ನಿಮಗೆ ಅರ್ಥ ಆಗಲ್ವಾ?..ಜನ ನೀರು ಬಿಟ್ಟು ಮೂತ್ರ ಕುಡಿಯಬೇಕಾ?..

ಕೊಪ್ಪಳ:ಕೊಪ್ಪಳ ಬರದ ನಾಡು, ಬಿಸಿಲ ನಾಡು ಅನ್ವರ್ಥವನ್ನು ಹೊಂದಿರುವುದು ಹೊಸದೇನಲ್ಲ. ಕೊರೊನಾದ ಈ ದಿನಗಳಲ್ಲಿ ಎಲ್ಲರ ಗಮನ ಮಹಾಮಾರಿ ವೈರಸ್ ನಿಯಂತ್ರಣ ಮಟ್ಟ ಹಾಕುವುದರ ಕಡೆಗಿದೆ.
ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳ ಪ್ರತಿ ಬೇಸಿಗೆಯ ಬವಣೆ ಕುಡಿಯುವ ನೀರಿನ ಸಮಸ್ಯೆಯತ್ತ ಚಿತ್ತವನ್ನೇ ಹರಿಸಲಾಗಿಲ್ಲ. ಇದುವರೆಗೂ ಜನ ಮನೆ ಬಿಟ್ಟು ಹೊರಗಡೆ ಬಂದದ್ದು ಕಡಿಮೆ.ಕೆರೆ-ಕಟ್ಟೆ-ಬಾವಿಗಳಲ್ಲಿ ಅಳಿದುಳಿದ ನೀರಿನಲ್ಲಿ ಹೇಗೋ ಇದುವರೆಗೂ ದಿನಗಳನ್ನು ದೂಡಿದರು. ಈಗ ಅವುಗಳು ಸಹ ಬತ್ತಿ ಹೋಗಿವೆ. ಬೇಸಿಗೆಯ ಹೊಡೆತಕ್ಕೆ ಹಾಕಲಾಗಿದ್ದ ಬೋರ್‌ವೆಲ್‌ಗಳೂ ಚಾರ್ಜ್ ಆಗುತ್ತಿಲ್ಲ. ಹಾಗಾಗಿ ಸ್ಥಳೀಯ ಸಂಸ್ಥೆ ಪೂರೈಸುವ ನೀರಿನ ಹಾದಿ ಕಾಯುವುದು ಅನಿವಾರ್ಯವಾಗಿದೆ.
ಸದ್ಯ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಮಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆ ಗ್ರಾಮಸ್ಥರು ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಹಾಗೂ ಅಧಿಕಾರಿಗಳಿಗೆ ನೀರಿನ ಸಮಸ್ಯೆಯನ್ನು ಗಮನಕ್ಕೆ ತಂದು ಬಗೆಹರಿಸಲು ಮನವಿ ಮಾಡಿದ್ದರು.
ಇನ್ನು ಎರಡು ದಿನ ಕಳೆದರೂ ನೀರಿನ ಸಮಸ್ಯೆ ನೀಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನೇರ ಗ್ರಾಮ ಪಂಚಾಯತಿಗೆ ಮುತ್ತಿಗೆ ಹಾಕಿ, ಒಳಗಿದ್ದ ಅಧಿಕಾರಿಗಳು ಹಾಗೂ ಚುನಾಯಿತ ಜನಪ್ರತಿನಿಧಿಗಳನ್ನು ಕೂಡಿ ಹಾಕಿದರು. ಇದ್ದ ಏಕೈಕ ಶುದ್ಧ ಕುಡಿಯುವ ನೀರಿನ ಘಟಕವೂ ದುರಸ್ತಿಗೆ ಬಂದಿದೆ. ಅದು ಸರಿ ಇದ್ದಿದ್ದರೆ ಸಮಸ್ಯೆ ಕೊಂಚಮಟ್ಟಿಗಾದರೂ ಬಗೆಹರಿಯುತ್ತಿತ್ತು.ಇದನ್ನೆಲ್ಲ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಎಮ್ಮೆ ಚರ್ಮದವರಾದ ನಿಮಗೆ ಅರ್ಥ ಆಗಲ್ವಾ?ಇಲ್ಲಿನ ಜನ ನೀರು ಬಿಟ್ಟು ಮೂತ್ರ ಕುಡಿಯಬೇಕಾ? ಎಂದು ಜಮಾಯಿಸಿದ್ದ ಮಹಿಳಾಮಣಿಗಳು ಆವಾಜ್ ಹಾಕಿದರು.
ಇದೇ ವೇಳೆ ಗ್ರಾಮಸ್ಥರ ಏಕಾಏಕಿ ಮುತ್ತಿಗೆಯಿಂದ ಕಕ್ಕಾಬಿಕ್ಕಿಯಾದ ಅಧಿಕಾರಿಗಳು ಮೂಕಪ್ರೇಕ್ಷಕರಂತೆ ಕುಳಿತಿದ್ದರು.ಕೊನೆಗೆ ಮತ್ತೇರಡು ದಿನ ಗಡುವು ನೀಡಿರುವ ಗ್ರಾಮಸ್ಥರು,ಗಡುವಿನ ಒಳಗಾಗಿ ನೀರು ಪೂರೈಕೆಯಾಗದಿದ್ದರೆ ಪ್ರತಿಭಟನೆ ಸ್ವರೂಪ ಮತ್ತಷ್ಟು ಕಠಿಣವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

ನಾಭೀರಾಜ್ ದಸ್ತೇನವರ್ ಎಕ್ಸ್ ಪ್ರೆಸ್ ಟಿವಿ ಕೊಪ್ಪಳ

Please follow and like us:

Related posts

Leave a Comment