ಬಳ್ಳಾರಿ,ಡಿ.20(ಕರ್ನಾಟಕ ವಾರ್ತೆ): ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿ ಉದ್ಯೋಗ ಖಾತ್ರಿ ಬದುಕು ಖಾತ್ರಿ ಎಂಬ ಅಭಿಯಾನದಡಿ ಬರುವ ಜನೆವರಿ 15ರೊಳಗೆ 10 ಸಾವಿರ ಬೆಳೆನಷ್ಟ ಹೊಂದಿದ ರೈತರಿಗೆ ಮತ್ತು ಕೂಲಿ ಆಧರಿಸಿ ಬದುಕುತ್ತಿರುವ ಜನರಿಗೆ ವೈಯಕ್ತಿಕ ಕಾಮಗಾರಿ ಸೌಲಭ್ಯ ನೀಡುವ ಮಹತ್ವಾಕಾಂಕ್ಷೆಯನ್ನು ಬಳ್ಳಾರಿ ಜಿಪಂ ಹಮ್ಮಿಕೊಂಡಿದೆ ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಬಳ್ಳಾರಿ ತಾಲೂಕಿನ ರೂಪನಗುಡಿ ಗ್ರಾಪಂ ಕಚೇರಿ ಆವರಣದಲ್ಲಿ ನರೇಗಾದ ಉದ್ಯೋಗ ಖಾತ್ರಿ-ಬದುಕು ಖಾತ್ರಿ ಎಂಬ ಅಭಿಯಾನದ ಅಡಿ ಕಾಮಗಾರಿ ಆದೇಶ ಹಾಗೂ ಎನ್‍ಎಂಆರ್ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬಳ್ಳಾರಿ ಜಿಲ್ಲೆಯ 27 ಹೋಬಳಿಗಳ 22 ಗ್ರಾಪಂಗಳಲ್ಲಿ ಡಿ.17ರಂದು ಗ್ರಾಮ ಪಂಚಾಯತಿಗಳಲ್ಲಿ ವಿಶೇಷ ಗ್ರಾಮ ಸಭೆಗಳನ್ನು ಆಯೋಜಿಸಿ ಅನುಮೋದನೆ ಪಡೆದಿದ್ದು, ಈ ಎಲ್ಲಾ 22 ಗ್ರಾಮ ಪಂಚಾಯತಿಗಳಲ್ಲಿ ಏಕಕಾಲಕ್ಕೆ ವಿಶೇಷ ಗ್ರಾಮ ಸಭೆಯಲ್ಲಿ ಆಯ್ಕೆಯಾದ ಬೆಳೆ ನಷ್ಟ ಹೊಂದಿದ ರೈತರು ಮತ್ತು ಕೂಲಿ ಆಧರಿಸಿದ 3 ಸಾವಿರ ಜನ ಫಲಾನುಭವಿಗಳಿಗೆ ಕಾಮಗಾರಿ ಪ್ರಾರಂಭ ಆದೇಶ ಹಾಗೂ ಎನ್.ಎಂ.ಆರ್ ಗಳನ್ನು ವಿತರಣೆ ಮಾಡಲಾಗುತ್ತಿದೆ ಎಂದರು.
ಕ್ಷೇತ್ರಬದು ನಿರ್ಮಾಣ, ದನದ ದೊಡ್ಡಿ ನಿರ್ಮಾಣ, ಎರೆಹುಳುತೊಟ್ಟಿ ನಿರ್ಮಾಣ, ವೈಯಕ್ತಿಕ ಕೊಳವೆಬಾವಿ ಮರುಪೂರಣ ಘಟಕ, ಕುರಿ ಹಾಗೂ ಮೇಕೆ ಸಾಕಣಿಕೆ ಶೆಡ್ ನಿರ್ಮಾಣ, ಹಂದಿ,ಮೀನು ಮತ್ತು ಕೋಳಿ ಸಾಕಾಣಿಕೆ ಶೆಡ್ ನಿರ್ಮಾಣ, ಕೃಷಿ ಹೊಂಡ, ಜಮೀನಿನಲ್ಲಿ ಕಂದಕ ನಿರ್ಮಾಣ, ಎರೆಹುಳು ತೊಟ್ಟಿ ನಿರ್ಮಾಣ ಸೇರಿದಂತೆ ಅನೇಕ ವೈಯಕ್ತಿಕ ಕಾಮಗಾರಿಗಳನ್ನು 1.50ಲಕ್ಷ ರೂ.ಗಳವರೆಗೆ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳನ್ನು ಫಲಾನುಭವಿಗಳು ಪಡೆದುಕೊಳ್ಳಬಹುದಾಗಿದ್ದು, ಇದನ್ನು ಸಮರ್ಪಕವಾಗಿ ಪಡೆದುಕೊಂಡು ಬರಗಾಲದಲ್ಲಿಯೂ ತಮ್ಮ ಬದುಕನ್ನು ಖಾತರಿಪಡಿಸಿಕೊಳ್ಳಬಹುದು ಎಂದರು.
ಜಿಲ್ಲೆಯ ಎಲ್ಲಾ 7 ತಾಲ್ಲೂಕುಗಳಲ್ಲಿ ತೀವ್ರ ಬರವನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಬೆಳೆ ನಷ್ಟ ಹೊಂದಿದ ರೈತರು ಮತ್ತು ಕೂಲಿ ಆಧರಿಸಿದ ಕುಟುಂಬಗಳು ಬೇರೆ ಕಡೆ ಉದ್ಯೋಗಕ್ಕಾಗಿ ಹಾಗೂ ದೈನಂದಿನ ಜೀವನ ಸಾಗಿಸಲು ಬೇರೆ ಕಡೆ ಗುಳೆ ಹೋಗದಂತೆ ತಡೆಯುವ ನಿಟ್ಟಿನಲ್ಲಿ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳ ಕಂದಾಯ ಹೋಬಳಿಗಳಲ್ಲಿ “ಬದುಕು ಖಾತ್ರಿ” ಎಂಬ ಅಭಿಯಾನದ ಮೂಲಕ ಈ ಕಾರ್ಯ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಈ ಕಾರ್ಯಕ್ರಮದ ಉಸ್ತುವಾರಿಯಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹೋಬಳಿ ಮಟ್ಟದ ಜಿಲ್ಲೆಯ 22 ಗ್ರಾಮ ಪಂಚಾಯತಿಗಳಿಗೆ ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿತ್ತು. ಅವರು ಬೆಳೆ ನಷ್ಟ ಹೊಂದಿದ ರೈತರು ಮತ್ತು ಕೂಲಿ ಆಧರಿಸಿದ ಕುಟುಂಬಗಳ ಮನೆ ಮನೆಗೆ ಭೇಟಿ ಮಾಡಿ ನರೇಗಾ ಯೋಜನೆಯಡಿ ದೊರೆಯುವ ವಿವಿಧ ವೈಯಕ್ತಿಕ ಕಾಮಗಾರಿಗಳ ಸೌಲಭ್ಯಗಳ ಮಾಹಿತಿಯನ್ನು ನೀಡಿ ಸದರಿಯವರಿಗೆ ಅವಶ್ಯವಿರುವ ವೈಯಕ್ತಿಕ ಕಾಮಗಾರಿಗಳ ಪಟ್ಟಿ ಮಾಡಿ ವಿಶೇಷ ಗ್ರಾಮ ಸಭೆಗಳಲ್ಲಿ ಅನುಮೋದನೆ ಪಡೆದುಕೊಂಡಿದ್ದಾರೆ ಎಂದರು.
ಈ ಕಾರ್ಯ ಇಲ್ಲಿಗೆ ನಿಲ್ಲದೆ ಮುಂದಿನ ದಿನಗಳಲ್ಲಿಯೂ ನಿರಂತರವಾಗಿ ಮುಂದುವರಿಯಲಿದೆ ಎಂದು ವಿವರಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ನರೇಗಾ ಅಡಿ ವೈಯಕ್ತಿಕ ಕಾಮಗಾರಿಗಳನ್ನು ಮಾಡಿಸಿಕೊಳ್ಳುವುದರ ಮೂಲಕ ನರೇಗಾವನ್ನು ವೈಯಕ್ತಿಕವಾಗಿಯೂ ಬಳಕೆ ಮಾಡಿಕೊಳ್ಳಬಹುದು ಎಂಬುದುನ್ನು ತಿಳಿಸಿ ಎಂದು ಕರೆ ನೀಡಿದರು.
ಮನೆಬಾಗಿಲಿಗೆ ತೆರಳಿ ಅವರ ಅಗತ್ಯಕ್ಕೆ ತಕ್ಕಂತ ಕಾಮಗಾರಿ ಆದೇಶಗಳನ್ನು ಸ್ಥಳದಲ್ಲಿಯೇ ಕ್ರಿಯಾಯೋಜನೆ ಸಿದ್ದಪಡಿಸಿ ನರೇಗಾ ಅಡಿ ವೈಯಕ್ತಿಕ ಕಾಮಗಾರಿ ಅಡಿ ನೀಡಲಾಗುತ್ತಿದ್ದು,ಅದನ್ನು ಜನರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳಬೇಕು ಎಂಬುದನ್ನು ತಮ್ಮ ಮಾತುಗಳಲ್ಲಿ ಪ್ರಸ್ತಾಪಿಸಿದ ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು, ಸರಕಾರದ ಯೋಜನೆಗಳ ಕುರಿತು ಜನರು ತಿಳಿದುಕೊಂಡು ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
*ಊರಿನ ಜೀವನ ಬದಲಾವಣೆಗೆ ಸ್ಥಳೀಯ ಜನಪ್ರತಿನಿಧಿಗಳು ಮುಂದಾಗಲಿ: ಊರುಗಳು ಮತ್ತು ಊರಲ್ಲಿರುವ ಜನರ ಜೀವನ ಬದಲಾವಣೆಗೆ ಸ್ಥಳೀಯ ಜನಪ್ರತಿನಿಧಿಗಳು ನಾಯಕತ್ವ ವಹಿಸಿಕೊಂಡು ಸರಕಾರದ ವಿವಿಧ ಯೋಜನೆಗಳ ಸಮರ್ಪಕ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕಾರ್ಯತತ್ಪರವಾಗಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿ.ರಾಜೇಂದ್ರ ಅವರು ಹೇಳಿದರು.
ನರೇಗಾದ ಬದುಕು ಖಾತರಿ ಅಭಿಯಾನಕ್ಕೆ ಜನರು ಸಹಕರಿಸುವ ಮೂಲಕ ಅಧಿಕಾರಿಗಳಿಗೆ ಸಾಥ್ ಕೊಡುವ ಕೆಲಸ ಮಾಡಿ ಎಂದರು.
ಈ ಅಭಿಯಾನಕ್ಕೆ ಚಾಲನೆ ನೀಡಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಅವರು, ಬೆಳೆ ನಷ್ಟ ಹೊಂದಿದ ರೈತರು ಮತ್ತು ಕೂಲಿಯನ್ನೇ ನಂಬಿ ಬದುಕು ನಡೆಸುತ್ತಿರುವ ಜನರು ನರೇಗಾ ಅಡಿ ವೈಯಕ್ತಿಕ ಕಾಮಗಾರಿಗಳ ಸೌಲಭ್ಯ ಪಡೆದುಕೊಳ್ಳುವ ಮೂಲಕ ಬದುಕು ಖಾತರಿ ಪಡಿಸಿಕೊಳ್ಳಬೇಕು ಎಂದರು.
ಈ ಅಭಿಯಾನದ ಕುರಿತು ಹೆಚ್ಚೆಚ್ಚು ಅರಿವು ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಮತ್ತು ನಿರಂತರವಾಗಿ ಮುಂದುವರಿಯಬೇಕು ಎಂದರು.
ಜಿಪಂ ಸದಸ್ಯ ಅಲ್ಲಂ ಪ್ರಶಾಂತ, ಗ್ರಾಪಂ ಅಧ್ಯಕ್ಷೆ ಅನ್ನಪೂರ್ಣಮ್ಮ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಅಧ್ಯಕ್ಷೆ ರಮೀಜಾ ಬಿ, ಉಪಾಧ್ಯಕ್ಷೆ ಪುಷ್ಪಾವತಿ, ತಹಸೀಲ್ದಾರ್ ನಾಗರಾಜ, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಶುಭಾ, ತಾಪಂ ಇಒ ಜಾನಕಿರಾಮ್, ನರೇಗಾ ಸಹಾಯಕ ನಿರ್ದೇಶಕ ಬಸವರಾಜ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಇದ್ದರು.
490 ಜನರಿಗೆ ವೈಯಕ್ತಿಕ ಕಾಮಗಾರಿ ಆದೇಶ ಹಾಗೂ ಎನ್‍ಎಂಆರ್‍ಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.