ಲಾಕ್‌ಡೌನ್ ಮೇ.3ರ ವರೆಗೆ ವಿಸ್ತರಣೆ

ಬೆಂಗಳೂರು:ಬೆAಗಳೂರಿನ ಪಾದರಾಯನಪುರದಲ್ಲಿ ನಡೆದ ಗಲಾಟೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದೆ.
ಸದ್ಯ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಬಗ್ಗೆ ಪ್ರಮುಖವಾಗಿ ಚರ್ಚೆ ನಡೆದಿದ್ದು, ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡುವವರ ವಿರುದ್ಧ ಕೇರಳ, ಉತ್ತರ ಪ್ರದೇಶ ಮಾದರಿಯಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲು ಸುಗ್ರೀವಾಜ್ಞೆ ಜಾರಿಗೆ ತೀರ್ಮಾನಿಸಲಾಯಿತು.
ಇನ್ನು ಸಂಪುಟ ಸಭೆ ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಪಾದರಾಯನಪುರ ಸೇರಿದಂತೆ ರಾಜ್ಯದ ವಿವಿಧೆಡೆ ವೈದ್ಯರು, ಆಶಾ ಕಾರ್ಯಕರ್ತರು, ಅಧಿಕಾರಿಗಳ ಮೇಲೆ ಹಲ್ಲೆಗಳು ಹೆಚ್ಚುತ್ತಿರುವುದರಿಂದ ಎಚ್ಚೆತ್ತುಕೊಂಡಿರುವ ಸರ್ಕಾರ, ಇದೀಗ ಬಿಗಿ ನಿಲುವು ತರಲು ಮುಂದಾಗಿದೆ. ಇಂದು ನಡೆದ ಸಂಪುಟ ಸಭೆಯಲ್ಲಿ ಕೇರಳ ಮತ್ತು ಉತ್ತರ ಪ್ರದೇಶ ಮಾದರಿಯಲ್ಲಿ ರಾಜ್ಯ ಎಪಿಡಮಿಕ್ ಕಾಯ್ದೆ ಜಾರಿಗೊಳಿಸಲು ಚರ್ಚಿಸಲಾಗಿದೆ. ಆಶಾ ಕಾರ್ಯಕರ್ತರು, ವೈದ್ಯರು, ಅಧಿಕಾರಿಗಳ ಮೇಲೆ ಹಲ್ಲೆ ಮಾಡುತ್ತಿದ್ದು, ಉದ್ದೇಶಪೂರ್ವಕವಾಗಿ ಸೋಂಕು ಹಬ್ಬಿಸುವುದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಸುಗ್ರೀವಾಜ್ಞೆ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದರು.
ಇದೇ ವೇಳೆ ಈ ಹಿಂದೆ ನಿರ್ಧರಿಸಲಾಗಿದ್ದ ವಿವಿಧ ೪೬ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದಕ್ಕೆ ಅನುಮೋದನೆ ನೀಡಲಾಗಿದೆ. ಇದರ ಜೊತೆಗೆ ಟಿಪ್ಪು ಗಲಾಟೆ, ಕನ್ನಡ ಪರ ಹೋರಾಟಗಾರರು, ಕಾವೇರಿ ಗಲಾಟೆ, ರೈತರ ಗಲಾಟೆಯಲ್ಲಿ ಭಾಗಿಯಾದವರ ವಿರುದ್ಧದ ೧೫೨ ಪ್ರಕರಣಗಳನ್ನು ಹಿಂಪಡೆಯಲು ತೀರ್ಮಾನಿಸಲಾಗಿದೆ.
ಜೊತೆಗೆ ಲಾಕ್‌ಡೌನ್ ಮೇ ೩ ರ ವರೆಗೆ ವಿಸ್ತರಣೆ ಮಾಡುವುದು,ಸಿಎಂ ಅನಿಲ ಭಾಗ್ಯ ಯೋಜನೆಯಡಿ ಮೂರು ತಿಂಗಳು ಉಚಿತ ಸಿಲಿಂಡರ್ ಸರಬರಾಜು ಮಾಡುವುದು, ಸನ್ನಡತೆ ಆಧಾರದಲ್ಲಿ ಕೈದಿಗಳ ಅವಧಿಪೂರ್ವ ಬಿಡುಗಡೆ ಸಂಬAಧ ನಿಯಮ ತಿದ್ದುಪಡಿ, ವೈದ್ಯಕೀಯ ಶಿಕ್ಷಣ ಇಲಾಖೆಯಡಿ ಬರುವ ಸಿಬ್ಬಂದಿಗೆ ಏಳನೇ ವೇತನ ಆಯೋಗದಡಿ ಪರಿಷ್ಕೃತ ವೇತನ, ಚಿಕ್ಕಮಗಳೂರಿಗೆ ೪೩೮.೭೫ ಕೋಟಿ ರೂ. ವೆಚ್ಚದಲ್ಲಿ ಹೊಸ ಮೆಡಿಕಲ್ ಕಾಲೇಜು ಸ್ಥಾಪನೆ ಸೇರಿದಂತೆ ಇತರೆ ಕೆಲ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment