ಮಹಿಳಾ ಶಕ್ತಿಯೇ ಸಮಾಜದ ಶಕ್ತಿ: ಬಿ.ಸಿ.ಪಾಟೀಲ್..!

ಹಾವೇರಿ:31: ‘ಸ್ತ್ರೀ’ ಎನ್ನುವುದೊಂದು ಧೀಶಕ್ತಿಯಾಗಿದ್ದು,ಮಹಿಳೆಯರು ಹೆಚ್ಚೆಚ್ಚು ಸಂಘಟಿತರಾಗುವ ಮೂಲಕ ಸಮಾಜದಲ್ಲಿ ತಮ್ಮ ಐಕ್ಯತಾಬಲ ಪ್ರದರ್ಶಿಸಬೇಕೆಂದು ಕೊಪ್ಪಳ ಜಿಲ್ಲಾ ಉಸ್ತುವಾರಿಗಳಾಗಿರುವ ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ ನೀಡಿದರು. ಮಹಿಳೆಯರ ಸಂಘಟನಾ ಶಕ್ತಿಯೇ ಸಮಾಜದ ಶಕ್ತಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಇಂದು ಹಿರೇಕೆರೂರು ವಿಧಾನಸಭಾ ಕ್ಷೇತ್ರದ ಮಾಸೂರು ಗ್ರಾಮದ ಧರ್ಮರಾಯನ ದೇವಸ್ಥಾನದ ನೂತನ ಸಮುದಾಯ ಭವನಕ್ಕೆ ಭೂಮಿ ಪೂಜೆ ನೆರವೇರಿಸಿ ಹಾಗೂ ರಟ್ಟಿಹಳ್ಳಿ ತಾಲ್ಲೂಕಿನ ಮಾಸೂರು -ತಿಪ್ಪಾಯಿಕೊಪ್ಪ ಗ್ರಾಮದ ಕೇಸರಿ ಮಹಿಳಾ ಘಟಕ ಉದ್ಘಾಟಿಸಿ, ಬಳಿಕ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು. ಮಹಿಳೆಯರು ರಾಜಕೀಯವಾಗಿ ಸಶಕ್ತರಾಗಲು ಕೇಸರಿಪಡೆ ಸಹಕರಿಸುತ್ತಿದೆ. ಚುನಾವಣೆಯಲ್ಲಿ ತಮ್ಮ ಗೆಲುವಿಗೆ ರಟ್ಟಿಹಳ್ಳಿ ಸೇರಿದಂತೆ ತಾಲೂಕಿನ ಎಲ್ಲಾ ಮಹಿಳೆಯರು ಸಹ ಸಾಕಷ್ಟು ಶ್ರಮವಹಿಸಿದ್ದು, ತಮ್ಮ ಗೆಲುವಿಗೆ ಕಾರಣರಾಗಿರುವ ಮಹಿಳೆಯರಿಗೆ ಧನ್ಯವಾದ ಸಲ್ಲಿಸಿದರು. ಮಹಿಳೆಯರು ಸಂಘಟಿತರಾದರೆ ಏನು ಬೇಕಾದರೂ ಸಾಧಿಸಬಹುದು. ಸಾಮಾಜಿಕ,ಆರ್ಥಿಕವಾಗಿ ಸಬಲರಾಗುವ ಜೊತೆಗೆ ಸ್ತ್ರೀಶಕ್ತಿ ರಾಜಕೀಯವಾಗಿಯೂ ಸಬಲರಾಗಬೇಕಿದೆ. ಜಗತ್ತು ಮುಂದುವರೆಯುತ್ತಿದ್ದರೂ ಎಲ್ಲೋ ಒಂದು ಕಡೆ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಮಾತ್ರ ಹಿಂದುಳಿದ ಸ್ಥಿತಿಯಲ್ಲಿ ಇದೆ. ಗ್ರಾಮೀಣ ಭಾಗದಲ್ಲಿ ಮಹಿಳೆಯರ ಶಿಕ್ಷಣ ಮದುವೆಯವರೆಗೂ ಮಾತ್ರ ಮೀಸಲೆನ್ನುವಂತಹ ಮನಸ್ಥಿತಿ ಇನ್ನೂ ಹಾಗೆಯೇ ಇರುವುದು ಬೇಸರದ ಸಂಗತಿ. ಕಲಿಕೆ, ಹೊಸತನ, ಸಾಧಿಸುವ ಮನೋಭಾವ ಮದುವೆಯ ನಂತರವೂ ಮುಂದುವರೆಯಬೇಕು. ಸಂಸಾರ ವೈವಾಹಿಕ ಬದುಕಿಗಷ್ಟೇ ಸ್ತ್ರೀಯರ ಬದುಕು ಮೀಸಲಾಗದೇ ಸಮಾಜದಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುವ ಸಾಧಕಿಯೂ ಆಗಬೇಕು. ಮಹಿಳೆಯರು ಹೆಚ್ಚೆಚ್ಚು ಸಾಧನೆಯಲ್ಲಿ ತೊಡಗಿಕೊಳ್ಳಬೇಕೆಂದು ಕರೆ ನೀಡಿದರು. ಸ್ತ್ರೀ ಶಕ್ತಿ ಸಂಘಗಳು ,ಸಂಘಟನೆಗಳ ಅಭಿವೃದ್ಧಿಗೆ ತಾವು ಬೆನ್ನೆಲುಬಾಗಿ ನಿಲ್ಲುತ್ತಿದ್ದು, ಸರ್ಕಾರದಿಂದ ದೊರೆಯುವ ನೆರವು ಮತ್ತು ಅನುದಾನಗಳು ಸ್ತ್ರೀಸಂಘಗಳು ಪಡೆದುಕೊಳ್ಳಬೇಕೆಂದು ಸಚಿವರು ಸಲಹೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ.ಬಣಕಾರ್, ಚಿತ್ರನಟಿ ಸಮಾಜಸೇವಕಿ ಸೃಷ್ಟಿಪಾಟೀಲ್ ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು..

Please follow and like us:

Related posts

Leave a Comment