ಇವರೇ ನೋಡಿ ಇಂದು ಪಟ್ಟಕ್ಕೇರಲಿರುವ ಹೊಸ ಮಿನಿಸ್ಟರ್ಸ್

ಬೆಂಗಳೂರು, ಡಿ.22- ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಮೊದಲ ಹಂತದ ಸಚಿವ ಸಂಪುಟ ಪುನರ್‍ರಚನೆ ಇಂದು ನಡೆಯುತ್ತಿದ್ದು, ಇಬ್ಬರು ಸಚಿವರನ್ನು ಕೈ ಬಿಡಲಾಗುತ್ತಿದ್ದು, ಕಾಂಗ್ರೆಸ್‍ನ 8ಮಂದಿ ನೂತನ ಸಚಿವರಾಗಿ ಸಂಜೆ 5.20ಕ್ಕೆ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ರಾಜಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ರಾಜ್ಯಪಾಲ ವಜುಭಾಯಿ ವಾಲ ಅವರು ನೂತನ ಸಚಿವರಿಗೆ ಪ್ರಮಾಣವಚನ ಬೋಧಿಸಲಿದ್ದಾರೆ. ಕಾಂಗ್ರೆಸ್‍ನ ಕುಂದಗೋಳ ಕ್ಷೇತ್ರದ ಶಾಸಕ ಚನ್ನಬಸಪ್ಪ ಸತ್ಯಪ್ಪ ಶಿವಳ್ಳಿ, ಹೊಸಕೋಟೆ ಕ್ಷೇತ್ರದ ಎಂ.ಟಿ.ಬಿ.ನಾಗರಾಜ್, ಸಂಡೂರು ಕ್ಷೇತ್ರದ ಇ.ತುಕಾರಾಮ್, ಬಬಲೇಶ್ವರ ಕ್ಷೇತ್ರದ ಮಲ್ಲನಗೌಡ ಬಸವನಗೌಡ ಪಾಟೀಲ್, ಹೂವಿನಹಡಗಲಿ ಕ್ಷೇತ್ರದ ಪಿ.ಟಿ.ಪರಮೇಶ್ವರ್‍ನಾಯಕ್, ಯಮಕನಮರಡಿ ಕ್ಷೇತ್ರದ ಸತೀಶ್‍ಜಾರಕಿಹೊಳಿ, ಬೀದರ್ ಉತ್ತರ ಕ್ಷೇತ್ರದ ರಹೀಮ್‍ಖಾನ್ ಮತ್ತು ವಿಧಾನಪರಿಷತ್ ಸದಸ್ಯ ಆರ್.ಬಿ.ತಿಮ್ಮಾಪುರ್ ಅವರು ಇಂದು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಹಾಲಿ ಸಚಿವರಾದ ಆರ್.ಶಂಕರ್ ಮತ್ತು ರಮೇಶ್‍ಜಾರಕಿಹೊಳಿ ಅವರನ್ನು ಸಂಪುಟದಿಂದ ಕೈ ಬಿಡಲಾಗುತ್ತಿದೆ. ಇಂದು ಬೆಳಗ್ಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜಭವನಕ್ಕೆ ತೆರಳಿ ನೂತನ ಸಚಿವರ ಪಟ್ಟಿ ಮತ್ತು ಸಂಪುಟದಿಂದ ಕೈ ಬಿಡುತ್ತಿರುವ ಹೆಸರುಗಳನ್ನು ರಾಜ್ಯಪಾಲರಿಗೆ ಪತ್ರ ಮುಖೇನ ಮಾಹಿತಿ ನೀಡಲಿದ್ದಾರೆ.

ನಿನ್ನೆ ತಡರಾತ್ರಿವರೆಗೂ ದೆಹಲಿಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್, ಕಾರ್ಯಾಧ್ಯಕ್ಷ ಈಶ್ವರ್‍ಖಂಡ್ರೆ ಅವರು ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಮತ್ತು ರಾಜ್ಯ ಕಾಂಗ್ರೆಸ್‍ನ ಉಸ್ತುವಾರಿ ಹಾಗೂ ಎಐಸಿಸಿ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯ ಬಳಿಕ ಸಂಪುಟ ವಿಸ್ತರಣೆ ಅಂತಿಮಗೊಂಡಿದೆ.

Please follow and like us:

Related posts

Leave a Comment