರ್ತ್ಯದ ಶೇ. ೫೦ ರಷ್ಟು ತುಂಬಿಸುದು, ಅಂತರ್ಜಲ ಅಭಿವೃದ್ಧಿ ಮಾಡುವುದು.
ಬೈರಗೊಂಡಲು ಜಲಾಶಯದಿಂದ ೪೫ ಕಿ.ಮೀ. ಉದ್ದದ ರೈಜಿಂಗ್ ಮೈನ್ ಮುಖಾಂತರ ನೀರನ್ನು ಎತ್ತಿ (ಸುಮಾರು ೧೨೮ ಮೀಟರ್ ಎತ್ತುವಿಕೆ) ದೇವನಹಳ್ಳಿ ತಾಲ್ಲೂಕಿನ ಕುಂದಾನ ಗ್ರಾಮದ ಬಳಿ ವಿತರಣಾ ತೊಟ್ಟಿ ಆರು ನಿರ್ಮಾಣ ಮಾಡುವುದು – ಹಾಗೂ ವಿತರಣಾ ತೊಟ್ಟಿಯಿಂದ ಗುರುತ್ವಾ ಕಾಲುವೆಯ ಮೂಲಕ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸಲು ಕೆರೆಗಳಿಗೆ ಅವುಗಳ ಸಾಮರ್ಥ್ಯದ ಶೇ. ೫೦ ರಷ್ಟು ತುಂಬಿಸಿ, ಅಂತರ್ಜಲ ಅಭಿವೃದ್ಧಿ ಪಡಿಸುವುದು ಈ ರೈಸಿಂಗ್ ಮೈನ್ ಮೂಲಕ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕುಗಳು ಸೇರಿದಂತೆ ಹೆಸರಘಟ್ಟ ಕೆರೆಗೂ ನೀರು ಒದಗಿಸಲು ಯೋಜಿಸಲಾಗಿದೆ.
ಈ ಯೋಜನೆಯಿಂದ ಒಟ್ಟು ೫೨೭ ಕೆರೆಗಳಿಗೆ ಅವುಗಳ ಸಾಮರ್ಥ್ಯದ ಸುಮಾರು ಶೇ.೫೦ ರಷ್ಟು ನೀರನ್ನು ತುಂಬಿಸಿ ಅಂತರ್ಜಲ ಅಭಿವೃದ್ದಿ ಪಡಿಸುವುದು, ಅವುಗಳ ವಿವರ ಇಂತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ – ೧೯೬, ಕೋಲಾರ ಜಿಲ್ಲೆಯ – ೧೩೮, ತುಮಕೂರು ಜಿಲ್ಲೆಯ – ೧೧೩, ಬೆಂಗಳೂರು ಗ್ರಾಮಾಂತರ ಜಿಲ್ಲೆಯ – ೪೬ ಯಾವುದೇ ನೀರಿನ ಮೂಲವಿಲ್ಲದ ಹಾಸನ ಜಿಲ್ಲೆಯ ಅರಸಿಕೆರೆ ತಾಲ್ಲೂಕಿನಲ್ಲಿ ಬರುವ ೩೪ ಕೆರೆಗಳಿಗೆ ನೀರನ್ನು ಒದಗಿಸಲು ಆಯೋಜಿಸಲಾಗಿದೆ.
ನೀರಿನ ಲಭ್ಯತೆ
ಈ ಯೋಜನೆಯಲ್ಲಿ ಪರಿಗಣಿಸಿರುವ ಜಲಾನಯನ ಪ್ರದೇಶದ ಸರಾಸರಿ ನೀರಿನ ಲಭ್ಯತೆ ೩೪.೨೬ ಟಿಎಂಸಿ ಇದ್ದು, ಶೇ. ೫೦ ಅವಲಂಬನೆಯಲ್ಲಿ ನೀರಿನ ಲಭ್ಯತೆ ೨೮.೯೪ ಟಿಎಂಸಿ ಇರುತ್ತದೆ. ಈ ಶೇ. ೫೦ ಅವಲಂಬನೆಯಲ್ಲಿ ತಿರುವುಗೊಳಿಸಬಹುದಾದ ನೀರಿನ ಪ್ರಮಾಣ ೨೪.೦೧ ಟಿಎಂಸಿ ಆಗಿರುತ್ತದೆ.
ಆಡಳಿತಾತ್ಮಕ ಅನುಮೋದನೆಯ ವಿವರ
ಕರ್ನಾಟಕ ಸರ್ಕಾರದ ಆದೇಶ ಸಂಖ್ಯೆ ಜಸಂಏ೨೦೩ ವಿಭ್ಯಾಇ ೨೦೧೨, ಬೆಂಗಳೂರು ದಿನಾಂಕ ೧೭-೨-೨೦೧೪ ರಲ್ಲಿ ರೂ.೧೨೯೧೨.೩೬ ಕೋಟಿಗಳಿಗೆ ಆಡಳಿತಾತ್ಮಕ ಅನುಮೋದನೆ ದೊರೆತಿರುತ್ತದೆ.
ವಿದ್ಯುತ್ ವಿವರ
ಯೋಜನೆಗೆ ಒಟ್ಟಾರೆ ೨೭೨.೮೯ ಮೆಗಾ ವ್ಯಾಟ್ ಅವಶ್ಯಕತೆ ಇದ್ದು, ಮೊದಲನೇ ಹಂತದಲ್ಲಿ ಏತ ಕಾಮಗಾರಿಗಾಗಿ ೨೧೯.೪೪ ಮೆಗಾ ವ್ಯಾಟ್ ಹಾಗೂ ಎರಡನೇ ಹಂತದ ಬೈರಗೊಂಡಲು ಜಲಾಶಯದ ನಂತರದ ಏತ ಕಾಮಗಾರಿಗಳಿಗೆ ೫೩.೪೫ ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇರುತ್ತದೆ ಎಂದು ಅಂದಾಜಿಸಲಾಗಿದೆ. ಮಂಗಳೂರು ಶಾಂತಿ ಗ್ರಾಮದವರೆಗೆ ಬರುವ ೪೪೦ ಕೆ.ವಿ. ಸಾಮರ್ಥ್ಯದ ವಿದ್ಯುತ್ ಲೈನ್‌ನಿಂದ ಹೆಬ್ನಳ್ಳಿ ಗ್ರಾಮದ ಹತ್ತಿರ ಸಂಪರ್ಕ ಪಡೆದು ಈ ಯೋಜನೆಗೆ ೨೧೯.೪೪ ಮೆಗಾ ವ್ಯಾಟ್ ವಿದ್ಯುತ್ ಅನ್ನು ಒದಗಿಸಲಾಗುವುದು ಎಂದು ಸ್ಥಳೀಯ ಇಂಜಿನಿಯರ್‌ಗಳು ತಿಳಿಸಿದರು.
ಯಲಹಂಕ ವಿಧಾನಸಭಾ ಕ್ಷೇತ್ರ ಹಾಗೂ ನೆಲಮಂಗಲ ವಿಧಾನಸಭಾ ಕ್ಷೇತ್ರದ ಹಲವಾರು ಕಾಂಗ್ರೆಸ್ ಮುಖಂಡರುಗಳ ನೇತೃತ್ವದಲ್ಲಿ ಎತ್ತಿನಹೊಳೆ ಯೋಜನೆಯ ವೀಕ್ಷಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಜೊತೆಗೆ ವಿಸ್ಮಯ ಮಾಧ್ಯಮ ತಂಡ ಕೂಡ ಅಲ್ಲಿ ಬೇಟಿ ನೀಡಿ ಮಾಹಿತಿ ಕಲೆ ಹಾಕಿತು.

Please follow and like us:

Related posts

Leave a Comment