ಮಸೀದಿಗೆ ತೆರಳಿದ್ದವರಿಗೆ ಬಿತ್ತು ಲಾಠಿ ಏಟು..!

ಹಾವೇರಿ : ಕೊರೊನಾ ವೈರಸ್ ಮಹಾಮಾರಿಯ ಅಟ್ಟಹಾಸದ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಲಾಕ್ ಡೌನ್ ಗೆ ತಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾರೂ ಮಸೀದಿ ಹಾಗೂ ಮಂದಿರಗಳಿಗೆ ಹೋಗುವುದು ಬೇಡ ಎಂದು ಹೇಳಲಾಗಿದೆ.
ಅಲ್ಲದೇ, ಈಗಾಗಲೇ ಎಲ್ಲ ಧರ್ಮದ ಮಸೀದಿ ಹಾಗೂ ಮಂದಿರಗಳ ಬಾಗಿಲುಗಳನ್ನು ಲಾಕ್ ಕೂಡ ಮಾಡಲಾಗಿದೆ. ಮುಸ್ಲಿಂ ಬಾಂಧವರಿಗೆ ಮಸೀದಿಗೆ ತೆರಳಿ ನಮಾಜ್ ಮಾಡದೆ, ಮನೆಯಲ್ಲಿಯೇ ನಮಾಜ್ ಮಾಡಿ ಎಂದು ಸೂಚಿಸಲಾಗಿತ್ತು. ಅಲ್ಲದೇ, ರಂಜಾನ್ ಹಬ್ಬದ ಸಂದರ್ಭದಲ್ಲಿಯೂ ಮಸೀದಿಗಳಿಗೆ ತೆರಳದೆ, ಮನೆಯಲ್ಲಿಯೇ ನಮಾಜ್ ಮಾಡಿ ಹಬ್ಬ ಆಚರಿಸಿ ಎಂದು ಪದೇ ಪದೇ ಹೇಳಲಾಗಿದೆ. ಆದರೆ, ಇದಕ್ಕೆ ಗೌರವ ನೀಡದ ಹಲವರು ಮಸೀದಿಗೆ ಹೋಗಿ ನಮಾಜ್ ಮಾಡುತ್ತಿರುವ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇವೆ.
ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಸರ್ಕಾರ ನಿಯಮ ಉಲ್ಲಂಘಿಸಿ, ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಪೊಲೀಸರು ಹಾಗೂ ಅಧಿಕಾರಿಗಳು ಲಾಠಿ ರುಚಿ ತೋರಿಸಿದ್ದಾರೆ.
ಪಟ್ಟಣದ ಎರಡು ಮಸೀದಿಗಳಲ್ಲಿ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೊರಗಡೆಯಿಂದ ಮಸೀದಿಯ ಗೇಟ್ ಹಾಕಿಕೊಂಡು ಒಳಗಡೆ ಪ್ರಾರ್ಥನೆ ಮಾಡಲು ಸಜ್ಜಾಗಿದ್ದರು. ಈ ವೇಳೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸವಣೂರು ತಹಶೀಲ್ದಾರ್ ಮಲ್ಲಿಕಾರ್ಜುನ್ ಹೆಗ್ಗಣ್ಣವರ ಹಾಗೂ ಸಿಪಿಐ ಶಶಿಧರ್ ನೇತೃತ್ವದ ತಂಡ ಮಸೀದಿಯಲ್ಲಿದ್ದವರನ್ನ ಹೊರಹಾಕಿ ಲಾಠಿ ರುಚಿ ತೋರಿಸಿದ್ದಾರೆ. ಅಲ್ಲದೇ ಪ್ರಾರ್ಥನೆಗೆ ಬಂದಿದ್ದವರು ತಂದಿದ್ದ 10ಕ್ಕೂ ಅಧಿಕ ಬೈಕ್‍ಗಳನ್ನ ಜಪ್ತಿ ಮಾಡಿದ್ದಾರೆ.
5ಕ್ಕಿಂತ ಹೆಚ್ಚು ಜನರು ಸೇರುವಂತಿಲ್ಲ ಎಂದು ತಹಶೀಲ್ದಾರ್ ಹಾಗೂ ಪೊಲೀಸರು ಸಭೆಗಳ ಮೇಲೆ ಸಭೆಗಳನ್ನ ನಡೆಸಿ ತಿಳಿಸಿ ಹೇಳಿದ್ದಾರೆ. ಆದರೂ ಹಠಕ್ಕೆ ಬಿದ್ದವರಂತೆ 30ಕ್ಕೂ ಅಧಿಕ ಮಂದಿ ಸಾಮೂಹಿಕ ಪ್ರಾರ್ಥನೆಯಲ್ಲಿ ತೊಡಗಿದ್ದರು. ಹೀಗಾಗಿ ಪೊಲೀಸರು ಒಬ್ಬೊಬ್ಬರನ್ನ ಹೊರಹಾಕಿ ಲಾಠಿ ರುಚಿ ತೋರಿಸಿ ಅಲ್ಲಿಂದ ಜಾಗ ಖಾಲಿ ಮಾಡಿಸಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಹಾವೇರಿ

Please follow and like us:

Related posts

Leave a Comment