ಬೆಳೆ ಹಾನಿ: ಶಾಸಕ ಬಂಡೆಪ್ಪ ಖಾಶೆಂಪುರ್ ಭೇಟಿ, ಪರಿಶೀಲನೆ..

ಬೀದರ್: ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ತೊಗರಿ, ಕಬ್ಬು ಸೇರಿದಂತೆ ಅನೇಕ ಬೆಳೆಗಳು ಹಾನಿಗಿಡಾಗಿದ್ದು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜಮೀನುಗಳಿಗೆ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಶಾಸಕ ಬಂಡೆಪ್ಪ ಖಾಶೆಂಪುರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕ್ಷೇತ್ರ ವ್ಯಾಪ್ತಿಯ ಬಾಪೂರ್, ಮಗದಾಳ, ಮರಕುಂದಾ ಗ್ರಾಮಗಳ ಜಮೀನುಗಳಿಗೆ ಭೇಟಿ ನೀಡಿದ ಅವರು, ಕೃಷಿ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದರು. ಇದೇ ವೇಳೆ ಮರಕುಂದಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮದ ಸಮಸ್ಯೆಗಳ ಬಗ್ಗೆ ಗ್ರಾಮಸ್ಥರಿಂದ ಮಾಹಿತಿ ಪಡೆದರು. ಗ್ರಾಮದ ಮಹಿಳೆಯರು ತಮ್ಮೂರಿನ ಸಮಸ್ಯೆಗಳನ್ನು ಶಾಸಕರ ಮುಂದಿಟ್ಟರು. ಶಾಸಕರು ಶೀಘ್ರವಾಗಿ ಪರಿಹರಿಸುವ ಭರವಸೆ ನೀಡಿದರು. ಬಳಿಕ ಮಾತನಾಡಿದ ಶಾಸಕ ಬಂಡೆಪ್ಪ ಖಾಶೆಂಪುರ್, ಜಿಲ್ಲೆಯಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬಹುತೇಕ ರೈತರ ಜಮೀನುಗಳಲ್ಲಿ ನೀರು ನುಗ್ಗಿದ್ದು, ಅನೇಕ ಬೆಳೆಗಳು ಹಾನಿಗೊಳಗಾಗಿವೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ – ಶೂಲ ಮಾಡಿ ಬೀಜ, ಗೊಬ್ಬರ ಖರೀದಿಸಿದ ರೈತರು ಹಾಕಿದ ಬಂಡವಾಳವು ತೆಗೆದುಕೊಳ್ಳಲಾಗದಂತ ಪರಿಸ್ಥಿತಿಗೆ ಸಿಲುಕಿದ್ದಾರೆ. ಸರ್ಕಾರ ರೈತರ ನೆರವಿಗೆ ಬರಬೇಕಾಗಿದೆ. ಕೃಷಿ ಅಧಿಕಾರಿಗಳು, ಸಂಬಂಧಿಸಿದ ಸಚಿವರು ಹಾನಿಗೊಳಗಾದ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಹಾನಿ ಸಮೀಕ್ಷೆ ನಡೆಸಬೇಕು. ಆದಷ್ಟು ಬೇಗ ಸರ್ಕಾರ ರೈತರ ನೆರವಿಗೆ ದಾವಿಸಬೇಕು ಎಂದರು. ಈ ಸಂದರ್ಭದಲ್ಲಿ ಬೀದರ್ ಉಪ ಕೃಷಿ ನಿರ್ದೇಶಕ ಸೋಮಶೇಖರ್ ಬಿರಾದಾರ, ಬಗದಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸಂಗಮೇಶ, ಜಲ ಸಂಪನ್ಮೂಲ ಮತ್ತು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಎಮ್.ಎ ಮುಕ್ಕಿಮ್, ಬಾಪೂರ್, ಮಗದಾಳ, ಮರಕುಂದಾ ಗ್ರಾಮದ ರೈತರು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು ಸೇರಿದಂತೆ ಅನೇಕರಿದ್ದರು.

Please follow and like us:

Related posts

Leave a Comment