ಕೊರಟಗೆರೆ: ಹೊಸ ವರ್ಷಕ್ಕೆ ಶಾಸಕ ಡಾ.ಜಿ ಪರಮೇಶ್ವರ್ ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಜನತೆಗೆ ಬಂಪರ್ ಕೊಡುಗೆಯ ಭರವಸೆ ನೀಡಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಮಾತನಾಡಿ, ಹೊಸವರ್ಷದ ಆರಂಭದಲ್ಲಿ ಕೊರೋನಾ ರೋಗ ಕಡಿಮೆಯಾಗುತ್ತಿದೆ. ಸಾರ್ವಜನಿಕರು ಮತ್ತಷ್ಟು ಜಾಗ್ರತೆ ಮತ್ತು ನಿಯಮ ಪಾಲಿಸಿದರೆ ಕೊರೊನಾ ರೋಗವನ್ನು ಸಮಾಜದಿಂದ ಮುಕ್ತಗೊಳಿಸಬಹುದು ಎಂದರು.ಇನ್ನೂ ಮುಂಬರುವ ದಿನಗಳಲ್ಲಿ ತುಮಕೂರು ಸಿದ್ದಾರ್ಥ ಮಹಾ ವೈದ್ಯಕೀಯ ಆಸ್ಪತ್ರೆಯಿಂದ ಕೊರಟಗೆರೆ ವಿಧಾನ ಸಭಾಕ್ಷೇತ್ರ ವ್ಯಾಪ್ತಿಯ ಕೊರಟಗೆರೆ ಪಟ್ಟಣ ಸೇರಿದಂತೆ 6 ಹೋಬಳಿ ಕೇಂದ್ರಗಳಿಗೆ ಉಚಿತ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗುವುದು. ಈ ಬಸ್ಸಿನಲ್ಲಿ ಕ್ಷೇತ್ರದ ವಿವಿಧ ಆರೋಗ್ಯ ಸಮಸ್ಯೆಯ ಜನರು ಅಸ್ಪತ್ರೆಯಲ್ಲಿ ಪರೀಕ್ಷೆ ಮತ್ತು ಚಿಕಿತ್ಸೆಗಳನ್ನು ಆಯುಷ್ಮಾನ್ ಭಾರತ್ ಯೋಜನೆಯಡಿ ಪಡೆಯಬಹುದು. ಉಳಿದ ದೊಡ್ಡ ಮಟ್ಟದ ಶಸ್ತ್ರ ಚಿಕಿತ್ಸೆಗಳನ್ನು ಹಾಗೂ ಹೃದಯ ಸಂಬಂಧಿ ಕಾಯಿಲೆಗಳ ಶುಶ್ರೂಷೆಗಳನ್ನು ರಿಯಾಯಿತಿ ವೆಚ್ಚದಲ್ಲಿ ಮಾಡಲಾಗುವುದು. ಈ ಎಲ್ಲಾ ಜನಪರ ಸೇವೆಗಳನ್ನು ಮುಂದಿನ ದಿನಗಳಲ್ಲಿ ಯೋಜನೆ ರೂಪಿಸಿ ಕಾರ್ಯರೂಪಕ್ಕೆ ತರಲಾಗುವುದು. ಇನ್ನೂ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ದೇಶಿಯಾ ಕ್ರೀಡೆಗಳಾದ ಕಬಡ್ಡಿ ಸೇರಿದಂತೆ ಇತರೆ ಪಂದ್ಯಗಳನ್ನು ಹೋಬಳಿ ಮಟ್ಟದಲ್ಲಿ ಆಯೋಜಿಸಿ, ಅಲ್ಲಿ ತಂಡಗಳನ್ನು ಆರಿಸಿ, ಅವುಗಳನ್ನು ತಾಲ್ಲೂಕು ಮಟ್ಟದಲ್ಲಿ ಪ್ರದರ್ಶಿಸಲಾಗುವುದು. ಹೊರಭಾಗದಿಂದಲೂ ಸಹ ನೈಪುಣ್ಯತೆ ಹೊಂದಿರುವ ತಂಡಗಳನ್ನು ಕರೆಸಿ ಕ್ಷೇತ್ರದ ಯುವಜನತೆಗೆ ತರಭೇತಿ ನೀಡುವ ಕಾರ್ಯವನ್ನು ಮಾಡಲಾಗುವುದು. ಮುಂಬರುವ ದಿನಗಳಲ್ಲಿ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿ ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತದೆ.ಯುವಕರಿಗೆ ಮತ್ತು ಜನರಿಗೆ ಕ್ರೀಡೆ,ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಜನಪರ ಕೆಲಸಗಳ ಬಗ್ಗೆ ಅರಿವು ಮೂಡಿಸುವ ಕೆಲಸಗಳನ್ನು ಮಾಡಲಾಗುವುದು. ಈ ಎಲ್ಲಾ ಕೆಲಸಗಳನ್ನು ಕಾಂಗ್ರೆಸ್ ಪಕ್ಷದ ಯುವಕರು,ಮಹಿಳೆಯರು ಮತ್ತು ಕಾರ್ಯಕರ್ತರೊಂದಿಗೆ ಆಯೋಜಿಸಲಾಗುವುದು. ಹೊಸ ವರ್ಷವೂ ಪ್ರತಿಯೊಬ್ಬರಿಗೂ ಒಳ್ಳೆಯದನ್ನು ಮಾಡಿ ಮುಂಬರುವ ದಿನಗಳಲ್ಲಿ ಸಾಂಕ್ರಾಮಿಕ ರೋಗ ಮುಕ್ತವಾಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದರು. ಇನ್ನೂ ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಕೋಡ್ಲಹಳ್ಳಿ ಅಶ್ವತ್ಥನಾರಾಯಣ,ಅರಕೆರೆ ಶಂಕರ್,ಕೆಪಿಸಿಸಿ ಕಾರ್ಯದರ್ಶಿ ಬಿ.ಎಸ್ ದಿನೇಶ್,ಜಿಲ್ಲಾ ಯಾದವ ಜನಾಂಗದ ಅಧ್ಯಕ್ಷ ಚಂದ್ರಶೇಖರಗೌಡ, ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ಕುಮಾರ್,ಪ.ಪಂ ಸದಸ್ಯ ಕೆ.ಆರ್ ಓಬಳರಾಜು, ಗ್ರಾ.ಪಂ ಸದಸ್ಯ ಕೆಎಲ್ಎಂ ಮಂಜು, ಮುಖಂಡರುಗಳಾದ ಎಲ್ ರಾಜಣ್ಣ ಚಿಕ್ಕರಂಗಯ್ಯ, ರವಿಕುಮಾರ್, ಅರವಿಂದ್,ಗೋಪಿನಾಥ್,ಅನಂತಕುಮಾರ್ ಸೇರಿದಂತೆ ಇತರರು ಹಾಜರಿದ್ದರು.
ವರದಿ-ದೇವರಾಜ್ ಎಕ್ಸ್ ಪ್ರೆಸ್ ಟಿವಿ ಕೊರಟಗೆರೆ