ಸಂಚಾರ ಪೊಲೀಸರ ಸ್ವಚ್ಛತಾ ಕಾರ್ಯ

ಬೆಂಗಳೂರು: ಇಷ್ಟು ದಿನ ವಾಹನ ದಟ್ಟಣೆ ನಿಯಂತ್ರಿಸುತ್ತಿದ್ದ ನಗರದ ಸಂಚಾರ ಪೊಲೀಸರು ಭಾನುವಾರ ಪೊರಕೆ, ಗುದ್ದಲಿ, ಹಳೇ ಬಟ್ಟೆಗಳನ್ನು ಹಿಡಿದು ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಿದ್ದರು. “ಜನಸ್ನೇಹಿ’ ಪೊಲೀಸ್‌ ಆಗುವ ನಿಟ್ಟಿನಲ್ಲಿ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌ ಸೂಚನೆ ಮೇರೆಗೆ ನಗರದ 44 ಸಂಚಾರ ಪೊಲೀಸ್‌ ಠಾಣೆ ಸಿಬ್ಬಂದಿ ಭಾನುವಾರ ತಮ್ಮ ಠಾಣೆ ಒಳ ಮತ್ತು ಹೊರ ಆವರಣಗಳನ್ನು ಸ್ವಚ್ಛಗೊಳಿಸಿದರು.

ಅಲ್ಲದೆ, ರಸ್ತೆಗಳಲ್ಲಿರುವ ಸೂಚನಾ ಫ‌ಲಕಗಳ ಸ್ವಚ್ಛತೆ, ಗುಂಡಿ ಮುಚ್ಚುವುದು, ಡಿವೈಡರ್‌ನಲ್ಲಿ ಬೆಳೇದ ಗಿಡ ತೆರವು,  ಸೂಚನಾ ಫ‌ಲಕಗಳ ದುರಸ್ತಿ, ಸಿಗ್ನಲ್‌ ಲೈಟ್‌ಗಳ ಪರಿಶೀಲನೆ ಮಾಡಿದರಲ್ಲದೆ, ಠಾಣೆಗಳ ಆವರಣ ಹಾಗೂ ಮೇಲ್ಚಾವಣಿ ಮೇಲೆ ಬಹಳ ವರ್ಷಗಳಿಂದ ಬಿದ್ದಿದ್ದ ಅನಗತ್ಯ ವಸ್ತುಗಳನ್ನು ವಿಲೇವಾರಿ ಮಾಡಿದರು. ಠಾಣೆಗಳಲ್ಲಿರುವ ಶೌಚಾಲಯಗಳನ್ನು ತಾವೇ ಶುಚಿಗೊಳಿಸಿದರು.

ವಾಹನಗಳ ವಿಲೇವಾರಿಗೆ ಕ್ರಮ: ನಗರದ ಎಲ್ಲ 44 ಸಂಚಾರ ಠಾಣೆಗಳ ಆವರಣದಲ್ಲಿರುವ ಅಪರಾಧ ಪ್ರಕರಣಗಳಲ್ಲಿ ಪತ್ತೆಯಾದ ನೂರಾರು ವಾಹನಗಳ ವಿಲೇವಾರಿಗೆ ಶೀಘ್ರವೇ ಕ್ರಮಕೈಗೊಳ್ಳಲಾಗುವುದು. ಅಪರಾಧ ಕೃತ್ಯಗಳಲ್ಲಿ ಬಳಕೆಯಾದ ವಾಹನಗಳನ್ನು ಪ್ರಕರಣ ವಿಚಾರಣೆ ಮುಗಿದ ಬಳಿಕ ವಾರಸುದಾರರಿಗೆ ಹಿಂದಿರುಗಿಸುವ ಬಗ್ಗೆ ಆಯಾ ಠಾಣೆ ಇನ್‌ಸ್ಪೆಕ್ಟ್ರ್‌ಗಳಿಗೆ ಸೂಚಿಸಲಾಗಿದೆ.

ಜತೆಗೆ ಬಹಳ ವರ್ಷಗಳಿಂದ ಇರುವ ವಾಹನಗಳನ್ನು ಕೋರ್ಟ್‌ ಸೂಚನೆ ಮೇರೆಗೆ ಹರಾಜು ಹಾಕಲಾಗುವುದು ಎಂದು ಸಂಚಾರ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು. ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಆಯುಕ್ತ ಪಿ.ಹರಿಶೇಖರನ್‌, ಕೆಲ ದಿನಗಳ ಹಿಂದೆ ನಗರದ ಎಲ್ಲಾ ಸಂಚಾರ ಠಾಣೆಗಳಿಗೆ ಭೇಟಿ ನೀಡಿದಾಗ, ಆವರಣದಲ್ಲಿ ಅನೈರ್ಮಲ್ಯ ಕಂಡು ಬಂದಿತ್ತು.

ಈ ಹಿನ್ನೆಲೆಯಲ್ಲಿ ಹೊಸವರ್ಷದ ಮೊದಲ ಭಾನುವಾರ ಎಲ್ಲಾ ಠಾಣೆಗಳ ಒಳ ಮತ್ತು ಹೊರ ಆವರಣ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿತ್ತು. ಪೊಲೀಸರ ಬಗ್ಗೆ ಸಾರ್ವಜನಿಕರಲ್ಲಿ ಉತ್ತಮ ಅಭಿಪ್ರಾಯ ಮೂಡಿಸುವ ನಿಟ್ಟಿನಲ್ಲಿ ಈ ಯೋಜನೆ ಕೈಗೊಳ್ಳಲಾಗಿದೆ ಎಂದರು.

Please follow and like us:

Related posts

Leave a Comment